×
Ad

ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಸಂಸದರು, ಕೇಂದ್ರ ಸಚಿವರು ಹೋರಾಟ ಮಾಡಬೇಕು: ಡಿ.ಕೆ. ಸುರೇಶ್

Update: 2025-07-26 15:30 IST

ಡಿ.ಕೆ.ಸುರೇಶ್‌

ಬೆಂಗಳೂರು, ಜು.26: ಕೇಂದ್ರದಲ್ಲಿ ಬಿಜೆಪಿ ಮೂರು ಬಾರಿ ಅಧಿಕಾರಕ್ಕೆ ಬರುವಲ್ಲಿ ಕರ್ನಾಟಕದ ಪಾತ್ರ ಮಹತ್ತರವಾಗಿದೆ. ಹೀಗಾಗಿ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಸಂಸದರು ಹಾಗೂ ಕೇಂದ್ರ ಸಚಿವರು ಹೋರಾಟ ಮಾಡಬೇಕು” ಎಂದು ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್ ಆಗ್ರಹಿಸಿದ್ದಾರೆ.

ಸದಾಶಿವ ನಗರ ನಿವಾಸದಲ್ಲಿ ಶನಿವಾರ ಮಾಧ್ಯಮಗಳ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯಿಸಿದರು.

ಮಹದಾಯಿ ಯೋಜನೆಗೆ ಗೋವಾ ತಗಾದೆ ಕುರಿತಾಗಿ ಕೇಳಿದಾಗ, “ಗೋವಾ ಹಾಗೂ ಕರ್ನಾಟಕ ಬಹಳ ಅನ್ಯೋನ್ಯವಾಗಿದ್ದ ರಾಜ್ಯಗಳು. ಮಹದಾಯಿ ಕುಡಿಯುವ ನೀರಿನ ಯೋಜನೆ. ಆದರೆ ಬಹಳ ವರ್ಷಗಳಿಂದ ಇಲ್ಲಸಲ್ಲದ ಕ್ಯಾತೆ ತೆಗೆದುಕೊಂಡು ಉತ್ತರ ಕರ್ನಾಟಕ ಭಾಗದ ಕುಡಿಯುವ ನೀರಿನ ಯೋಜನೆಗೆ ತೊಂದರೆ ನೀಡಲಾಗುತ್ತಿದೆ. ಸುಪ್ರೀಂ ಕೋರ್ಟ್ ತೀರ್ಪಿನ ಹೊರತಾಗಿಯೂ ಗೋವಾ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರವನ್ನು ಬಳಸಿಕೊಂಡು ಕರ್ನಾಟಕಕ್ಕೆಅನ್ಯಾಯ ಮಾಡುತ್ತಿರುವುದು ಎದ್ದು ಕಾಣುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ಹಾಗೂ ಕೇಂದ್ರ ಜಲಶಕ್ತಿ ಸಚಿವರು ಆದಷ್ಟು ಬೇಗ ಈ ಕುಡಿಯುವ ನೀರಿನ ವಿಚಾರವಾಗಿ ರಾಜ್ಯದಲ್ಲಿ ಆಗುತ್ತಿರುವ ಅನ್ಯಾಯ ಸರಿಪಡಿಸಲು ಮಹದಾಯಿ, ಮೇಕೆದಾಟು ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆಗಳಿಗೆ ಅನುಮೋದನೆ ನೀಡಬೇಕು” ಎಂದು ತಿಳಿಸಿದರು.

“ರಾಜ್ಯದ ಜನ ಬಿಜೆಪಿಗೆ ಸುಮಾರು 20ಕ್ಕೂ ಹೆಚ್ಚು ಸ್ಥಾನಗಳನ್ನು ನೀಡಿದ್ದಾರೆ. ಆದರೂ ಕೂಡ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಮೂರು ಬಾರಿ ಅಧಿಕಾರಕ್ಕೆ ಬರಲು ಕರ್ನಾಟಕ ಜನರ ಕೊಡುಗೆ ಮಹತ್ತರವಾದದ್ದು, ಆದರೂ ನಮ್ಮ ಸಂಸದರು, ಸಚಿವರು ಈ ವಿಚಾರವಾಗಿ ಚಕಾರ ಎತ್ತುತ್ತಿಲ್ಲ. ಈ ವಿಚಾರದಲ್ಲಿ ಕನ್ನಡಿಗರಿಗೆ ನ್ಯಾಯ ಕೊಡಿಸಲು ಹೋರಾಟ ಮಾಡುತ್ತಿಲ್ಲ. ಈ ಯೋಜನೆಗಳಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದರೆ, ರಾಜ್ಯದ ರೈತರು ಹಾಗೂ ರಾಜ್ಯಕ್ಕೆ ಅನುಕೂಲವಾಗುತ್ತದೆ. ಹೀಗಾಗಿ ಈ ವಿಚಾರಗಳನ್ನು ಬಗೆಹರಿಸುವ ಕೆಲಸವನ್ನು ಮಾಡಬೇಕು ಎಂದು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಮನವಿ ಮಾಡುತ್ತೇನೆ” ಎಂದು ತಿಳಿಸಿದರು.

  ಪ್ರಹ್ಲಾದ್ ಜೋಷಿ ಮನಸ್ಸು ಮಾಡಬೇಕು

ಮಹದಾಯಿ ವಿಚಾರವಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಷಿಯವರ ಹೇಳಿಕೆ ಬಗ್ಗೆ ಕೇಳಿದಾಗ, “ಪ್ರಹ್ಲಾದ ಜೋಷಿ ಕಳೆದ 10 ವರ್ಷಗಳಿಂದ ಕೇಂದ್ರದ ಮಂತ್ರಿಯಾಗಿದ್ದಾರೆ. ಈ ಯೋಜನೆಯಿಂದ ಅವರ ಕ್ಷೇತ್ರದ ಜನರಿಗೆ ಕುಡಿಯುವ ನೀರನ್ನು ಪೂರೈಸಬೇಕಾಗಿದೆ. ಅವರೇ ತಮ್ಮ ಕ್ಷೇತ್ರದ ಜನರಿಗೆ ಏನು ಮಾಡಲಿಲ್ಲವಾದರೆ, ಅವರ ಮಾತನ್ನು ಏನೆಂದು ಕೇಳುತ್ತೀರಿ. ಹುಬ್ಬಳ್ಳಿ- ಧಾರವಾಡ ಹಾಗೂ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಕುಡಿಯುವ ನೀರು ದೊರಕಿಸುವುದು, ಕನ್ನಡಿಗರಿಗೆ ನ್ಯಾಯ ದೊರಕಿಸಬೇಕು ಎಂದು ಇಚ್ಛಾಶಕ್ತಿ ಅವರಿಗೆ ಇದ್ದರೆ ಪ್ರಧಾನ ಮಂತ್ರಿಗೆ ಬಹಳ ಹತ್ತಿರವಿರುವ ಅವರು ಜಲಶಕ್ತಿ ಹಾಗೂ ಅರಣ್ಯ ಸಚಿವರಿಗೆ ಹೇಳಿ ಅನುಮತಿ ಕೊಡಿಸಬಹುದು. ನಾನು ಪ್ರಹ್ಲಾದ ಜೋಷಿ ಅವರನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ಅವರು ಮನಸ್ಸು ಮಾಡಿದರೆ ಈ ವಿಚಾರ ದೊಡ್ಡದಲ್ಲ. ಅವರಿಗೆ ಕರ್ನಾಟಕದ ಹಿತ ಬೇಕಿಲ್ಲ. ಆದರೂ ಕರ್ನಾಟಕದ ಜನ ಅವರನ್ನೇ ಬಯಸಿದ್ದಾರೆ, ಏನು ಮಾಡಲು ಆಗುವುದಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮತಗಳ್ಳತನದ ಬಗ್ಗೆ ನಮ್ಮ ನಾಯಕರ ಹೇಳಿಕೆಗೆ ಸಹಮತ:

ಕರ್ನಾಟಕದ ಲೋಕಸಭಾ ಕ್ಷೇತ್ರವೊಂದರಲ್ಲಿ ಮತಗಳ್ಳತನ ಅಕ್ರಮ ನಡೆದಿದೆ ಎಂದು ರಾಹುಲ್ ಗಾಂಧಿ ಅವರು ಹೇಳಿದ್ದು, ನಿಮ್ಮ ಕ್ಷೇತ್ರದಲ್ಲೂ ಈ ರೀತಿ ಅಕ್ರಮ ನಡೆದಿತ್ತೆ ಎಂದು ಕೇಳಿದಾಗ, “ಚುನಾವಣಾ ಮತಪಟ್ಟಿಗೆ ಸಂಬಂಧಿಸಿದಂತೆ ಅನೇಕ ಗೊಂದಲಗಳಿರುವುದನ್ನು ನಾವು ನೋಡಿದ್ದೇವೆ. ನಗರ ಪ್ರದೇಶಗಳಲ್ಲಿ ಅನೇಕ ವ್ಯತ್ಯಾಸಗಳು, ಗೊಂದಲಗಳನ್ನು ಗಮನಿಸಿದ್ದೇವೆ. ಈಗಾಗಲೇ ಈ ವಿಚಾರವಾಗಿ ರಾಹುಲ್ ಗಾಂಧಿ, ಸಿಎಂ ಹಾಗೂ ಡಿಸಿಎಂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರ ಅಭಿಪ್ರಾಯಕ್ಕೆ ನಾನು ಸಮ್ಮತಿಸುತ್ತೇನೆ. ಅವರು ಈಗಾಗಲೇ ಈ ವಿಚಾರವಾಗಿ ಹೇಳಿಕೆ ನೀಡಿರುವುದರಿಂದ ನಾನು ಹೆಚ್ಚಾಗಿ ಹೇಳುವುದೇನು ಇಲ್ಲ” ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News