×
Ad

ತಲಾದಾಯದಲ್ಲಿ ನಮ್ಮ ರಾಜ್ಯ ಪ್ರಥಮ ಸ್ಥಾನಕ್ಕೇರಲು ಗ್ಯಾರಂಟಿಗಳು ಕಾರಣ : ಸಿಎಂ ಸಿದ್ದರಾಮಯ್ಯ

Update: 2025-07-26 21:55 IST

ಬೆಂಗಳೂರು : ನಮ್ಮ ರಾಜ್ಯವು ತಲಾದಾಯದಲ್ಲಿ ಇಡೀ ದೇಶದಲ್ಲಿ ಪ್ರಥಮ ಸ್ಥಾನಕ್ಕೇರಿದೆ. ಇದಕ್ಕೆ ಪ್ರಮುಖ ಕಾರಣ ಜನರ ಕೊಳ್ಳುವ ಶಕ್ತಿ ಹೆಚ್ಚಾಗಿರುವುದು. ಕೊಳ್ಳುವ ಶಕ್ತಿ ಹೆಚ್ಚಾಗಲು ನಮ್ಮ ಗ್ಯಾರಂಟಿ ಯೋಜನೆಗಳು ಪ್ರಮುಖ ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಶನಿವಾರ ಈ ಸಂಬಂಧ ಎಕ್ಸ್‌ ನಲ್ಲಿ ಪೋಸ್ಟ್ ಹಾಕಿರುವ ಅವರು, ಬಿಜೆಪಿಯವರಿಗೆ ಆರ್ಥಿಕತೆ ಅರ್ಥ ಆಗುವುದಿಲ್ಲ. ಅದಕ್ಕೆ ರಾಜ್ಯ ಸರಕಾರದ ಬಳಿ ಅಭಿವೃದ್ಧಿಗೆ ಹಣ ಇಲ್ಲ ಎಂದು ಸುಳ್ಳು ಅಪಪ್ರಚಾರ ಮಾಡುತ್ತಿದ್ದಾರೆ. ರಾಜಕೀಯ ಪ್ರೇರಿತ ಸುಳ್ಳುಗಳನ್ನು ಹೇಳಿ ರಾಜ್ಯದ ಜನರ ದಾರಿ ತಪ್ಪಿಸುವ ಯತ್ನ ಮಾಡಿದರೂ ರಾಜ್ಯದ ಜನತೆ ಯಾಮಾರುವುದಿಲ್ಲ ಎಂದು ಹೇಳಿದ್ದಾರೆ.

ಶಕ್ತಿ ಯೋಜನೆಯಡಿ ಮಹಿಳೆಯರು ಬಸ್‍ಗಳಲ್ಲಿ ಉಚಿತವಾಗಿ ಓಡಾಡಲು ಆರಂಭಿಸಿದ ಬಳಿಕ ಬೆಂಗಳೂರು, ಹುಬ್ಬಳ್ಳಿ-ಧಾರಾವಾಡದಲ್ಲಿ ಉದ್ಯೋಗಸ್ಥ ಮಹಿಳೆಯರ ಪ್ರಮಾಣ ಹೆಚ್ಚಾಗಿದೆ ಎಂದು ಸಸ್ಟೈನೇಬಲ್ ಮೊಬಿಲಿಟಿ ನೆಟ್‍ವರ್ಕ್ ನಡೆಸಿದ ಸಮೀಕ್ಷಾ ವರದಿ ಹೇಳಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಶಕ್ತಿ ಯೋಜನೆಯಿಂದಾಗಿ ಮಹಿಳೆಯರ ಔದ್ಯೋಗಿಕ ದರವು ಬೆಂಗಳೂರಿನಲ್ಲಿ ಶೇ.23 ಮತ್ತು ಹುಬ್ಬಳ್ಳಿ-ಧಾರಾವಾಡದಲ್ಲಿ ಶೇ.21ರಷ್ಟು ಏರಿಕೆಯಾಗಿರುವುದು ಅಧ್ಯಯನದಿಂದ ಬಹಿರಂಗವಾಗಿದೆ. ಮಹಿಳೆಯರಿಗೆ ಈ ಯೋಜನೆಯಿಂದಾಗಿ ಶೇ.30 ರಿಂದ ಶೇ.50ರಷ್ಟು ಖರ್ಚು ಕಡಿಮೆಯಾಗುತ್ತಿರುವುದಾಗಿ ಸ್ವತಃ ಅವರೇ ಸಮೀಕ್ಷೆಯ ವೇಳೆ ಹೇಳಿಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಮಹಿಳೆಯರಿಗೆ ಆರ್ಥಿಕ ಬಲ ತುಂಬಿ, ಅವರನ್ನು ಸ್ವಾವಲಂಬಿಯಾಗಿಸುವ ಉದ್ದೇಶದ ಈ ಯೋಜನೆಯ ಬಗೆಗೆ ಕೇಳಿಬಂದ ಟೀಕೆಗಳು, ವ್ಯವಸ್ಥಿತ ಅಪಪ್ರಚಾರ ಎಲ್ಲವೂ ಸಾಧನೆಯ ಮುಂದೆ ಮಂಡಿಯೂರಿದೆ ಎಂದು ಮುಖ್ಯಮಂತ್ರಿ ಹರ್ಷ ವ್ಯಕ್ತಪಡಿಸಿದ್ದಾರೆ.

ಅಂತರ್‍ರಾಷ್ಟ್ರೀಯ ಮಟ್ಟದಲ್ಲಿಯೂ ವ್ಯಾಪಕ ಪ್ರಶಂಸೆಗೆ ಒಳಗಾಗಿರುವ ನಮ್ಮ ಗ್ಯಾರಂಟಿ ಯೋಜನೆಗಳು ಇಂದು ನಾಡಿನ ಜನರ ತಲಾದಾಯ ಹೆಚ್ಚಿಸಿ, ಅವರ ಬದುಕಿಗೆ ಆರ್ಥಿಕ ಭದ್ರತೆ ಕಲ್ಪಿಸಿದೆ. ನಮ್ಮ ಯೋಜನೆಯೊಂದು ನಿರೀಕ್ಷೆಗೂ ಮೀರಿ ಸಾಧನೆ ಮಾಡಿದರೆ ನನಗೆ ಅದಕ್ಕಿಂತ ಹೆಚ್ಚು ಸಂತಸದ ವಿಷಯ ಬೇರೆ ಇಲ್ಲ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News