ಮೂರನೇ ಭಾಷೆಯ ಕಡ್ಡಾಯ ಪರೀಕ್ಷೆ ರದ್ದುಗೊಳಿಸಲು ಚೇತನ್ ಅಹಿಂಸಾ ಆಗ್ರಹ
ಬೆಂಗಳೂರು : ರಾಜ್ಯ ಶಿಕ್ಷಣ ಪಠ್ಯಕ್ರಮದಲ್ಲಿ 9 ಮತ್ತು 10ನೇ ತರಗತಿಗೆ ಮೂರನೇ ಭಾಷೆಯ ಕಡ್ಡಾಯ ಪರೀಕ್ಷೆಯನ್ನು ರದ್ದು ಮಾಡಿ, ಎರಡು ಭಾಷೆ ಪರೀಕ್ಷೆ ಮಾತ್ರ ಕಡ್ಡಾಯ ಮಾಡಬೇಕು ಎಂದು ನಟ ಚೇತನ್ ಅಹಿಂಸಾ ಆಗ್ರಹಿಸಿದ್ದಾರೆ.
ಶುಕ್ರವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಕನ್ನಡ ಮೊದಲು ಬಳಗದಿಂದ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಬಿಎಸ್‍ಸಿ, ಐಸಿಎಸ್‍ಸಿ ಬೋರ್ಡಿನ 9 ಮತ್ತು 10ನೆ ತರಗತಿ ವಿದ್ಯಾರ್ಥಿಗಳು ಎರಡು ಭಾಷೆಯನ್ನು ಮಾತ್ರ ಕಲಿಯುತ್ತಿದ್ದಾರೆ. ಆದರೆ, ರಾಜ್ಯದ ಎಸೆಸೆಲ್ಸಿ ಬೋರ್ಡಿನ ಮಕ್ಕಳ ಮೇಲೆ ಮೂರನೇ ಭಾಷೆಯನ್ನು ಹೇರಿಕೆ ಮಾಡಿ ತಾರತಮ್ಯ ಮಾಡಲಾಗುತ್ತಿದೆ ಎಂದರು.
ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಹಿಂದುಳಿದಿರುವವರಿಗೆ ಸರಕಾರ ಸಹಾಯ ಮಾಡುವುದು ಬಿಟ್ಟು, ಮೂರನೇ ಭಾಷೆಯ ಹೊರೆಯನ್ನು ಹೇರುತ್ತಿದೆ. ಐಸಿಎಸ್‍ಸಿ, ಸಿಬಿಎಸ್‍ಸಿ ಮಾದರಿಯಲ್ಲಿ ರಾಜ್ಯ ಪಠ್ಯಕ್ರಮದಲ್ಲಿ ಓದುವ 9 ಮತ್ತು 10ನೆ ತರಗತಿ ಮಕ್ಕಳಿಗೆ ಮೂರನೇ ಭಾಷೆಯನ್ನು ಆಯ್ಕೆಯಾಗಿ ಇಡಬೇಕು ಅಥವಾ ಸರ್ಟಿಫಿಕೇಟ್ ಪರೀಕ್ಷೆಯಂತಿಡಬೇಕು. ಈ ಕುರಿತು ಸರಕಾರ ಎಚ್ಚೆತ್ತು ಶಿಕ್ಷಣದಲ್ಲಿ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಚೇತನ್ ಒತ್ತಾಯಿಸಿದರು.
ರೈತ ಹೋರಾಟಗಾರ ಜೆ.ಎಂ.ವೀರಸಂಗಯ್ಯ ಮಾತನಾಡಿ, ರಾಜ್ಯದಲ್ಲಿ ಮೂರನೆ ಭಾಷೆ ಯಾವುದು ಇರಬೇಕೆಂದು ಸರಿಯಾಗಿ ಆಯ್ಕೆ ಮಾಡಿಕೊಳ್ಳದೆ, ಹಿಂದಿಯನ್ನು ಹೇರಿಕೊಂಡಿದ್ದೇವೆ. ದಕ್ಷಿಣ ಕರ್ನಾಟಕವನ್ನು ಹೊರತುಪಡಿಸಿ, ಬಹುತೇಕ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಒಂದು ಭಾಷೆ ಮಾತ್ರ ಬರುತ್ತದೆ. ಅಂತಹವರ ಮೇಲೆ ಮೂರನೇ ಭಾಷೆಯನ್ನು ಹೇರಿ ಬೌದ್ಧಿಕವಾಗಿ ಕುಸಿಯುವಂತೆ ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಹಿಳಾ ಅಧ್ಯಕ್ಷೆ ಸಾರಿಕಾ ಶೋಭಾ, ಕಾರ್ಮಿಕ ಸೇನೆಯ ಅಧ್ಯಕ್ಷ ಆರ್.ಎಂ.ಎನ್. ರಮೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.