×
Ad

ಕಾರ್ಮಿಕ ವಿರೋಧಿ ಕಾನೂನುಗಳನ್ನು ರದ್ದುಗೊಳಿಸಲು ಆಗ್ರಹ

Update: 2025-06-22 22:00 IST

ಬೆಂಗಳೂರು : ಕೇಂದ್ರ ಸರಕಾರ ಕಾರ್ಮಿಕರಿಗೆ ಅನುಕೂಲಕರವಾದ 29 ಕಾನೂನುಗಳನ್ನು ರದ್ದು ಮಾಡಿ, ಕಾರ್ಮಿಕ ವಿರೋಧಿ ನಾಲ್ಕು ಕಾಯಿದೆಗಳನ್ನು ಜಾರಿಗೆ ಮುಂದಾಗಿದೆ. ಇದರಿಂದ ಕಾರ್ಮಿಕರು ತಮ್ಮ ಬಹುತೇಕ ಹಕ್ಕುಗಳನ್ನು ಕಳೆದುಕೊಳ್ಳಲಿದ್ದಾರೆ. ಈ ಕೂಡಲೇ ಕಾರ್ಮಿಕ ವಿರೋಧಿ ಕಾನೂನುಗಳನ್ನು ರದ್ದುಗೊಳಿಸಬೇಕು ಎಂದು ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ (ಎಐಸಿಸಿಟಿಯು)ನ ಜಿಲ್ಲಾಧ್ಯಕ್ಷೆ ನಿರ್ಮಲಾ ಆಗ್ರಹಿಸಿದ್ದಾರೆ.

ರವಿವಾರ ನಗರದ ಗಾಂಧಿ ಭವನದಲ್ಲಿ ಎಐಸಿಸಿಟಿಯು ವತಿಯಿಂದ ನೂತನ ಕಾರ್ಮಿಕ ಸಂಹಿತೆಗಳು ಮತ್ತು ಕಾರ್ಮಿಕರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಕುರಿತು ಆಯೋಜಿಸಿದ್ದ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಬಂಡವಾಳಶಾಹಿಗಳ ಪರವಾಗಿ, ಅವರ ಹಿತಕ್ಕಾಗಿ ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡಲಾಗುತ್ತಿದೆ ಎಂದು ದೂರಿದರು.

ಕಾರ್ಮಿಕ ವಿರೋಧಿ ಕಾನೂನುಗಳು ಅನುಷ್ಠಾನವಾದರೆ ಶೇ.70 ರಷ್ಟು ಕಾರ್ಮಿಕರು ಈ ಸಂಹಿತೆಗಳ ವ್ಯಾಪ್ತಿಗೆ ಒಳಪಡುವುದೇ ಇಲ್ಲ. ಮೋದಿ ದೇಶವನ್ನು ಹಿಂದುತ್ವದ ಆಧಾರದಲ್ಲಿ ಕಟ್ಟಬೇಕು ಎನ್ನುತ್ತಾರೆ. ಇಲ್ಲಿ ಕೆಲಸ ಮಾಡುವ ಬಹುತೇಕರು ಹಿಂದೂಗಳೇ ಆಗಿದ್ದಾರೆ. ಆದರೆ ಹಿಂದೂ ಎನ್ನುವ ಪದವನ್ನು ಬಂಡವಾಳಶಾಹಿಗಳ ಹಿತ ಕಾಯಲು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕೇಂದ್ರ ಸರಕಾರ ಕಾರ್ಮಿಕರನ್ನು ಜೀತದಾಳು ಮಾಡಲು ಹೊರಟಿದೆ ಎಂದು ನಿರ್ಮಲಾ ಆಕ್ರೋಶ ವ್ಯಕ್ತಪಡಿಸಿದರು.

ವಕೀಲೆ ಮೈತ್ರೇಯಿ ಮಾತನಾಡಿ, 'ಕಾರ್ಮಿಕರಿಗೆ ಎಂಟು ಗಂಟೆ ಕೆಲಸದ ಅವಧಿ, ಖಾಯಂ ಕೆಲಸ, ಕೆಲಸಕ್ಕೆ ತಕ್ಕ ವೇತನ, ಸುರಕ್ಷತೆ, ಮುಷ್ಕರದ ಹಕ್ಕು, ಸಂಘ ಕಟ್ಟುವ ಹಕ್ಕು ಇನ್ನಿತರ ಹಕ್ಕುಗಳನ್ನು ಇಲ್ಲವಾಗಿಸಿ ಕಾರ್ಮಿಕರನ್ನು ಗುಲಾಮರನ್ನಾಗಿಸಲು ಕೇಂದ್ರದ ಕಾರ್ಪೊರೇಟ್‌ ಬಂಡವಾಳದ ಪರ ರೂಪಿಸಿರುವ ಕಾರ್ಮಿಕ ವಿರೋಧಿ ನಾಲ್ಕು ಸಂಹಿತೆಗಳನ್ನು ರದ್ದುಪಡಿಸಬೇಕು. ಬೆಲೆಗಳಿಗೆ ಅನುಗುಣವಾಗಿ ಎಲ್ಲ ಸಂಘಟಿತ, ಅಸಂಘಟಿತ, ಗುತ್ತಿಗೆ ಕಾರ್ಮಿಕರು ಮತ್ತು ಸ್ಕೀಂ ನೌಕರರಿಗೆಲ್ಲರಿಗೂ ಕನಿಷ್ಠ ವೇತನ 42 ಸಾವಿರ ರೂ. ನಿಗಧಿ ಪಡಿಸಬೇಕು ಎಂದು ಒತ್ತಾಯಿಸಿದರು.

ಬಂಡವಾಳಶಾಹಿಗಳ ಅಣತಿಯ ಮೇರೆಗೆ ಕೇಂದ್ರ ಸರಕಾರವು ದುಡಿಯುವ ಜನರ ಜೀವನ ಮತ್ತು ಜೀವನೋಪಾಯದ ಮೇಲೆ ನಿರಂತರ ಫ್ಯಾಸಿಸ್ಟ್ ದಾಳಿಗಳನ್ನು ಎಸುಗುತ್ತಿದೆ. ಕಾರ್ಪೊರೇಟ್‌ ಗಳ ಹಿತಾಸಕ್ತಿಗಾಗಿ ದುಡಿಯುವ ಜನರ ಮೇಲೆ ವಾಸ್ತವವಾಗಿ ಗುಲಾಮಗಿರಿಯ ಷರತ್ತುಗಳನ್ನು ಹೇರುವ ಸಮಗ್ರ ನೀಲನಕ್ಷೆಗೆ ಅನುಗುಣವಾಗಿ ಸರಕಾರ ಮುಂದಾಗಿದೆ. ಗುತ್ತಿಗೆ, ಹೊರ ಗುತ್ತಿಗೆ ಹೆಸರಿನಲ್ಲಿ ಕಾರ್ಮಿಕರ ನೇಮಕಾತಿ ನಿಲ್ಲಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿ ಮಾಡಬೇಕು. ಗ್ರಾಚ್ಯುಟಿ ಪರಿಹಾರ 90 ದಿನಕ್ಕೆ ಹೆಚ್ಚಿಸಬೇಕು ಎಂದು ಮೈತ್ರೇಯಿ ಆಗ್ರಹಿಸಿದರು.

ಕಾರ್ಯಗಾರದಲ್ಲಿ ಎಐಸಿಸಿಟಿಯುನ ಅಶೋಕ್, ಅಪ್ಪಣ್ಣ, ಗಾರ್ಮೆಂಟ್ಸ್ ಸಂಘಟನೆಯ ಪ್ರತಿಭಾ ಸೇರಿದಂತೆ ಹಲವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News