×
Ad

ಪೊಲೀಸರ ಟೋಪಿ ಪರಿಶೀಲಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್

Update: 2025-06-27 23:02 IST

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕಾನ್‍ಸ್ಟೇಬಲ್‍ಗಳು ಬಳಸುತ್ತಿರುವ ಬ್ರಿಟಿಷರ ಕಾಲದ ಟೋಪಿ(ಕ್ಯಾಪ್)ಗಳ ಬದಲಾವಣೆಯ ಚರ್ಚೆಗಳು ಚಾಲ್ತಿಯಲ್ಲಿರುವಾಗ, ಅನ್ಯ ರಾಜ್ಯಗಳಲ್ಲಿ ಪೊಲೀಸ್ ಕಾನ್‍ಸ್ಟೇಬಲ್‍ಗಳು ಧರಿಸುತ್ತಿರುವ ಟೋಪಿಗಳ ಮಾದರಿಗಳನ್ನು ಗೃಹ ಸಚಿವ ಡಾ.ಜಿ. ಪರಮೇಶ್ವರ್ ವೀಕ್ಷಿಸಿದ್ದಾರೆ.

ಶುಕ್ರವಾರ ನಗರದ ರಾಜ್ಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಕರ್ನಾಟಕ ರಾಜ್ಯ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಭೆ ನಡೆಸಿದ ಅವರು, ಮಹಾರಾಷ್ಟ್ರ, ಹೊಸದಿಲ್ಲಿ, ಆಂಧ್ರ ಪ್ರದೇಶ, ತೆಲಂಗಾಣ, ಕೇರಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಪೊಲೀಸ್ ಕಾನ್‍ಸ್ಟೇಬಲ್‍ಗಳು ಬಳಸುತ್ತಿರುವ ಕ್ಯಾಪ್‍ಗಳನ್ನು ಪರಿಶೀಲಿಸಿದರು.

ಈಡೇರದ ಸ್ಲೋಚ್ ಹ್ಯಾಟ್ ಬದಲಿಸುವ ಬೇಡಿಕೆ: ಪೊಲೀಸ್ ಕಾನ್‍ಸ್ಟೇಬಲ್‍ಗಳ ಟೋಪಿ ಬದಲಿಸುವಂತೆ ಹಲವು ವರ್ಷಗಳಿಂದಲೂ ಪೊಲೀಸ್ ಸಿಬ್ಬಂದಿ ಬೇಡಿಕೆಯಿಡುತ್ತಲೇ ಬಂದಿದ್ದರಾದರೂ, ಇದುವರೆಗೂ ಬೇಡಿಕೆ ಈಡೇರಿಲ್ಲ. ಹಳೆಯ ಮಾದರಿಯ ಸ್ಲೋಚ್ ಹ್ಯಾಟ್ ಬದಲಿಗೆ ಪೀಕ್ ಕ್ಯಾಪ್ ನೀಡುವುದರ ಕುರಿತು ಚರ್ಚೆ ನಡೆಸಿ ವರದಿ ನೀಡುವಂತೆ ಇತ್ತೀಚೆಗೆ ರಾಜ್ಯದ ಪೊಲೀಸ್ ಮಹಾ ನಿರ್ದೇಶಕರು ಪೊಲೀಸ್ ಕಿಟ್ ನಿರ್ದಿಷ್ಟತಾ ಸಮಿತಿಗೆ ಸೂಚಿಸಿದ್ದರು. ಅಲ್ಲದೆ, ಸ್ಲೋಚ್ ಹ್ಯಾಟ್ ಬಳಕೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆಗಳ ಬಗ್ಗೆ ಇತ್ತೀಚೆಗೆ ಕೇಂದ್ರ ಆರೋಗ್ಯ ಇಲಾಖೆ ಎಚ್ಚರಿಕೆಯನ್ನೂ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News