×
Ad

ಬೆಂಗಳೂರು | ಮಹಿಳಾ ಕಾನ್‍ಸ್ಟೇಬಲ್‍ಗೆ ಹಲ್ಲೆ: ಹೆಡ್‍ಕಾನ್‍ಸ್ಟೇಬಲ್ ವಿರುದ್ಧ ಎಫ್‍ಐಆರ್

Update: 2025-06-12 23:01 IST

ಸಾಂದರ್ಭಿಕ ಚಿತ್ರ

ಬೆಂಗಳೂರು : ಉಪ್ಪಾರಪೇಟೆ ಪೊಲೀಸ್ ಠಾಣೆಯ ಮಹಿಳಾ ಕಾನ್‍ಸ್ಟೇಬಲ್‍ಗೆ ಹಲ್ಲೆ ನಡೆಸಿದ ಆರೋಪದಡಿ ಅದೇ ಠಾಣೆಯ ಹೆಡ್‍ಕಾನ್‍ಸ್ಟೇಬಲ್ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

ಕಾನ್‍ಸ್ಟೇಬಲ್ ರೇಣುಕಾ ಅವರು ನೀಡಿದ ದೂರಿನನ್ವಯ ಹೆಡ್‍ಕಾನ್‍ಸ್ಟೇಬಲ್ ಬಿ.ಜಿ. ಗೋವಿಂದರಾಜು ಅವರ ವಿರುದ್ಧ ಉಪ್ಪಾರಪೇಟೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕ್ರಮ ಜರುಗಿಸಿರುವುದಾಗಿದೆ ಎಂದು ತಿಳಿಸಿದ್ದಾರೆ.

ಜೂ.10ರಂದು ರಾತ್ರಿ ಠಾಣೆಯ ಕಂಪ್ಯೂಟರ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಮನೆ ಬಿಟ್ಟು ಬಂದಿದ್ದ ಇಬ್ಬರು ಹೆಣ್ಣು ಮಕ್ಕಳನ್ನು ನೋಡಿಕೊಳ್ಳುವಂತೆ, ಊಟ ನೀಡುವಂತೆ ಠಾಣೆಯ ಎಎಸ್ಸೈ ತಿಮ್ಮೇಗೌಡ ಸೂಚಿಸಿದ್ದರು. ತಡರಾತ್ರಿ 2.30ರ ಸುಮಾರಿಗೆ ಆ ಮಕ್ಕಳನ್ನು ತನಿಖಾ ಸಹಾಯಕರ ಕೊಠಡಿಗೆ ಕರೆದೊಯ್ದು ಊಟ ಮಾಡಿಸುತ್ತಿದ್ದೆ. ಅದೇ ಸಮಯದಲ್ಲಿ ಪ್ರವೇಶ ದ್ವಾರದ ರಿಸಪ್ಶನ್ ಟೇಬಲ್ ಮೇಲೆ ಕುಳಿತಿದ್ದ ಹೆಡ್‍ಕಾನ್‍ಸ್ಟೇಬಲ್ ಬಿ.ಜಿ. ಗೋವಿಂದರಾಜು, ಹೆಣ್ಣು ಮಕ್ಕಳ ಕುರಿತು ಕೆಟ್ಟದಾಗಿ ಮಾತನಾಡುತ್ತಿದ್ದರು. ಅದನ್ನು ಕೇಳಿಸಿಕೊಂಡ ಹೆಣ್ಣು ಮಕ್ಕಳು, ನನಗೆ ಮಾಹಿತಿ ನೀಡಿದ್ದರು. ಆಗ ‘ಯಾಕೆ ಸರ್ ಹೆಣ್ಣು ಮಕ್ಕಳ ಕುರಿತು ಕೆಟ್ಟದಾಗಿ ಮಾತನಾಡುತ್ತಿದ್ದೀರಿ? ಇಲ್ಲಿ ಚಿಕ್ಕ ಮಕ್ಕಳು ಇದ್ದಾರೆ’ ಎಂದು ಪ್ರಶ್ನಿಸಿದ್ದೆ. ಆಗ ಗೋವಿಂದರಾಜು, ನನಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು. ಈ ವೇಳೆ ನನಗೆ ಶೂ ಧರಿಸಿದ್ದ ಕಾಲಿನಿಂದ 3-4 ಬಾರಿ ಒದ್ದಿದ್ದಾರೆ. ಆಗ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಎಎಸ್ಸೈ ತಿಮ್ಮೇಗೌಡ, ಕಾನ್‍ಸ್ಟೇಬಲ್‍ಗಳಾದ ಬಸಪ್ಪ, ಮಹೇಶ್ ಬಿಡಿಸಲು ಬಂದಿದ್ದರು. ಆಗಲೂ ನಿಂದಿಸಿ ಒದ್ದಿದ್ದಾರೆ ಎಂದು ರೇಣುಕಾ ಎಫ್‍ಐಆರ್‍ನಲ್ಲಿ ಉಲ್ಲೇಖಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News