ʼನಿವೇಶನ ಹಗರಣ ಪ್ರಕರಣʼ ಗೃಹ ಮಂಡಳಿಯ ಪಾತ್ರವಿಲ್ಲ : ಶಿವಲಿಂಗೇಗೌಡ
ಬೆಂಗಳೂರು : ಇಲ್ಲಿನ ಯಲಹಂಕ ಉಪನಗರ ‘ಎ’ ಸೆಕ್ಟರ್ ಬಡಾವಣೆಯ ನಿವೇಶನ ಹಗರಣ ಪ್ರಕರಣದಲ್ಲಿ ಕರ್ನಾಟಕ ಗೃಹ ಮಂಡಳಿ(ಕೆಎಚ್‍ಬಿ)ಯ ಯಾವುದೇ ಪಾತ್ರವಿಲ್ಲ ಎಂದು ಮಂಡಳಿಯ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದ್ದಾರೆ.
ಗುರುವಾರ ಇಲ್ಲಿನ ಕೆಜಿ ರಸ್ತೆಯ ಗೃಹ ಮಂಡಳಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಇಇಯೊಬ್ಬರು ತಪ್ಪು ಮಾಡಿದ್ದರು. ಇದು ತಿಳಿದು ಬಂದ ಕೂಡಲೇ ಆ ಅಧಿಕಾರಿಯ ವಿರುದ್ಧ ಕ್ರಮವನ್ನೂ ಕೈಗೊಳ್ಳಲಾಗಿದೆ. ಅಲ್ಲದೆ, ಈ ಪ್ರಕರಣವೂ ನಾನು ಮಂಡಳಿಯ ಅಧ್ಯಕ್ಷನಾಗುವುದಕ್ಕೂ ಮುನ್ನ ನಡೆದಿರುವ ಪ್ರಕರಣವಾಗಿದೆ ಎಂದು ಹೇಳಿದರು.
ಪ್ರಕರಣದಲ್ಲಿ ಸತೀಶ ಹರಿಣಿ 271ನಿವೇಶನಕ್ಕೆ ಸಂಬಂಧಿಸಿದಂತೆ ನಕಲಿ ದಾಖಲೆ ಸೃಷ್ಟಿಸಿದ್ದಾರೆ. ಅದನ್ನು ಗೋವಿಂದಯ್ಯ ಅವರಿಗೆ ಜಿಪಿಎ ಮಾಡಿದ್ದಾರೆ. ಇದಕ್ಕೆ ಮಂಡಳಿಯ ಎಇಇ ಸೈಯದ್ ಅಸ್ಗರ್ ಕ್ರಯಪತ್ರ ಮಾಡಿಕೊಟ್ಟು ತಪ್ಪು ಎಸಗಿದ್ದರು. ಹಾಗಾಗಿ, ಇದರಲ್ಲಿ ಮಂಡಳಿಯ ಪಾತ್ರವಿಲ್ಲ. ಅಲ್ಲದೆ, ತಪ್ಪು ಕಂಡ ಬಂದ ಕೂಡಲೇ ಎಇಇ ಅವರನ್ನು ಅಮಾನತು ಮಾಡಲಾಗಿತ್ತು. ಅವರು 2023ರಲ್ಲಿಯೇ ನಿವೃತ್ತರಾಗಿದ್ದು, ಈ ಪ್ರಕರಣದ ಹಿನ್ನೆಲೆಯಲ್ಲಿ ಅವರಿಗೆ ನಿವೃತ್ತಿ ಪಿಂಚಣಿಯನ್ನೂ ನೀಡಿಲ್ಲ ಎಂದು ತಿಳಿಸಿದರು.
ದೂರು ನೀಡಿದರೆ ಪರಿಶೀಲನೆ: ಈ ಪ್ರಕರಣದ ಸಂಬಂಧ ಮಂಡಳಿಯನ್ನು ಪರಿಶೀಲನೆ ನಡೆಸಬೇಕು ಎಂದು ಲೋಕಾಯುಕ್ತ ಮಂಡಳಿಗೆ ನೋಟಿಸ್ ನೀಡಿತ್ತು. ಪರಿಶೀಲನೆ ನಡೆಸಿ ಹೋಗಿದೆ. ಅಲ್ಲದೆ, ಇದರಲ್ಲಿ ಕರ್ನಾಟಕ ಗೃಹ ಮಂಡಳಿ(ಕೆಎಚ್‍ಬಿ)ಯ ಯಾವುದೇ ಪಾತ್ರವಿಲ್ಲ ಎಂದು ವಿವರಿಸಿ ನೋಟಿಸ್ ಗೆ ಉತ್ತರ ಕೂಡ ನೀಡಿದ್ದೇವೆ. ಈಗ ಇ-ಖಾತೆ ವ್ಯವಸ್ಥೆ ಇರುವುದರಿಂದ ಇಂತಹ ಅಕ್ರಮಗಳು ನಡೆಯುವುದು ಕಡಿಮೆ. ಇಂತಹ ಪ್ರಕರಣಗಳು ಕಂಡು ಬಂದಿಲ್ಲ. ಇರುವುದಾಗಿ ದೂರುಗಳು ಬಂದರೆ ಪರಿಶೀಲನೆ ನಡೆಸಲಾಗುವುದು ಎಂದು ಕೆ.ಎಂ.ಶಿವಲಿಂಗೇಗೌಡ ತಿಳಿಸಿದರು.
ಹೊಸ ಫ್ಲ್ಯಾಟ್ ನಿರ್ಮಿಸಲು ಚಿಂತನೆ: ಯಲಹಂಕ, ಕೆಂಗೇರಿ, ಮತ್ತು ಆನೇಕಲ್ ತಾಲೂಕು ಸೂರ್ಯನಗರದ ಮಂಡಳಿಯ ಭೂಮಿಯಲ್ಲಿ ಸುಮಾರು 4ರಿಂದ5 ಸಾವಿರ ಫ್ಲ್ಯಾಟ್ಸ್ ನಿರ್ಮಿಸುವ ಚಿಂತನೆಯಿದ್ದು, ಮಧ್ಯಮ ವರ್ಗದವರಿಗೆ ಸೂರು ಒದಗಿಸಬೇಕು ಎಂಬ ಉದ್ದೇಶ ಮಂಡಳಿಯದ್ದಾಗಿದೆ. ಈ ಸೂರ್ಯನಗರದಲ್ಲಿ 100 ಡೂಪ್ಲೆಕ್ಸ್ ಮನೆಗಳ ನಿರ್ಮಿಸುವ ಯೋಜನೆಯಿದ್ದು, ಈಗಾಗಲೇ 55 ಅರ್ಜಿಗಳು ಬಂದಿವೆ. ಶೀಘ್ರದಲ್ಲೆ, 75 ಎಕರೆ ಪ್ರದೇಶದಲ್ಲಿ ಕ್ರೀಡಾಂಗಣವನ್ನು ನಿರ್ಮಿಸಲಾಗುವುದು. ಶೀಘ್ರದಲ್ಲಿಯೇ ಟೆಂಡರ್ ಕರೆದು, ಕಾಮಗಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಶಂಕುಸ್ಥಾಪನೆ ಮಾಡಿಸಲಾಗುವುದು ಎಂದರು.