ʼಶ್ರವಣ ಸಂಜೀವಿನಿ ಯೋಜನೆʼ ಅನುಷ್ಠಾನಕ್ಕೆ ಅನುಮೋದನೆ ನೀಡಿದ ಸರಕಾರ
ಬೆಂಗಳೂರು : ಪ್ರಸಕ್ತ ವರ್ಷದ ಆಯವ್ಯಯದಲ್ಲಿ ತಿಳಿಸಿರುವಂತೆ ರಾಜ್ಯದಲ್ಲಿ ಶ್ರವಣ ಸಂಜೀವಿನಿ ಯೋಜನೆಯನ್ನು ಮರು ವಿನ್ಯಾಸಗೊಳಿಸಿ, ಅನುಷ್ಠಾನಗೊಳಿಸಲು ರಾಜ್ಯ ಸರಕಾರ ಅನುಮೋದನೆ ನೀಡಿ ಆದೇಶ ಹೊರಡಿಸಿದೆ.
ಶ್ರವಣ ಸಂಜೀವಿನಿ ಯೋಜನೆಯಡಿ ಮಕ್ಕಳಲ್ಲಿ ಕಂಡುಬರುವ ಶ್ರವಣ ದೋಷವನ್ನು ಆರಂಭದಲ್ಲಿಯೇ ಗುರುತಿಸಿ ಕಾಕ್ಲಿಯಾರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ಹಾಗೂ ಇಂಪ್ಲಾಂಟ್‍ಗಳ ಬಿಡಿ ಭಾಗಗಳ ನಿರ್ವಹಣೆ, ದುರಸ್ತಿ ಮತ್ತು ಬದಲಾವಣೆ ಮಾಡಲು 12 ಕೋಟಿ ರೂ.ಗಳನ್ನು ಪ್ರಸಕ್ತ ವರ್ಷದ ಬಜೆಟ್‍ನಲ್ಲಿ ಒದಗಿಸಲಾಗಿದೆ.
ಎರಡು ವರ್ಷದೊಳಗಿನ ಮಕ್ಕಳಿಗೆ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಗಳನ್ನು ನಿರ್ಬಂಧಿಸಲಾಗಿದ್ದು, ಎರಡು ವರ್ಷದ ಮೇಲ್ಪಟ್ಟ ಮಕ್ಕಳಿಗೆ ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗುತ್ತದೆ. ಸಾಮಾನ್ಯವಾಗಿ ಕಾಕ್ಲಿಯಾರ್ ಇಂಪ್ಲಾಂಟ್ ಸರಬುರಾಜುದಾರರ ಕನಿಷ್ಠ ಖಾತರಿ ಅವಧಿಯು ಸುಮಾರು 4 ವರ್ಷಗಳ ಇರಬೇಕಾಗಿರುತ್ತದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಒಂದು ವೇಳೆ ತಜ್ಞರ ಶಿಫಾರಿಸ್ಸಿನಂತೆ 18 ತಿಂಗಳ ವಯಸ್ಸಿನೊಳಗಿನ ಮಕ್ಕಳಿಗೆ ದ್ವಿಪಕ್ಷೀಯ ಕಾಕ್ಲಿಯರ್ ಇಂಪ್ಲಾಂಟ್‍ಗಳನ್ನು ಒದಗಿಸಲು ಮಗುವಿನ ಕುಟುಂಬವು ಇಚ್ಚಿಸಿದಲ್ಲಿ, ಕಾಕ್ಲಿಯರ್ ಇಂಪ್ಲಾಂಟ್‍ಗಳ ಹೆಚ್ಚುವರಿ ವೆಚ್ಚವನ್ನು ಕುಟುಂಬವೇ ಭರಿಸುವ ಭರಿಸಬೇಕು. ಆದರೆ ಹೆಚ್ಚುವರಿ ಶಸ್ತ್ರಚಿಕಿತ್ಸೆಯ ವೆಚ್ಚವನ್ನು ಸರಕಾರವು ನೀಡಲಿದೆ ಎಂದು ತಿಳಿಸಿದೆ.