×
Ad

ಕ್ರೀಡೆಗಳು ಮಾನಸಿಕ-ದೈಹಿಕ ಆರೋಗ್ಯಕ್ಕೆ ಪೂರಕ : ರಾಜಶೇಖರ್ ಶಂಬಾಲ್

Update: 2025-05-23 12:14 IST

ಬೆಂಗಳೂರು: ಕ್ರೀಡೆಗಳು ಮಾನಸಿಕ ಆರೋಗ್ಯ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದು ಮಾಜಿ ಕರ್ನಾಟಕ ರಣಜಿ ಟ್ರೋಫಿ ಆಟಗಾರ ರಾಜಶೇಖರ್ ಶಂಬಾಲ್ ಹೇಳಿದರು.

ನಗರದ ಹೂಡಿಯಲ್ಲಿರುವ ಗೋಪಾಲನ್ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಅಂಡ್ ಪ್ಲಾನಿಂಗ್ ನಲ್ಲಿ ನಾಲ್ಕು ದಿನಗಳ ಕಾಲ ವಿವಿಧ ಆರ್ಕಿಟೆಕ್ಚರ್‌ ಕಾಲೇಜುಗಳ ನಡುವೆ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ʼಉದ್ಯಥಮ 2025' ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗೋಪಾಲನ್ ಆರ್ಕಿಟೆಕ್ಚರ್ ಶಾಲೆಯು ಕ್ರೀಡಾ ಕಾರ್ಯಕ್ರಮವನ್ನು ಆಯೋಜಿಸಿರುವುದು ಜೊತೆಗೆ ವಾಸ್ತುಶಿಲ್ಪ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಆಸಕ್ತಿ ತೋರುತ್ತಿರುವುದು ನಿಜಕ್ಕೂ ಸಂತಸದ ವಿಷಯ ಎಂದರು.

ಈ ವೇಳೆ ಗೋಪಾಲನ್ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಅಂಡ್ ಪ್ಲಾನಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ವಿಮಲಾ ಸ್ವಾಮಿ ಮಾತನಾಡಿ, ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯೂ ಅಷ್ಟೇ ಮುಖ್ಯ. ಸಂಸ್ಥೆಯು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳನ್ನು ಸದಾ ಪ್ರೋತ್ಸಾಹಿಸುತ್ತದೆ ಎಂದು ನುಡಿದರು.

ಈ ಕುರಿತು ಪ್ರೊ. ಕೃಷ್ಣಮೂರ್ತಿ ಅವರು ಮಾತನಾಡಿ, ಈ ಕಾರ್ಯಕ್ರಮವನ್ನು ಸತತ 3 ವರ್ಷಗಳಿಂದ ಆಚರಿಸಿಕೊಂಡು ಬಂದಿದ್ದೇವೆ. ಇದು ವಿದ್ಯಾರ್ಥಿಗಳ ಅಭಿವೃದ್ಧಿಗೆ ಸಹಾಯವಾಗಿದೆ ಎಂದರು.

ಗೋಪಾಲನ್ ಫೌಂಡೇಶನ್ ಪ್ರಧಾನ ಕಾರ್ಯದರ್ಶಿ ಡಾ.ಪ್ರಭಾಕರ್.ಸಿ. ಮತ್ತು ನಿರ್ದೇಶಕಿ ಸುನೀತಾ ಪ್ರಭಾಕರ್ ಅವರು ಕಾರ್ಯಕ್ರಮದ ಕುರಿತು ಸಂತೋಷವನ್ನು ವ್ಯಕ್ತಪಡಿಸಿದರು.

ಕ್ರೀಡಾ ಅಕಾಡೆಮಿ ವ್ಯವಸ್ಥಾಪಕ ಗಿರೀಶ್, ನಾಗರಾಜ್ ಮತ್ತು ಇತರ ತೀರ್ಪುಗಾರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಈ ಆರ್ಕಿಟೆಕ್ಚರ್ ವಿದ್ಯಾರ್ಥಿಗಳ ಅಂತರ ಕಾಲೇಜು ಕ್ರೀಡಾಕೂಟ ಮತ್ತು ಸಾಂಸ್ಕೃತಿಕ‌ ಕಾರ್ಯಕ್ರಮಕ್ಕೆ ಕರ್ನಾಟಕದಾದ್ಯಂತ 18 ಕಾಲೇಜುಗಳಿಂದ 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕ್ರಿಕೆಟ್, ಫುಟ್ಬಾಲ್, ಬ್ಯಾಡ್ಮಿಂಟನ್, ಈಜು, ಅಥ್ಲೆಟಿಕ್ಸ್, ಚೆಸ್ ನಂತಹ ಕ್ರೀಡೆಗಳಲ್ಲಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಾದ ಫ್ಯಾಷನ್ ಶೋ, ನೃತ್ಯ ಮತ್ತು ಗಾಯನದಂತಹ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.

 

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News