ಹೊಸ ವರ್ಷಾಚರಣೆಗೆ ಸಿದ್ಧತೆ: ಮಾದಕ ದಂಧೆಕೋರರ ಮೇಲೆ ನಿಗಾ ವಹಿಸುವಂತೆ ಪೊಲೀಸ್ ಆಯುಕ್ತ ಬಿ.ದಯಾನಂದ್ ಸೂಚನೆ
ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮಾದಕ ಸರಬರಾಜು ದಂಧೆಯಲ್ಲಿ ತೊಡಗಿರುವವರ ಮೇಲೆ ವಿಶೇಷ ನಿಗಾ ವಹಿಸಬೇಕು ಎಂದು ಪೊಲೀಸ್ ಸಿಬ್ಬಂದಿಗಳಿಗೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಸೂಚನೆ ನೀಡಿದ್ದಾರೆ.
ರವಿವಾರ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಈ ಸಂಬಂಧ ಸಭೆ ನಡೆಸಿರುವ ಅವರು, ರಾಜಧಾನಿ ಬೆಂಗಳೂರಿನಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಬಹಳ ವಿಶೇಷವಾಗಿದ್ದು, ಮಾದಕ ಸರಬರಾಜು ದಂಧೆಯಲ್ಲಿ ತೊಡಗಿರುವವರ ಮೇಲೆ ಎಚ್ಚರಿಕೆ ವಹಿಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.
ಪಾರ್ಟಿ ಪ್ರಿಯರ ಸ್ಥಳಗಳಿಗೆ ಮಾದಕ ಪದಾರ್ಥಗಳು ಹೆಚ್ಚಾಗಿ ಸರಬರಾಜು ಆಗುವುದರಿಂದ ಆ ಸ್ಥಳಗಳಲ್ಲಿ ಹೆಚ್ಚಿನ ನಿಗಾ ವಹಿಸುವಂತೆ ಹಾಗೂ ಇತ್ತೀಚಿಗೆ ಜೈಲಿನಿಂದ ಬಿಡುಗಡೆಯಾಗಿರುವ ಮಾದಕ ದಂಧೆಕೋರರ ಮೇಲೆ ಕಣ್ಣಿಡಲು ತಿಳಿಸಿದ್ದಾರೆ.
ಎನ್.ಡಿ.ಪಿ.ಎಸ್ ಪ್ರಕರಣಗಳಲ್ಲಿ ಸೆರೆವಾಸ ಅನುಭವಿಸುತ್ತಿದ್ದ ಸುಮಾರು 180 ಜನ ಕಳೆದ ಒಂದು ತಿಂಗಳ ಅವಧಿಯಲ್ಲಿ ಬಿಡುಗಡೆಯಾಗಿದ್ದಾರೆ. ಆ ಪೈಕಿ ವಿದೇಶಿ ಮೂಲದ ಆರೋಪಿಗಳೇ ಹೆಚ್ಚಾಗಿದ್ದಾರೆ. ಅನೇಕರು ಪುನಃ ಮಾದಕ ಸರಬರಾಜು ದಂಧೆಯಲ್ಲಿ ತೊಡಗಿರುವ ಮಾಹಿತಿಯಿದ್ದು, ಆಯಾ ವಿಭಾಗದ ಆರೋಪಿಗಳನ್ನು ಠಾಣೆಗೆ ಕರೆಯಿಸಿ ಮುಚ್ಚಳಿಕೆ ಬರೆಸಿಕೊಂಡು, ಕಠಿಣ ಎಚ್ಚರಿಕೆ ನೀಡುವಂತೆ ಬಿ.ದಯಾನಂದ್ ಹೇಳಿದ್ದಾರೆ.
ವಿದೇಶಿ ಪ್ರಜೆಗಳು ಹೆಚ್ಚು ವಾಸಿಸುವ ಸ್ಥಳದಲ್ಲಿ ಮಫ್ತಿ ಕಾರ್ಯಾಚರಣೆ, ರೆಸಾರ್ಟ್, ರೇವ್ ಪಾರ್ಟಿ ನಡೆಯುವಂತಹ ಸ್ಥಳ, ಫಾರ್ಮ್ ಹೌಸ್, ಸ್ಟಾರ್ ಹೋಟೆಲ್, ಪಬ್ ಬಾರ್ ಗಳ ಮಾಲಕರನ್ನು ಕರೆಯಿಸಿ ಎಚ್ಚರಿಸಲು ಬಿ.ದಯಾನಂದ್ ಸೂಚಿಸಿದ್ದಾರೆ.