ಏಷ್ಯನ್ ಯೂತ್ ಪ್ಯಾರಾ ಒಲಿಂಪಿಕ್ಸ್ 2025 | ರಾಜ್ಯದ ಯುವ ಪ್ಯಾರಾ ಕ್ರೀಡಾಪಟುಗಳಿಗೆ 3 ಚಿನ್ನ, 2 ಬೆಳ್ಳಿ ಪದಕ
ಬೆಂಗಳೂರು : ದುಬೈನಲ್ಲಿ ನಡೆದ ಏಷ್ಯನ್ ಯೂತ್ ಪ್ಯಾರಾ ಒಲಿಂಪಿಕ್ಸ್ 2025ರಲ್ಲಿ ಕರ್ನಾಟಕದ ಯುವ ಪ್ಯಾರಾ ಕ್ರೀಡಾಪಟುಗಳು ಅದ್ಭುತ ಪ್ರದರ್ಶನ ನೀಡಿದ್ದು, ಮೂರು ಚಿನ್ನ ಹಾಗೂ ಎರಡು ಬೆಳ್ಳಿ ಪದಕಗಳನ್ನು ಗೆಲ್ಲುವ ಮೂಲಕ ರಾಜ್ಯಕ್ಕೂ ದೇಶಕ್ಕೂ ಅಪಾರ ಹೆಮ್ಮೆ ತಂದಿದ್ದಾರೆ.
ನೆಲಮಂಗಲದ ಮೋಹಿತ್ ಪಾಲ್ ಈ ಒಲಿಂಪಿಕ್ಸ್ ನಲ್ಲಿ ಅತ್ಯುತ್ತಮ ಸಾಧನೆ ತೋರಿದ ಕ್ರೀಡಾಪಟುವಾಗಿ ಹೊರಹೊಮ್ಮಿದರು. ಭಾಗಶಃ ದೃಷ್ಟಿಹೀನ ವಿಭಾಗದಲ್ಲಿ ಸ್ಪರ್ಧಿಸಿದ ಅವರು 100 ಮೀಟರ್ ಹಾಗೂ 200 ಮೀಟರ್ ಓಟಗಳಲ್ಲಿ ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದು, 400 ಮೀಟರ್ ಓಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.
ಸರಳ ಕುಟುಂಬ ಹಿನ್ನೆಲೆಯಿಂದ ಬಂದಿರುವ ಮೋಹಿತ್ ಅವರ ಸಾಧನೆ ಶ್ರಮ, ಶಿಸ್ತು ಮತ್ತು ದೃಢ ಸಂಕಲ್ಪದ ಪ್ರತಿಫಲವಾಗಿದೆ. ಅವರ ತಂದೆ ಚಾಲಕರಾಗಿದ್ದು, ತಾಯಿ ಗೃಹಿಣಿ. ಕಳೆದ ಎರಡು ವರ್ಷಗಳಿಂದ ನಿರಂತರ ಕಠಿಣ ತರಬೇತಿ ಪಡೆದು ದೈಹಿಕ ಸಾಮರ್ಥ್ಯ ಮತ್ತು ಮಾನಸಿಕ ದೃಢತೆಯನ್ನು ಬೆಳೆಸಿಕೊಂಡಿರುವುದು ಏಷ್ಯನ್ ಮಟ್ಟದಲ್ಲಿ ಅವರ ಯಶಸ್ಸಿಗೆ ಕಾರಣವಾಯಿತು.
ಚಾಮರಾಜನಗರದ ಸೌಮ್ಯಾ ಅವರು ಸಹ ಭಾಗಶಃ ದೃಷ್ಟಿಹೀನ ವಿಭಾಗದಲ್ಲಿ ಸ್ಪರ್ಧಿಸಿ 1500 ಮೀಟರ್ ಓಟದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಕರ್ನಾಟಕಕ್ಕೆ ಮತ್ತೊಂದು ಸುವರ್ಣ ಕ್ಷಣ ಒದಗಿಸಿದರು. ಉತ್ತಮ ಸಹನಶಕ್ತಿ, ತಂತ್ರಬದ್ಧ ಓಟ ಹಾಗೂ ಆತ್ಮವಿಶ್ವಾಸದಿಂದ ಅವರು ದೂರದ ಓಟದ ವಿಭಾಗದಲ್ಲಿ ತಮ್ಮ ಪ್ರತಿಭೆಯನ್ನು ಮೆರೆದರು.
ಮೈಸೂರು ಮೂಲದ ಭಾರತಿ ಭರತೇಶ್ ಅವರು ಸೆರಿಬ್ರಲ್ ಪಾಲ್ಸಿ ವಿಭಾಗದಲ್ಲಿ ಸ್ಪರ್ಧಿಸಿ ಲಾಂಗ್ ಜಂಪ್‍ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ರಾಜ್ಯಕ್ಕೆ ಗೌರವ ತಂದಿದ್ದಾರೆ.
ಈ ಸಾಧನೆಯ ಹಿಂದೆ ಬೆಂಗಳೂರಿನ ಜಯನಗರದಲ್ಲಿರುವ ಇಂಡಿಯನ್ ಅಥ್ಲೆಟಿಕ್ ಅಕಾಡೆಮಿಯ ಶ್ರಮ ಪ್ರಮುಖವಾಗಿದೆ. ಅಂತರ್‍ರಾಷ್ಟ್ರೀಯ ಅಥ್ಲೀಟ್ ಹಾಗೂ ಕೋಚ್ ರೋಷನ್ ಬಚ್ಚನ್ ಅವರ ನೇತೃತ್ವದಲ್ಲಿ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸ್ಪರ್ಧಿಸಿದ್ದ ಕೋಚ್ ವಿಕ್ರಮ್ ಅವರ ಮಾರ್ಗದರ್ಶನದಲ್ಲಿ ಈ ಕ್ರೀಡಾಪಟುಗಳು ತರಬೇತಿ ಪಡೆದಿದ್ದಾರೆ.
ಸರಿಯಾದ ಮಾರ್ಗದರ್ಶನ, ಶಿಸ್ತುಬದ್ಧ ತರಬೇತಿ ಮತ್ತು ನಿರಂತರ ಬೆಂಬಲ ದೊರೆತರೆ ಪ್ಯಾರಾ ಕ್ರೀಡಾಪಟುಗಳು ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಬಹುದು. ಈ ಮಕ್ಕಳು ಮುಂದಿನ ದಿನಗಳಲ್ಲಿ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಗ್ರಾಂಡ್ ಪ್ರಿ, ಹಿರಿಯರ ಏಷ್ಯನ್ ಒಲಿಂಪಿಕ್ಸ್ ಹಾಗೂ ಒಲಿಂಪಿಕ್ಸ್ ಮಟ್ಟದ ಸ್ಪರ್ಧೆಗಳಿಗೆ ಸಿದ್ಧರಾಗುತ್ತಿದ್ದಾರೆ. ಇವರಿಗೆ ಸರಕಾರ, ಸಂಸ್ಥೆಗಳು ಹಾಗೂ ಸಮಾಜದ ನಿರಂತರ ಬೆಂಬಲ ಅಗತ್ಯವಿದೆ.
ರೋಷನ್ ಬಚ್ಚನ್, ಅಥ್ಲೀಟ್