ಅನುದಾನಿತ ಶಾಲಾ ಶಿಕ್ಷಕರ ನಿವೃತ್ತಿ ವೇತನ ಪರಿಷ್ಕರಣೆ
ಸಾಂದರ್ಭಿಕ ಚಿತ್ರ
ಬೆಂಗಳೂರು : ರಾಜ್ಯ ಸರಕಾರವು ಅನುದಾನಿತ ಪೂರ್ವ ಪ್ರಾಥಮಿಕ ಶಾಲಾ ಶಿಕ್ಷಕರು ಸೇರಿ ಸಿಬ್ಬಂದಿಗಳಿಗೆ ನಿವೃತ್ತಿ ವೇತನವನ್ನು ಪರಿಷ್ಕರಣೆ ಮಾಡಿದ್ದು, ಶಾಲಾ ಶಿಕ್ಷಕರ ನಿವೃತ್ತಿ ವೇತನವನ್ನು 19 ಸಾವಿರ ರೂ.ಗಳಿಗೆ ಹಾಗೂ ಸಿಬ್ಬಂದಿಗಳ ನಿವೃತ್ತಿ ವೇತನವನ್ನು 15 ಸಾವಿರ ರೂ.ಗಳಿಗೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.
ಗುರುವಾರ ಶಾಲಾ ಶಿಕ್ಷಣ ಇಲಾಖೆಯು ಆದೇಶ ಹೊರಡಿಸಿದ್ದು, ಕರ್ನಾಟಕ ರಾಜ್ಯ ಸರಕಾರಿ ಅನುದಾನಿತ ಪೂರ್ವ ಪ್ರಾಥಮಿಕ ಶಾಲಾ ಸಿಬ್ಬಂದಿ ಸಂಘ(ರಿ)ವು ಸರಕಾರಕ್ಕೆ ಸಲ್ಲಿಸಿದ ಮನವಿಯ ಅಂಶಗಳನ್ನು ಪರಿಶೀಲಿಸಿ ನಿಯಮಾನುಸಾರ ಸೂಕ್ತ ಕ್ರಮಕೈಗೊಳ್ಳಲಾಗಿದೆ. 2018ರಿಂದ ಅನುದಾನಿತ ಪೂರ್ವ ಪ್ರಾಥಮಿಕ ಶಾಲೆಗಳ ನಿವೃತ್ತ ಶಿಕ್ಷಕಿಯರಿಗೆ 11,500 ರೂ. ಮತ್ತು ಸಹಾಯಕಿಯರಿಗೆ 9 ಸಾವಿರ ರೂ.ಗಳಂತೆ ಮಾಸಿಕ ನಿವೃತ್ತಿ ವೇತನವನ್ನು ನೀಡಲಾಗುತ್ತಿದೆ ಎಂದು ತಿಳಿಸಿದೆ.
1984ರ ಎ.1ರ ಮುಂಚಿತವಾಗಿ ಅನುದಾನಕ್ಕೆ ಒಳಪಟ್ಟಿರುವ ಅನುದಾನಿತ ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ನಿವೃತ್ತರಾಗಿರುವ ಶಾಲಾ ಶಿಕ್ಷಕರ ಮಾಸಿಕ ಪಿಂಚಣಿಯನ್ನು 11,500 ರೂ.ಗಳಿಂದ 19 ಸಾವಿರ ರೂ.ಗಳಿಗೆ ಹಾಗೂ ಶಾಲಾ ಸಹಾಯಕರ ಮಾಸಿಕ ಪಿಂಚಣಿಯನ್ನು 9 ಸಾವಿರ ರೂ.ಗಳಿಂದ 15 ಸಾವಿರ ರೂ.ಗಳ ವರೆಗೆ ಪರಿಷ್ಕರಿಸಿ ಆದೇಶ ಹೊರಡಿಸಿದೆ.