ಫಾರೆಸ್ಟ್ ವಾಚರ್ಸ್‌ಗಳಿಗೆ ಮೂಲಭೂತ ಸೌಲಭ್ಯಗಳ ಕೊರತೆ ಪ್ರಶ್ನಿಸಿದ್ದಕ್ಕೆ ಪರಿಸರವಾದಿಗೆ ಬೆದರಿಕೆ: ದೂರು ದಾಖಲು
ಜೋಸೆಫ್ ಹೂವರ್
ಬೆಂಗಳೂರು : ಬಂಡಿಪುರ ಹುಲಿ ಮೀಸಲು ಅರಣ್ಯ ಪ್ರದೇಶದಲ್ಲಿ ಕೆಲಸ ಮಾಡುವ ಫಾರೆಸ್ಟ್ ವಾಚರ್ಸ್‌ಗಳಿಗೆ ಸರಿಯಾದ ಮೂಲಭೂತ ಸೌಲಭ್ಯಗಳು ಇಲ್ಲದಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾತನಾಡಿದ್ದಕ್ಕೆ ತನಗೆ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿ ಪರಿಸರವಾದಿ ಜೋಸೆಫ್ ಹೂವರ್ ಅವರು, ಬೆಂಗಳೂರಿ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬಂಡಿಪುರ ಟ್ರೈಗರ್ ರಿಸರ್ವ್‌ನ ಫೀಲ್ಡ್ ಡೈರಕ್ಟರ್ ಪ್ರಭಾಕರನ್ ಹಾಗೂ ಎಸಿಎಫ್ ನವೀನ್ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.
ದೂರಿನಲ್ಲೇನಿದೆ : ಬಂಡಿಪುರ ಹುಲಿ ಮೀಸಲು ಅರಣ್ಯ ಪ್ರದೇಶದಲ್ಲಿ ಕೆಲಸ ಮಾಡುವ ಫಾರೆಸ್ಟ್ ವಾಚರ್ಸ್‌ಗಳಿಗೆ ಸರಿಯಾದ ಮೂಲಭೂತ ಸೌಲಭ್ಯಗಳ ಕೊರತೆ ಹಾಗೂ ಅಲ್ಲಿನ ಸ್ಥಳೀಯ ನಿವಾಸಿಗಳು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಇತ್ಯಾದಿ ವಿಷಯಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಾನು ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಬಂಡಿಪುರ ಟ್ರೈಗರ್ ರಿಸರ್ವ್‌ನ ಫೀಲ್ಡ್ ಡೈರಕ್ಟರ್ ಪ್ರಭಾಕರನ್ ಹಾಗೂ ನವೀನ್ ಎಂಬವರು ನನಗೆ ಕರೆಮಾಡಿ ʼಈ ವಿಚಾರಗಳನ್ನು ತೆಗೆದುಹಾಕು ಇಲ್ಲವಾದಲ್ಲಿ ನಿನ್ನನ್ನು ಬಿಡುವುದಿಲ್ಲ. ನಿನ್ನನ್ನು ನೋಡಿಕೊಳ್ಳುತ್ತೇವೆʼ ಎಂದು ಬೆದರಿಕೆ ಹಾಕಿದ್ದಾರೆ ಎಂದು ಜೋಸೆಫ್ ಹೂವರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಸಂಬಂಧ ಮಾತನಾಡಿರುವ ಪರಿಸರವಾದಿ ಜೋಸೆಫ್ ಹೂವರ್, ಫೀಲ್ಡ್ ಡೈರಕ್ಟರ್ ಪ್ರಭಾಕರನ್ ಅವರು ಈಗ ಬೆದರಿಕೆ ಹಾಕಿಲ್ಲ ಎಂದು ಹೇಳುತ್ತಿದ್ದು, ನಾನು ಏನಾದರೂ ಸುಳ್ಳು ಹೇಳುತ್ತಿದ್ದರೆ ನನ್ನ ಮೇಲೆ ಕ್ರಮ ಕೈಗೊಳ್ಳಲಿ. ನಾನು ಮಂಪರು ಪರೀಕ್ಷೆಗೂ ತಯಾರಿದ್ದೇನೆ. ಪ್ರಭಾಕರನ್ ಅವರನ್ನೂ ಮಂಪರು ಪರೀಕ್ಷೆಗೆ ಒಳಪಡಿಸಿ. ಅಧಿಕಾರಿಗಳಿಗೆ ಉತ್ತಮ ವ್ಯವಸ್ಥೆಯ ಕಚೇರಿಗಳು ಇದೆ, ಆದರೆ ಫಾರೆಸ್ಟ್ ವಾಚರ್ಸ್‌ಗಳಿಗೆ ಸರಿಯಾಗಿ ಕುಡಿಯುವ ನೀರೂ ಇಲ್ಲದ ವ್ಯವಸ್ಥೆ ಬಗ್ಗೆ ದೂರು ನೀಡಿದರೆ, ಬೆದರಿಕೆ ಹಾಕಿದ್ದಾರೆ. ಈಗಾಗಲೇ ಈ ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಿಸಿದ್ದೇನೆ. ಅದರ ಬಗ್ಗೆ ತನಿಖೆ ನಡೆಯಲಿ. ಅಲ್ಲದೆ, ಈ ಅಧಿಕಾರಿಗಳ ಆಸ್ತಿ-ಪಾಸ್ತಿಗಳ ಕುರಿತು ತನಿಖೆ ಕೂಡ ನಡೆಯಬೇಕು. ಸಚಿವ ಈಶ್ವರ್ ಖಂಡ್ರೆ ಅವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮೂಲಭೂತ ಸೌಲಭ್ಯಗಳ ಕೊರತೆ ಬಗ್ಗೆ ಪರಿಸರವಾದಿ ಜೋಸೆಫ್ ಹೂವರ್ ಮಾನಾಡಿದ ವಿಡಿಯೋ ನಿನ್ನೆ(ಶುಕ್ರವಾರ) ʼವಾರ್ತಾಭಾರತಿʼ ಯಲ್ಲಿ ಪ್ರಸಾರವಾಗಿತ್ತು.