×
Ad

ರಾಜ್ಯ ಸರಕಾರ ಇನ್ನೊಂದು ಜಾತಿ ಗಣತಿಗೆ ಕೈ ಹಾಕದಿರಲಿ: ‘ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆ’ ಸಭೆಯ ನಿರ್ಣಯ

Update: 2025-06-22 22:07 IST

ಸಾಂದರ್ಭಿಕ ಚಿತ್ರ | PC: Grok

ಬೆಂಗಳೂರು : ಕರ್ನಾಟಕದಲ್ಲಿ ಜಾತಿಗಣತಿ ವಿಚಾರವಾಗಿ ಹತ್ತು ವರ್ಷ ವ್ಯರ್ಥವಾಗಿದ್ದು, ಈಗಾಗಲೇ ಜಾತಿಗಣತಿಯಲ್ಲಿ 165ಕೋಟಿ ರೂ. ಜನರ ತೆರಿಗೆ ಹಣವನ್ನು ವ್ಯಯಮಾಡಲಾಗಿದೆ. ಹೀಗಾಗಿ ರಾಜ್ಯ ಸರಕಾರ ಅವಸರಕ್ಕೆ ಇನ್ನೊಂದು ಗಣತಿಗೆ ಯಾವುದೇ ಕಾರಣಕ್ಕೂ ಕೈ ಹಾಕಬಾರದು ಎಂದು ಕರ್ನಾಟಕ ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆಯ ನಿಯೋಗ ಮನವಿ ಮಾಡಿದೆ.

ರವಿವಾರ ನಗರದ ಖಾಸಗಿ ಹೋಟೆಲ್‍ನಲ್ಲಿ ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆ ವತಿಯಿಂದ ದುಂಡು ಮೇಜಿನ ಸಭೆ ನಡೆಸಿ, ರಾಜ್ಯದಲ್ಲಿ ಮತ್ತೊಮ್ಮೆ ಜಾತಿಗಣತಿಗೆ ವಿರೋಧಿಸಲಾಗಿದೆ. ಈಗ ಮತ್ತೊಮ್ಮೆ ಶಾಲಾ ಶಿಕ್ಷಕರನ್ನು ಜಾತಿಗಣತಿಯಲ್ಲಿ ತೊಡಗಿಸಲು ಸದ್ಯಕ್ಕೆ ಸಾಧ್ಯವಿಲ್ಲ. ಇನ್ನೊಮ್ಮೆ ಮಾನವ ಸಂಪನ್ಮೂಲ, ಜನರ ತೆರಿಗೆಯ ಹಣವನ್ನು ಬಳಸುವಾಗ ಸರಕಾರ ಎಚ್ಚರಿಕೆ ಹೆಜ್ಜೆ ಇಡಬೇಕು ಎಂದು ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ.

ಕೇಂದ್ರ ಸರಕಾರ ನಡೆಸುವ ಜಾತಿಗಣತಿಯ ದತ್ತಾಂಶಗಳಿಗೆ ಸಂವಿಧಾನಾತ್ಮಕವಾದ ಮಾನ್ಯತೆ ಇದೆ. ಹೀಗಾಗಿ ಕರ್ನಾಟಕದ ಸರಕಾರ ಕೇಂದ್ರ ಸರಕಾರಕ್ಕೆ ಸಂಪೂರ್ಣ ಸಹಕಾರ ಕೊಡಲು ಮುಂದಾಗಬೇಕು. ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಸಭೆಯಲ್ಲಿ ನಿರ್ಣಯಿಸಲಾಗಿದೆ.

ಈ ದುಂಡು ಮೇಜಿನ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ರಾಂತ ಕುಲಪತಿ ವಿಷ್ಣುಕಾಂತ್ ಚಟಪಲ್ಲಿ, ರಾಜ್ಯ ಸರಕಾರವು ಸ್ವಾರ್ಥ, ಪ್ರತಿಷ್ಠೆ, ರಾಜಕಾರಣಕ್ಕೆ ಜಾತಿಗಣತಿಯನ್ನು ಬಲಿಕೊಡಬಾರದು. ನ್ಯಾ.ಕಾಂತರಾಜು ಆಯೋಗದ ವರದಿಯನ್ನು ಸಾರ್ವಜನಿಕರ ಅವಗಾಹನೆಗೆ ಬಿಡುಗಡೆ ಮಾಡಬೇಕು ಎಂದರು.

ಕೆಪಿಎಸ್‍ಇ ಮಾಜಿ ಸದಸ್ಯ ಕೆ.ಮುಕುಡಪ್ಪ ಮಾತನಾಡಿ, 13 ಸಾವಿರ ಕೋಟಿ ರೂ. ವೆಚ್ಚದಲ್ಲಿ ಇಡೀ ದೇಶದ ಎಲ್ಲ ರಾಜ್ಯಗಳಲ್ಲೂ ನಡೆಯಲಿರುವ ಐತಿಹಾಸಿಕ ಬೃಹತ್ ಯೋಜನೆ ಇದಾಗಿದ್ದು, ಕೇಂದ್ರ ಸರಕಾರ ಜನಗಣತಿಯ ಜೊತೆ, ಜಾತಿಗಣತಿಯನ್ನು ಮಾಡುವುದಾಗಿ ಘೋಷಿಸಿದೆ. ಇದಕ್ಕಾಗಿ ಸಿದ್ದತೆಯನ್ನೂ ಆರಂಭಿಸಿದೆ. ಕೇಂದ್ರ ಸರಕಾರದ ಜನಗಣತಿ ಹೆಚ್ಚು ಸಮಗ್ರವಾಗಿ ಇರಲಿದೆ. 32 ಪ್ಯಾರಾಮೀಟರ್ಸ್ ಬಳಸಿ ಸಾಮಾಜಿಕ, ಶೈಕ್ಷಣಿಕ ಮಾತ್ರವಲ್ಲ ಸಾಂಸ್ಕೃ ತಕ ಸಂಗತಿಗಳೂ ಕೇಂದ್ರದ ಗಣತಿ ದಾಖಲಿಸಿದೆ. ಇದನ್ನು ಕರ್ನಾಟಕ ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆಯು ಸ್ವಾಗತಿಸುತ್ತದೆ ಎಂದರು.

ಸಭೆಯಲ್ಲಿ ವಿಶ್ರಾಂತ ಕುಲಪತಿ ದಯಾನಂದ ಅಗಸರ, ಡಾ.ಕೆ.ಆರ್.ವೇಣುಗೋಪಾಲ ಸೇರಿದಂತೆ ವಕೀಲರು, ಮಾಜಿ ಐಆರ್‍ಎಸ್ ಮತ್ತು ಐಎಎಸ್ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News