×
Ad

ಕಾಂತರಾಜು ವರದಿ ಬಹಿರಂಗಗೊಳಿಸಿ : ಕೆ.ಎಂ.ರಾಮಚಂದ್ರಪ್ಪ ಆಗ್ರಹ

Update: 2025-06-20 21:53 IST

ಸಾಂದರ್ಭಿಕ ಚಿತ್ರ

ಬೆಂಗಳೂರು : ರಾಜ್ಯ ಸರಕಾರ ತಾತ್ವಿಕವಾಗಿ ಒಪ್ಪಿಕೊಂಡಿರುವ ಕಾಂತರಾಜು ವರದಿಯನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಬೇಕು ಎಂದು ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ.ಎಂ.ರಾಮಚಂದ್ರಪ್ಪ ತಿಳಿಸಿದ್ದಾರೆ.

ಶುಕ್ರವಾರ ಇಲ್ಲಿನ ವಸಂತ ನಗರದಲ್ಲಿರುವ ಬಂಜಾರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂತರಾಜು ಆಯೋಗವು ನಡೆಸಿರುವ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯ ವರದಿಯನ್ನು ಸರಕಾರ ತಾತ್ವಿಕವಾಗಿ ಸ್ವೀಕರಿಸಿದ್ದು, ಅದನ್ನು ಬಹಿರಂಗಗೊಳಿಸಬೇಕು. ಸಾರ್ವಜನಿಕರ ಹಣದಿಂದ ಮಾಡಿದ ಈ ವರದಿ ಸಾರ್ವಜನಿಕರಿಗೆ ಸೇರಬೇಕು ಎಂದರು.

ಸಿದ್ದರಾಮಯ್ಯ ನೇತೃತ್ವದ ಸರಕಾರ ಈ ವರದಿಯನ್ನು ಬಹಿರಂಗ ಮಾಡಲು ಹಿಂದೇಟು ಹಾಕುತ್ತಿದೆ. ಅಲ್ಲದೆ, ಈಗ ಮರು ಸಮೀಕ್ಷೆ ನಡೆಸುವುದಾಗಿಯೂ ಹೇಳಿದೆ. ಇದನ್ನು ಹಿಂದುಳಿದ ಮತ್ತು ಶೋಷಿತ ವರ್ಗಗಳು ಖಂಡಿಸುತ್ತವೆ. ಸರಕಾರ ಕಾಂತರಾಜು ವರದಿಯನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಕೆ.ಎಂ.ರಾಮಚಂದ್ರಪ್ಪ ಒತ್ತಾಯಿಸಿದರು.

ಹಿಂದುಳಿದ ಮತ್ತು ಶೋಷಿತ ಜಾತಿಗಳ ಒಕ್ಕೂಟದ ನಿಯೋಗವು ಕಾಂಗ್ರೆಸ್ ಹೈಕಮಾಂಡ್ ಅನ್ನು ಸದ್ಯದಲ್ಲೇ ಭೇಟಿ ಮಾಡಲಿದ್ದು, ಕಾಂತರಾಜು ವರದಿ ಬಿಡುಗಡೆಗಾಗಿ ರಾಜ್ಯ ಸರಕಾರಕ್ಕೆ ಸೂಚನೆ ನೀಡುವಂತೆ ನಿಯೋಗವು ಮನವಿ ನೀಡಲಿದೆ ಎಂದು ಕೆ.ಎಂ.ರಾಮಚಂದ್ರಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಣ್ಣೆಗೆರೆ ಆರ್. ವೆಂಕಟರಾಮಯ್ಯ, ಕಾರ್ಯದರ್ಶಿಗಳಾದ ಆರ್.ರಾಮಕೃಷ್ಣಪ್ಪ, ಟಿ.ಎನ್.ನಾರಾಯಣಗೌಡ ಸೇರಿದಂತೆ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News