×
Ad

ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಸರಕಾರದೊಂದಿಗೆ ಸಾರ್ವಜನಿಕರೂ ಕೈ ಜೋಡಿಸಬೇಕು : ಕಾರ್ಮಿಕ ಸಚಿವ ಸಂತೋಷ್‌ ಲಾಡ್

Update: 2025-06-12 23:13 IST

ಬೆಂಗಳೂರು : ಬಾಲಕಾರ್ಮಿಕ ಪದ್ದತಿಯನ್ನು ತಡೆಯಲು ಸರಕಾರವು ಹಲವು ಕ್ರಮ ಕೈಗೊಂಡಿದ್ದು, ಸರಕಾರದೊಂದಿಗೆ ಸಾರ್ವಜನಿಕರು ಕೈ ಜೋಡಿಸಿದರೆ ಮಾತ್ರ ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡಲು ಸಾಧ್ಯ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.

ಗುರುವಾರ ನಗರದಲ್ಲಿ ಕಾರ್ಮಿಕ ಇಲಾಖೆ ವತಿಯಿಂದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ಅಂಗವಾಗಿ ಆಯೋಜಿಸಿದ್ದ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು ಕುಟುಂಬದಿಂದಲೇ ಅರಿವು ಮೂಡಿಸಬೇಕು. ಸಾರ್ವಜನಿಕರು ಈ ಬಗ್ಗೆ ಜಾಗೃತರಾಗಬೇಕು ಎಂದರು.

ಮಕ್ಕಳನ್ನು ದುಡಿಸಿಕೊಳ್ಳುವುದು ಅಪರಾಧವಾಗಿದ್ದು, ಯಾರೇ ಬಾಲಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯಿದೆಯನ್ನು ಉಲ್ಲಂಘಿಸಿದರೆ ಆರು ತಿಂಗಳಿಂದ ಎರಡು ವರ್ಷದವರೆಗೆ ಶಿಕ್ಷೆ, ದಂಡ ವಿಧಿಸಲಾಗುತ್ತದೆ. ಹಾಗೆಯೇ ಪೋಷಕರಿಗೂ ಶಿಕ್ಷೆ ಆಗಲಿದೆ. ಭಯ ಮೂಡಿಸುವುದು ಇಲಾಖೆಯ ಉದ್ದೇಶವಲ್ಲ. ಬಾಲಕಾರ್ಮಿಕ ಪದ್ಧತಿ ಬಗ್ಗೆ ಅರಿವು ಮೂಡಿಸಬೇಕು ಎಂದು ಅವರು ತಿಳಿಸಿದರು.

ರಾಜ್ಯದ 22 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ, ಜಿಲ್ಲಾಧಿಕಾರಿ, ಎಸ್‍ಪಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜೊತೆ ಸಭೆ ಮಾಡಿ ಮಕ್ಕಳು ಕಾರ್ಮಿಕರಾಗುವುದನ್ನು ತಡೆಯಲು ಕ್ರಮ ಕೈಗೊಂಡಿದ್ದೇವೆ. ಡಿಸಿ, ಸಿಇಒ, ಎಸ್ಪಿಗಳು ಮುತುವರ್ಜಿ ವಹಿಸಿದರೆ ಬಾಲಕಾರ್ಮಿಕ ನಿರ್ಮೂಲನೆ ಸುಲಭವಾಗಲಿದೆ. ವರ್ಷಕ್ಕೆ ಒಂದು ಬಾರಿ ದಿನಾಚರಣೆ ಮಾಡಿದರೆ ಸಾಲದು. ಎರಡು ತಿಂಗಳಿಗೆ ಒಂದು ಬಾರಿ ಈ ಸಂಬಂಧ ಅರಿವು ಮೂಡಿಸುವ ಕೆಲಸ ಆಗಬೇಕು ಎಂದು ಅವರು ಹೇಳಿದರು.

ರಾಷ್ಟ್ರೀಯ ಹೆದ್ದಾರಿ ಬದಿಗಳಲ್ಲಿನ ಡಾಬಾ, ಹೋಟೆಲ್, ಸಣ್ಣ ಸಣ್ಣ ಮೆಕ್ಯಾನಿಕ್ ಶಾಪ್‍ಗಳಲ್ಲಿ ಮಕ್ಕಳು ಕೆಲಸ ಮಾಡುತ್ತಾರೆ. ಅವರು ಕೆಲಸ ಬಿಟ್ಟು ಶಾಲೆಗಳಿಗೆ ಹೋಗುವಂತಾಗಬೇಕು. ಬಾಲಕಾರ್ಮಿಕರನ್ನು ದುಡಿಮೆಗೆ ನೇಮಿಸಿಕೊಂಡಿದ್ದು, ಗಮನಕ್ಕೆ ಬಂದರೆ ಕೂಡಲೇ ಸಹಾಯವಾಣಿ 1098ಗೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದು ಸಚಿವರು ಹೇಳಿದರು.

ನಟಿ ಅದಿತಿ ಪ್ರಭುದೇವ ಮಾತನಾಡಿ, ಬಾಲಕಾರ್ಮಿಕ ಪದ್ಧತಿಯನ್ನು ತಡೆಯುವುದು ಕೇವಲ ಸರಕಾರದ ಜವಾಬ್ದಾರಿಯಲ್ಲ, ನಮ್ಮೆಲ್ಲರ ಜವಾಬ್ದಾರಿ ಆಗಿದೆ. ಬಡತನಕ್ಕೂ ಬಾಲಕಾರ್ಮಿಕ ಪದ್ಧತಿಗೂ ನಂಟಿದೆ. ಆದರೆ ಅದನ್ನು ಹೋಗಲಾಡಿಸಬಹುದು ಎಂದರು.

ಮಕ್ಕಳನ್ನು ಓದಿಸಲಾಗದ ಪರಿಸ್ಥಿತಿಯಲ್ಲಿ ಎಷ್ಟೋ ಪೋಷಕರು ಇದ್ದಾರೆ. ಅಂತಹವರಿಗೊಂದು ನಾವು ಸಣ್ಣ ಸಹಾಯ ಮಾಡಿದರೆ ಎಷ್ಟೋ ಮಕ್ಕಳು ಬಾಲಕಾರ್ಮಿಕರಾಗುವುದು ತಪ್ಪಲಿದೆ. ಒಳ್ಳೆಯ ಶಿಕ್ಷಣ ಸಿಕ್ಕರೆ ಮಕ್ಕಳು ಉತ್ತಮ ಪ್ರಜೆ ಆಗುತ್ತಾರೆ. ನಮ್ಮ ಸುತ್ತಮುತ್ತ ಬಾಲಕಾರ್ಮಿಕರು ಕಂಡು ಬಂದರೆ ನಮ್ಮ ಜವಾಬ್ದಾರಿ ನಿರ್ವಹಿಸೋಣ ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ಪ್ರಮಾಣ ಸ್ವೀಕರಿಸಲಾಯಿತು. ಇದೇ ವೇಳೆ ನಗರದ ಎಂಜಿ ರಸ್ತೆಯ ಗಾಂಧಿ ಉದ್ಯಾನದಿಂದ ಕೆ.ಆರ್. ವೃತ್ತದವರೆಗೆ ಜಾಥಾ ಹಮ್ಮಿಕೊಳ್ಳಲಾಗಿತ್ತು. ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ. ಜಗದೀಶ, ಕಾರ್ಮಿಕ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ಡಾ.ಎನ್.ವಿ.ಪ್ರಸಾದ್, ಕಾರ್ಮಿಕ ಇಲಾಖೆಯ ಆಯುಕ್ತ ಡಾ.ಎಚ್.ಎನ್ ಗೋಪಾಲಕೃಷ್ಣ, ಸೇರಿದಂತೆ ಹಿರಿಯ ಅಧಿಕಾರಿಗಳು, ವಿವಿಧ ಶಾಲಾ ಮಕ್ಕಳು ಇದ್ದರು.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News