ಸಿಎಂ ಸ್ಥಾನ | ಹೈಕಮಾಂಡ್ ಸೂಕ್ತ ತೀರ್ಮಾನ ಕೈಗೊಳ್ಳಲಿದೆ : ಡಿ.ಕೆ.ಶಿವಕುಮಾರ್
ಬೆಂಗಳೂರು : ‘ಮುಂಬರಲಿರುವ 2028ಕ್ಕೆ ಕಾಂಗ್ರೆಸ್ ಪಕ್ಷವನ್ನು ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ತರುವುದು ನಮ್ಮ ಕೆಲಸ. ಸಿಎಂ ಸ್ಥಾನದ ಬಗ್ಗೆ ಪಕ್ಷದ ಹೈಕಮಾಂಡ್ ಸರಿಯಾದ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಶನಿವಾರ ಮಹಾರಾಷ್ಟ್ರದ ಶಿರಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಮುಖ್ಯಮಂತ್ರಿ ಸ್ಥಾನದ ಬಗ್ಗೆ ನಾನು ಏನನ್ನೂ ಚರ್ಚಿಸಲು ಬಯಸುವುದಿಲ್ಲ. ಇದು ಮಾಧ್ಯಮಗಳ ಮುಂದೆ ಚರ್ಚಿಸುವ ವಿಷಯವಲ್ಲ ಎಂದು ಪ್ರತಿಕ್ರಿಯೆಗೆ ನಿರಾಕರಿಸಿದರು.
ಕಾಂಗ್ರೆಸ್ ಪಕ್ಷವು ದೇಶಾದ್ಯಂತ ಹೊಸಬರಿಗೆ ಅವಕಾಶಗಳನ್ನು ನೀಡುತ್ತಿದೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಬ್ಲಾಕ್ ಅಧ್ಯಕ್ಷರಂತಹ ಜವಾಬ್ದಾರಿಗಳನ್ನು ಹೊಸಬರಿಗೆ ನೀಡಲಾಗುತ್ತಿದೆ. ದೇಶಾದ್ಯಂತ ಕಾಂಗ್ರೆಸ್ ಪಕ್ಷವನ್ನು ಕಟ್ಟುವುದು ಅಗತ್ಯ. ಆ ನಿಟ್ಟಿನಲ್ಲಿ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಪರಿಣಾಮಕಾರಿ ಯೋಜನೆ ರೂಪಿಸಿದ್ದಾರೆ ಎಂದು ಅವರು ಹೇಳಿದರು.
ಗುರು ಪೂರ್ಣಿಮೆಯ ದಿನದಂದು ಶಿರಡಿ ಸಾಯಿಬಾಬಾ ದರ್ಶನ ಪಡೆಯಬೇಕೆಂದು ಯೋಚಿಸಿದ್ದೆ. ಆದರೆ, ಆ ದಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದ ಕಾರಣ, ಇಂದು ದರ್ಶನ ಪಡೆಯಲು ಬಂದೆ. ಸಾಯಿಬಾಬಾ ಸಂಸ್ಥಾನವು ಭಕ್ತರ ದರ್ಶನಕ್ಕೆ ಉತ್ತಮ ವ್ಯವಸ್ಥೆ ಮಾಡಿದೆ. ಭಕ್ತರು ಸಂತೋಷದಿಂದ ಸಾಯಿಬಾಬಾ ದರ್ಶನ ಪಡೆಯುವುದನ್ನು ನೋಡಿ ನನಗೆ ಸಂತಸವಾಯಿತು ಎಂದು ನುಡಿದರು.