×
Ad

ಕನ್ನಡ ಹೋರಾಟಗಳು ಮುಂದಿನ ಪೀಳಿಗೆಗೆ ಗೊತ್ತಾಗಬೇಕು : ಪ್ರೊ.ಎಲ್.ಎನ್.ಮುಕುಂದರಾಜ್

Update: 2025-01-31 23:09 IST

ಬೆಂಗಳೂರು : ಕನ್ನಡ ಸಂಘರ್ಷ ಸಮಿತಿಯ ಹೋರಾಟಗಳಿಗೆ ಹಲವು ದಶಕಗಳ ಇತಿಹಾಸವಿದೆ. ಕನ್ನಡದ ಇತಿಹಾಸ, ಹೋರಾಟಗಳು ಸರಿಯಾದ ರೀತಿಯಲ್ಲಿ ಚಾರಿತ್ರಿಕ ದಾಖಲೆಗಳಾಗಿ ಕನ್ನಡಿಗರಿಗೆ ಮತ್ತು ಮುಂದಿನ ಪೀಳಿಗೆಗೆ ಗೊತ್ತಾಗಬೇಕು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಪ್ರೊ.ಎಲ್.ಎನ್.ಮುಕುಂದರಾಜ್ ಹೇಳಿದ್ದಾರೆ.

ಶುಕ್ರವಾರ ನಗರದ ಬಿಎಂಶ್ರೀ ಸಭಾಂಗಣದಲ್ಲಿ ಕನ್ನಡ ಸಂಘರ್ಷ ಸಮಿತಿಯ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರಕವಿ ಕುವೆಂಪು ಮತ್ತು ದ.ರಾ.ಬೇಂದ್ರೆ ಹುಟ್ಟುಹಬ್ಬ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗೋಕಾಕ್ ಹೋರಾಟದಲ್ಲಿ ಅನೇಕ ಸಂಘಟನೆಗಳು, ಹೋರಾಟಗಾರರು, ಕಲಾವಿದರು, ತರುಣರು ಭಾಗವಹಿಸಿದ್ದರು. ಇದೀಗ ಕನ್ನಡಕ್ಕಾಗಿ, ಕನ್ನಡ ಸಂಘರ್ಷ ಸಮಿತಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಗಟ್ಟಿಯಾಗಿ ಸಂಘಟನೆ ಮಾಡುತ್ತಾ ಬರುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕುವೆಂಪು ಅನಿಕೇತನ ಪ್ರಶಸ್ತಿ ಪುರಸ್ಕೃತ ವಡ್ಡಗೆರೆ ನಾಗರಾಜಯ್ಯನವರು ಈಗಲೂ ಹೋರಾಟದ ಸ್ಪೂರ್ತಿಯನ್ನು ಜೀವನದಲ್ಲಿಟ್ಟುಕೊಂಡು ತಳಸಮುದಾಯ ಜನರ ಕಷ್ಟಗಳಿಗೆ ಮಿಡಿಯುವ ಕೆಲಸವನ್ನು ಮುಂದುವರೆಸಿದ್ದಾರೆ. ಹಳ್ಳಿಯಿಂದ ಬಂದವರಿಗೆ, ಕೆಳಜಾತಿಗಳಲ್ಲಿ ಹುಟ್ಟಿದವರಿಗೆ ಗೌರವ ಸಿಕ್ಕುವುದು ದೊಡ್ಡ ಸಂಗತಿ. ದಲಿತರು ಒಂದು ಕಾಲದಲ್ಲಿ ಸಾಕಷ್ಟು ಅವಮಾನ-ಹಿಂಸೆಗಳನ್ನು ಅನುಭವಿಸಬೇಕಾಗಿತ್ತು. ಗಣರಾಜ್ಯೋತ್ಸವ ಸಮಾರಂಭದಲ್ಲಿ ದಲಿತರನ್ನು ಕೂರಿಸಿದ್ದಕ್ಕಾಗಿ ಶಾಲೆಯ ಶಿಕ್ಷಕಿಯನ್ನು ಕೆಟ್ಟದಾಗಿ ಬೈದಿರುವಂತ ಘಟನೆಗಲು ನಡೆಯುತ್ತಿವೆ ಎಂದು ಮುಕುಂದರಾಜ್ ಬೇಸರ ವ್ಯಕ್ತಪಡಿಸಿದರು.

ಕುವೆಂಪು ಚಿರಂತನ ಪ್ರಶಸ್ತಿ ಪುರಸ್ಕೃತ ಅಗ್ರಹಾರ ಕೃಷ್ಣಮೂರ್ತಿ ಅನೇಕ ಸಾಹಿತಿಗಳನ್ನು ಜೀವನದಲ್ಲಿ ಬೆಳೆಸಿದ್ದಾರೆ. ಲಂಕೇಶ್ ಅವರು ಅಗ್ರಹಾರ ಕೃಷ್ಣಮೂರ್ತಿಗೆ ಮುಖ್ಯ ಗುರು. ಅವರು ಕಳಿಸಿದ ಪಾಠವನ್ನು ಕೃಷ್ಣಮೂರ್ತಿಯವರು ಬದುಕಿನುದ್ದಕ್ಕೂ ಕಾಪಾಡಿಕೊಂಡು, ಅವರು ತೋರಿಸಿದ ದಾರಿಯಲ್ಲಿ ನಡೆಯುತ್ತಿದ್ದಾರೆ. ಯಾವುದೇ ಒಬ್ಬ ಲೇಖಕ ಸಂಕಷ್ಟಕ್ಕೆ, ಅನ್ಯಾಯಕ್ಕೆ ಸಿಲುಕಿಕೊಂಡಿದ್ದಾರೆಂದು ಕೃಷ್ಣಮೂರ್ತಿ ಗಮನಕ್ಕೆ ಬಂದರೆ, ಅವರು ಅದನ್ನು ನೋಡಿಕೊಂಡು ಸುಮ್ಮನೆ ಕುಳಿತುಕೊಂಡು ಇರುತ್ತಿರಲಿಲ್ಲ. ಎಲ್ಲ ಲೇಖಕರನ್ನು ಸಂಘಟಿಸಿಕೊಂಡು ಹೋರಾಟ ಮಾಡುತ್ತಿದ್ದರು ಎಂದು ಅವರು ಹೇಳಿದರು.

ಕುವೆಂಪು ಯುವಕವಿ ಪ್ರಶಸ್ತಿ ಪುರಸ್ಕೃತೆ ಹುಲಿಕುಂಟೆ ಮಂಜುಳಾ ಅಂತಹ ಪ್ರತಿಭೆ ಹೊಂದಿರುವ ಅನೇಕ ಯುವಕ ಯುವತಿಯರು ನಮ್ಮೊಂದಿಗೆ ಇದ್ದಾರೆ. ಅಂತಹವರನ್ನು ಗುರುತಿಸಿ ಅವರ ಬೆನ್ನು ತಟ್ಟಿ, ಪ್ರೋತ್ಸಾಹ ಮಾಡುವರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ ಇವೆ. ಅಂತಹದರಲ್ಲಿ ಕನ್ನಡ ಸಂಘರ್ಷ ಸಮಿತಿ ಯುವ ಪ್ರತಿಬೆಗಳನ್ನು ಗುರುತಿಸಿ ಪ್ರೋತ್ಸಾಹ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದು ಮುಕುಂದರಾಜ್ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕøತರಾದ ಡಾ.ವಡ್ಡಗೆರೆ ನಾಗರಾಜಯ್ಯ, ಪ್ರೊ.ಅಗ್ರಹಾರ ಕೃಷ್ಣಮೂರ್ತಿ, ಮಂಜುಳಾ ಹುಲಿಕುಂಟೆ, ಅಧ್ಯಕ್ಷ ಎ.ಎಸ್.ನಾಗರಾಜಸ್ವಾಮಿ, ಕಾರ್ಯಕಾರಿ ಸದಸ್ಯ ಪಿ.ಆರ್.ಪ್ರಭು, ಬಿ.ಸಿ. ಜಗದೀಶ್, ಪ್ರಾಧ್ಯಾಪಕ ಡಾ.ಕಾ.ವೆಂ.ಶ್ರೀನಿವಾಸಮೂರ್ತಿ, ರಾಮಣ್ಣ ಎಚ್.ಕೋಡಿಹೊಸಹಳ್ಳಿ, ತಾ.ಸಿ. ತಿಮ್ಮಯ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು.



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News