×
Ad

ಮುಂದಿನ ಅಧಿವೇಶನದಲ್ಲಿಯೇ ದ್ವಿಭಾಷಾ ನೀತಿ ಜಾರಿಗೊಳಿಸಿ: ಮುಖ್ಯಮಂತ್ರಿ ಚಂದ್ರು ಆಗ್ರಹ

Update: 2025-06-30 18:52 IST

ಬೆಂಗಳೂರು : ರಾಜ್ಯ ಸರಕಾರ ಪ್ರಾದೇಶಿಕ ಅಸಮತೋಲನವನ್ನು ಸರಿಪಡಿಸಲು ಮುಂಬರುವ ವಿಧಾನಸಭಾ ಅಧಿವೇಶನದಲ್ಲಿಯೇ ದ್ವಿಭಾಷಾ ನೀತಿಯನ್ನು ಜಾರಿಗೊಳಿಸ ಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಆಗ್ರಹಿಸಿದ್ದಾರೆ.

ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿರುವ ಅವರು, ಕನ್ನಡ ಭಾಷೆಯ ಹಿರಿಮೆಯನ್ನು ಎತ್ತಿ ಹಿಡಿಯಲು, ದೇಶದಲ್ಲಿ ಸ್ಥಳೀಯ ಭಾಷೆಗಳ ಉಳಿವಿಗಾಗಿ, ವಿದ್ಯಾರ್ಥಿಗಳ ಮೇಲಿನ ಅನಗತ್ಯ ಹೊರೆಯನ್ನು ತಪ್ಪಿಸಲು, ಮಕ್ಕಳ ಜ್ಞಾನಾರ್ಜನೆಯ ವೃದ್ಧಿಗಾಗಿ, ಹಿಂದಿ ಭಾಷೆಯ ಏರಿಕೆಯಿಂದ ವಿದ್ಯಾರ್ಥಿಗಳ ಶಿಕ್ಷಣ ಮೊಟಕುಗೊಳ್ಳುವಿಕೆಯನ್ನು ತಡೆಗಟ್ಟಲು ಹಾಗೂ ಎಲ್ಲ ಕನ್ನಡಪರ ಮನಸ್ಸುಗಳ ಹಲವು ದಶಕಗಳ ಬೇಡಿಕೆಯನ್ನು ಈಡೇರಿಸಲು ದ್ವಿಭಾಷಾ ನೀತಿ ಜಾರಿಗೊಳಿಸಬೇಕು ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಪ್ರತಿ ವರ್ಷವೂ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗುವ ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಈಗಿರುವ ತ್ರಿಭಾಷಾ ಸೂತ್ರದ ಅನುಸಾರ ಹಿಂದಿ ಭಾಷೆಯಲ್ಲಿ ಅನುತ್ತೀರ್ಣ ಆಗುವ ಮೂಲಕ ತಮ್ಮ ಶಿಕ್ಷಣ ಭವಿಷ್ಯವನ್ನೇ ತ್ಯಜಿಸುವಂತಹ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಈಗಾಗಲೇ ಪಂಜಾಬ್‍ನ ಆಮ್ ಆದ್ಮಿ ಪಕ್ಷದ ಸರಕಾರ ರಾಜ್ಯದಲ್ಲಿ ಹಾಗೂ ದಿಲ್ಲಿ ರಾಜ್ಯದಲ್ಲಿ ದ್ವಿಭಾಷಾ ನೀತಿ ಜಾರಿಯಲ್ಲಿದೆ. ಇತ್ತೀಚೆಗೆ ಮಹಾರಾಷ್ಟ್ರ ಸರಕಾರವು ಹೋರಾಟಗಾರರ ಒತ್ತಡಕ್ಕೆ ಮಣಿದು ತ್ರಿಭಾಷಾ ಸೂತ್ರವನ್ನು ಕೈಬಿಟ್ಟಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ರಾಜ್ಯದ ಲಕ್ಷಾಂತರ ಮಕ್ಕಳ ಶಿಕ್ಷಣ ಭವಿಷ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ದ್ವಿಭಾಷಾ ನೀತಿ ಮಸೂದೆಯನ್ನು ಮಂಡಿಸುವ ಮೂಲಕ ಅಂಗೀಕಾರ ಮಾಡಬೇಕು. ಮಕ್ಕಳ ಶೈಕ್ಷಣಿಕ ಭವಿಷ್ಯವನ್ನು ಅಂಧಕಾರಕ್ಕೆ ದೂಡುವ ತ್ರಿಭಾಷಾ ನೀತಿಯನ್ನು ರದ್ದುಗೊಳಿಸಿ, ಕೂಡಲೇ ದ್ವಿಭಾಷಾ ನೀತಿ ಜಾರಿಗೊಳಿಸಬೇಕು ಎಂದು ಮುಖ್ಯಮಂತ್ರಿ ಚಂದ್ರು ತಮ್ಮ ಪತ್ರದಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News