ಬೆಂಗಳೂರಿನಲ್ಲಿ ಶ್ವಾಸತಾಣಗಳ ಸಂರಕ್ಷಣೆ ಅಗತ್ಯ : ಈಶ್ವರ್ ಖಂಡ್ರೆ
ಬೆಂಗಳೂರು : ರಾಜ್ಯದ ರಾಜಧಾನಿ ಬೆಂಗಳೂರು ಕಾಂಕ್ರೀಟ್ ಕಾಡಾಗುತ್ತಿದ್ದು, ಅತ್ಯಾವಶ್ಯಕವಾದ ಶ್ವಾಸತಾಣಗಳ ಸಂರಕ್ಷಣೆ ಇಂದಿನ ಅಗತ್ಯವಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಬಿ. ಖಂಡ್ರೆ ಪ್ರತಿಪಾದಿಸಿದ್ದಾರೆ.
ರವಿವಾರ ಕಸ್ತೂರಿನಗರದ ಬಿ. ಚನ್ನಸಂದ್ರ ಕೆರೆಯ 2ನೇ ಹಂತದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಉತ್ತರ ಬೆಂಗಳೂರು ಕೆಆರ್.ಪುರ ಹೋಬಳಿ ಬಾಣಸವಾಡಿ ಗ್ರಾಮದ ಸರ್ವೆ ನಂ.64ರಲ್ಲಿ 19 ಎಕರೆ 17 ಗುಂಟೆ ಜಮೀನಿನ ಪೈಕಿ 13 ಎಕರೆ 27 ಗುಂಟೆ ಅರಣ್ಯ ಇಲಾಖೆಗೆ ಸೇರಿದೆ. ಆದರೆ ಈ ಪೈಕಿ 7 ಎಕರೆ ಅನ್ಯ ಉದ್ದೇಶಕ್ಕೆ ಬಳಕೆ ಆಗಿದ್ದು, ಇದರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿರುವೆ ಎಂದು ಹೇಳಿದರು.
ಹಾಲಿ ಇರುವ 6 ಎಕರೆ 26 ಗುಂಟೆ ಜಮೀನಿನಲ್ಲಿ ತುಂಬಿದ್ದ ಹೂಳು ತೆಗೆದು ಕಾಂಪೌಂಡ್ ಹಾಕಿ, ಸಸಿಗಳನ್ನು ನೆಟ್ಟು ಸಂರಕ್ಷಿಸಲಾಗಿದೆ. ಅರಣ್ಯ ಇಲಾಖೆಗೆ ಸಂಬಂಧಿಸಿದ ಕೆರೆಗಳನ್ನು ಅರಣ್ಯ ಎಂದು ಕಂದಾಯ ಇಲಾಖೆ ದಾಖಲೆಗಳಲ್ಲಿ ಪರಿವರ್ತಿಸಲು ಕ್ರಮ ವಹಿಸಬೇಕು ಎಂದು ಈಶ್ವರ್ ಖಂಡ್ರೆ, ಅಧಿಕಾರಿಗಳಿಗೆ ಸೂಚಿಸಿದರು.
ಕಸ್ತೂರಿ ನಗರ ಬಿ. ಚನ್ನಸಂದ್ರ ಕೆರೆ ಅಭಿವೃದ್ಧಿಯ ಸ್ಥಳೀಯರ ಪಾತ್ರ ಮಹತ್ವದ್ದಾಗಿದ್ದು, ಇದೇ ರೀತಿ ಸರ್ಕಾರಿ ಆಸ್ತಿ ಉಳಿಸಲು ಆಯಾ ಪ್ರದೇಶದ ಸಾರ್ವಜನಿಕರು ಸರಕಾರದೊಂದಿಗೆ ಕೈಜೋಡಿಸಬೇಕು. ಕಸ್ತೂರಿ ನಗರ ಕ್ಷೇಮಾಭಿವೃದ್ಧಿ ಸಂಘ ತಮಗೆ ಫೆಬ್ರವರಿಯಲ್ಲಿ ಈ ಕುರಿತಂತೆ ದೂರು ನೀಡಿದ ಕೂಡಲೇ, ಒತ್ತುವರಿ ಆಗಿರುವ ಅರಣ್ಯ ಭೂಮಿ ತೆರವು ಮಾಡಿಸಲು ತಾವು ಫೆ.6ರಂದು ಲಿಖಿತ ಸೂಚನೆ ನೀಡಿರುವೆ ಎಂದು ತಿಳಿಸಿದರು.
ಬೆಂಗಳೂರು ನಾಲ್ಕೂ ದಿಕ್ಕಿನಲ್ಲಿ ಅಭಿವೃದ್ಧಿ ಆಗಿದೆ. ವಿಶಾಲವಾಗಿ ಬೆಳೆದಿದೆ. ಈ ವೇಗದ ಬೆಳವಣಿಗೆಯಲ್ಲಿ ಹಲವು ಬಡಾವಣೆ ತಲೆಎತ್ತಿವೆ, ಲಕ್ಷಾಂತರ ಗಿಡ, ಮರ ಕಡಿಯಲಾಗಿದೆ. ಹಸಿರು ಹೊದಿಕೆ ಕ್ಷೀಣಿಸಿದರೆ ಮುಂದಿನ ಪೀಳಿಗೆ ತೀವ್ರ ಸಂಕಷ್ಟ ಎದುರಿಸಬೇಕಾಗುತ್ತದೆ. ಹೀಗಾಗಿ ಶ್ವಾಸ ತಾಣಗಳ ಸಂರಕ್ಷಣೆಗೆ ಅರಣ್ಯ ಇಲಾಖೆ ಕಾರ್ಯೋನ್ಮುಖವಾಗಿದೆ ಎಂದರು. ಈ ವೇಳೆ ಬೆಂಗಳೂರು ನಗರ ಉಪ ವಲಯ ಸಂರಕ್ಷಣಾಧಿಕಾರಿ ರವೀಂದ್ರ ಕುಮಾರ್ ಪಾಲ್ಗೊಂಡಿದ್ದರು.