ಯುಜಿಸಿ ಕರಡು ನಿಯಮಗಳನ್ನು ಕೇಂದ್ರ ಸರಕಾರ ಹಿಂಪಡೆಯಲಿ : ಪ್ರೊ.ನಿರಂಜನಾರಾಧ್ಯ ಆಗ್ರಹ
ನಿರಂಜನಾರಾಧ್ಯ ವಿ.ಪಿ
ಬೆಂಗಳೂರು : ವಿಶ್ವವಿದ್ಯಾನಿಲಯಗಳು ಮತ್ತು ಸಂಯೋಜಿತ ಕಾಲೇಜುಗಳಲ್ಲಿ ಶಿಕ್ಷಕರು ಮತ್ತು ಶೈಕ್ಷಣಿಕ ಸಿಬ್ಬಂದಿಯ ನೇಮಕಾತಿ, ಬಡ್ತಿಗಾಗಿ ಕನಿಷ್ಠ ಅರ್ಹತೆಗಳು ಮತ್ತು ಉನ್ನತ ಶಿಕ್ಷಣದಲ್ಲಿ ಗುಣಮಟ್ಟವನ್ನು ನಿರ್ವಹಿಸುವ ಕ್ರಮಗಳಿಗೆ ಸಂಬಂಧಿಸಿದಂತೆ ರೂಪಿಸಲಾದ ಯುಜಿಸಿ ಕರಡು ನಿಯಮಗಳು ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿದ್ದು, ಕೇಂದ್ರ ಸರಕಾರ ತಕ್ಷಣ ಅದನ್ನು ಹಿಂಪಡೆಯಬೇಕು ಎಂದು ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ.ಪಿ ಆಗ್ರಹಿಸಿದ್ದಾರೆ.
ಶುಕ್ರವಾರ ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಯುಜಿಸಿ ಕರಡು ನಿಯಮಗಳು ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಡುವೆ ಹೊಸ ಬಗೆಯ ಸಂಘರ್ಷಕ್ಕೆ ಕಾರಣವಾಗಿವೆ. ಕೇಂದ್ರೀಕರಣ, ಕಾರ್ಪೊರೇಟರೀಕರಣ ಮತ್ತು ಖಾಸಗೀಕರಣವನ್ನೇ ತನ್ನ ಮೂಲ ಗುರಿಯನ್ನಾಗಿಸಿಕೊಂಡಿರುವ ಕೇಂದ್ರ ಸರಕಾರವು, ಒಂದು ದಶಕದಿಂದ ಒಂದಲ್ಲ ಒಂದು ಬಗೆಯಲ್ಲಿ ಶಿಕ್ಷಣವನ್ನು ಪೂರ್ಣವಾಗಿ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ರೀತಿಯಲ್ಲಿ ಕಾನೂನು, ನೀತಿ ಹಾಗು ಕಾರ್ಯಕ್ರಮಗಳನ್ನು ರೂಪಿಸುತ್ತಿದೆ ಎಂದು ಖಂಡಿಸಿದ್ದಾರೆ.
ಭಾರತದ ವಿಕೇಂದ್ರೀಕರಣ ಶಿಕ್ಷಣ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಾಶಪಡಿಸಲು ಪಣತೊಟ್ಟಿರುವ ಕೇಂದ್ರ ಸರಕಾರವು ತನ್ನ ಅಸಂವಿಧಾನಿಕ ಮತ್ತು ಅಪ್ರಜಾಸತ್ತಾತ್ಮಕ ನೀತಿಗಳ ಮೂಲಕ ಹಲವು ಕ್ರಮಗಳನ್ನು ಹಂತಹಂತವಾಗಿ ಜಾರಿಗೊಳಿಸುತ್ತಿದೆ. ಇದು ಕಾಲೇಜು ಹಾಗೂ ವಿಶ್ವವಿದ್ಯಾಲಯಗಳ ನಿರ್ವಹಣೆಯಲ್ಲಿ ರಾಜ್ಯ ಸರಕಾರಗಳಿಗಿರುವ ಅಧಿಕಾರವನ್ನು ಮೊಟಕುಗೊಳಿಸುವ ಕೇಂದ್ರದ ಕೊನೆಯ ಪ್ರಯತ್ನವಾಗಿದೆ ಎಂದು ನಿರಂಜನಾರಾಧ್ಯ ವಿ.ಪಿ ತಿಳಿಸಿದ್ದಾರೆ.
ಯುಜಿಸಿಯ ಹೊಸ ಕರಡು ನಿಯಮಗಳು ರಾಜ್ಯ ಸರಕಾರ ಮತ್ತು ವಿಶ್ವವಿದ್ಯಾಲಯಗಳಿಗೆ ಸ್ವಾಯತ್ತ ಅಧಿಕಾರವನ್ನು ನಿರಾಕರಿಸುವ ಮತ್ತು ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಪ್ರಯತ್ನವಾಗಿದೆ. ಒಕ್ಕೂಟ ವ್ಯವಸ್ಥೆ ಸಂವಿಧಾನದ ಮೂಲ ತಳಹದಿಯಾಗಿದ್ದು, ರಾಜ್ಯಗಳಿಗೆ ತನ್ನ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸುವ, ನಡೆಸುವ ಮತ್ತು ನಿರ್ವಹಿಸುವ ಅಧಿಕಾರ ನೀಡುತ್ತದೆ. ಈ ವಿಷಯದಲ್ಲಿ ಕೇಂದ್ರ ಸರಕಾರ ಅನಗತ್ಯವಾಗಿ ಆಡಳಿತಾತ್ಮಕ ಮತ್ತು ಶೈಕ್ಷಣಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ನಿರಂಜನಾರಾಧ್ಯ ವಿ.ಪಿ ತಿಳಿಸಿದ್ದಾರೆ.