ಬಿಜೆಪಿ ಕಚೇರಿ ಬಳಿ ಬಾಂಬ್ ಸ್ಫೋಟಿಸಿದ್ದ ಪ್ರಕರಣ | ಆರೋಪಿಯನ್ನು ಬಂಧಿಸಿದ ತಮಿಳುನಾಡು ಪೊಲೀಸರೊಂದಿಗೆ ಸಂಪರ್ಕ : ಸೀಮಂತ್ ಕುಮಾರ್ ಸಿಂಗ್
ಸೀಮಂತ್ ಕುಮಾರ್ ಸಿಂಗ್ | PC : x/@praveen3537
ಬೆಂಗಳೂರು : ಮಲ್ಲೇಶ್ವರಂನ ರಾಜ್ಯದ ಬಿಜೆಪಿ ಕಚೇರಿ ಬಳಿ 2013ರಲ್ಲಿ ಬಾಂಬ್ ಸ್ಫೋಟಿಸಿದ್ದ ಪ್ರಕರಣದ ಪ್ರಮುಖ ಆರೋಪಿ ಅಬೂಬಕರ್ ಸಿದ್ದೀಕಿ(60)ಯನ್ನು ಬಂಧಿಸಿರುವ ತಮಿಳುನಾಡು ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದು, ಅವರ ವಿಚಾರಣೆಯ ಬಳಿಕ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದೇವೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಂಧ್ರಪ್ರದೇಶದ ಅಣ್ಣಮಯ್ಯ ಜಿಲ್ಲೆಯಲ್ಲಿದ್ದ ಆರೋಪಿಯನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದು, ಶೀಘ್ರದಲ್ಲೇ ವಶಕ್ಕೆ ಪಡೆಯಲು ನ್ಯಾಯಾಲಯದ ಮೊರೆ ಹೋಗಲಿದ್ದೇವೆ. ಸದ್ಯ ತಮಿಳುನಾಡು ಪೊಲೀಸರನ್ನು ರಾಜ್ಯ ಭಯೋತ್ಪಾದಕ ನಿಗ್ರಹ ದಳ(ಎಟಿಸಿ) ಅಧಿಕಾರಿಗಳು ಭೇಟಿಯಾಗಿ ಈ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ ಎಂದರು.
ತಮಿಳುನಾಡು ಮೂಲದ ಅಲ್ ಉಮ್ಮಾ ಸಂಘಟನೆಯ ಸದಸ್ಯನಾಗಿ ಅಬೂಬಕ್ಕರ್ ಸಿದ್ದಿಕಿ ಗುರುತಿಸಿಕೊಂಡಿದ್ದ. 2013ರಲ್ಲಿ ಬೆಂಗಳೂರಿನ ಬಿಜೆಪಿ ಕಚೇರಿ ಬಳಿ ಬಾಂಬ್ ಸ್ಫೋಟಿಸಿದ್ದ ಪ್ರಕರಣದ ಹಿಂದೆ ಅಬೂಬಕರ್ ಸಿದ್ದೀಕಿಯ ಕೈವಾಡವಿರುವುದನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಪತ್ತೆಹಚ್ಚಿದ್ದರು.
2013ರ ಎಪ್ರಿಲ್ 17ರಂದು ಮಲ್ಲೇಶ್ವರಂ ಬಿಜೆಪಿ ಕಚೇರಿ ಬಳಿ ಹಳೆಯ ಬೈಕ್‍ನಲ್ಲಿ ಬಾಂಬ್ ಇರಿಸಿ ಸ್ಫೋಟಿಸಲಾಗಿತ್ತು. ಸ್ಫೋಟದಿಂದ ಪೊಲೀಸ್ ಸಿಬ್ಬಂದಿ, ಓರ್ವ ಕಾಲೇಜು ವಿದ್ಯಾರ್ಥಿನಿ ಸಹಿತ 16 ಮಂದಿ ಗಾಯಗೊಂಡಿದ್ದರು. ಪ್ರಕರಣದ ತನಿಖೆ ನಡೆಸಿದ್ದ ಬೆಂಗಳೂರು ಸಿಸಿಬಿ ಪೊಲೀಸರು ಅಬೂಬಕರ್ ಸಿದ್ದೀಕಿ ತಲೆ ಮರೆಸಿಕೊಂಡಿರುವುದಾಗಿ ಚಾರ್ಜ್ ಶೀಟ್ ಸಲ್ಲಿಸಿದ್ದರು.