Bengaluru | ತರಗತಿಯಲ್ಲಿ ಮುಸ್ಲಿಮ್ ವಿದ್ಯಾರ್ಥಿಗೆ 13 ಬಾರಿ ‘ಟೆರರಿಸ್ಟ್‌’ ಎಂದ ಪ್ರಾಧ್ಯಾಪಕ ಡಾ.ಮುರಳೀಧರ್ ದೇಶಪಾಂಡೆ ಅಮಾನತು: ವಿಡಿಯೋ ವೈರಲ್

Update: 2026-03-28 10:32 IST

ಬೆಂಗಳೂರು: ನಗರದ ಪಿಇಎಸ್ ವಿಶ್ವವಿದ್ಯಾನಿಲಯದ ಇಲೆಕ್ಟ್ರಾನಿಕ್ ಸಿಟಿ ಕ್ಯಾಂಪಸ್ ನಲ್ಲಿ ಪ್ರಾಧ್ಯಾಪಕರೊಬ್ಬರು ಮುಸ್ಲಿಮ್ ವಿದ್ಯಾರ್ಥಿಯನ್ನು ತರಗತಿಯ ವೇಳೆ 13 ಬಾರಿ ‘ಟೆರರಿಸ್ಟ್’ ಎಂದು ಕರೆದಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಸಂಬಂಧ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಡಾ. ಮುರಳೀಧರ್ ದೇಶಪಾಂಡೆ ಎಂದು ಗುರುತಿಸಲಾದ ಪ್ರಾಧ್ಯಾಪಕರು ಮಾರ್ಚ್ 27ರಂದು ತರಗತಿಯ ವೇಳೆ ವಿದ್ಯಾರ್ಥಿಯನ್ನು 13 ಬಾರಿ ‘ಟೆರರಿಸ್ಟ್’ ಎಂದು ಕರೆಯುವ ಮೂಲಕ ಅವಮಾನಿಸಿದ್ದಾರೆ ಎಂದು ಹೇಳಲಾಗಿದೆ. ಈ ಘಟನೆ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

‘ದಿ ಅಬ್ಸರ್ವರ್ ಪೋಸ್ಟ್’ ವರದಿ ಪ್ರಕಾರ, ಅಫಾನ್ ಎಂಬ ವಿದ್ಯಾರ್ಥಿಯನ್ನು ತರಗತಿಯಲ್ಲಿ ಪ್ರಾಧ್ಯಾಪಕರು ನಿಂದಿಸಿದ್ದಾರೆ ಎನ್ನಲಾಗಿದೆ. “ಇರಾನ್ ಯುದ್ಧವು ನಿಮ್ಮಂತಹವರಿಂದಾಗಿದೆ”, “ಟ್ರಂಪ್ ನಿಮ್ಮನ್ನು ಕರೆದೊಯ್ಯುತ್ತಾರೆ”, “ನೀವು ಮೂರ್ಖರು, ನೀವು ನರಕಕ್ಕೆ ಹೋಗುತ್ತೀರಿ” ಎಂಬ ಹೇಳಿಕೆಗಳನ್ನು ಸುಮಾರು 60 ವಿದ್ಯಾರ್ಥಿಗಳ ಎದುರು ನೀಡಿದ್ದಾರೆ ಎಂದು ವರದಿ ಹೇಳಿದೆ. ಇದರಿಂದಾಗಿ ತರಗತಿಯಲ್ಲಿ ಅವಮಾನಕಾರಿ ವಾತಾವರಣ ನಿರ್ಮಾಣವಾಗಿದೆ ಎಂಬ ಆರೋಪ ಕೇಳಿಬಂದಿದೆ.

ಈ ಘಟನೆಗೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಾವಳಿಗಳನ್ನು ಅಳಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಅಫಾನ್ ಅವರಿಗೆ ಬೆಂಬಲ ನೀಡಿದ ಕೆಲವು ವಿದ್ಯಾರ್ಥಿಗಳನ್ನು “ತರಗತಿಯ ವೇಳೆ ಮಾತನಾಡಿದ ಕಾರಣ” ಅಮಾನತುಗೊಳಿಸಲಾಗಿದೆ ಎಂಬ ವರದಿಯೂ ಹೊರಬಂದಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ.

ಘಟನೆಯ ಬಳಿಕ ಪ್ರಾಧ್ಯಾಪಕರು ಕಾಲೇಜಿಗೆ ಕ್ಷಮೆಯಾಚಿಸಿದ್ದಾರೆ ಎನ್ನಲಾಗಿದ್ದು, ಅವರು ಅಫಾನ್ ಅವರಿಗೆ ನೇರವಾಗಿ ಕ್ಷಮೆಯಾಚಿಸಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ.

ವಿಡಿಯೋ ಬಹಿರಂಗವಾದ ಬಳಿಕ ಪಿಇಎಸ್ ವಿಶ್ವವಿದ್ಯಾಲಯ ಆಡಳಿತ ತಕ್ಷಣ ಕ್ರಮ ಕೈಗೊಂಡಿದ್ದು, ಪ್ರಾಧ್ಯಾಪಕರನ್ನು ಅಮಾನತುಗೊಳಿಸಿದೆ. ಮಾರ್ಚ್ 27ರ ಅಧಿಕೃತ ಆದೇಶದಲ್ಲಿ, “ವಿದ್ಯಾರ್ಥಿಯಿಂದ ಬಂದ ದೂರನ್ನು ಸ್ವೀಕರಿಸಲಾಗಿದೆ. ಪ್ರಕರಣದ ಕುರಿತು ಸಮಗ್ರ ವಿಚಾರಣೆ ನಡೆಯುವವರೆಗೆ ನಿಮ್ಮನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ” ಎಂದು ಉಲ್ಲೇಖಿಸಿ ಆದೇಶ ನೀಡಲಾಗಿದೆ. ಈ ಆದೇಶಕ್ಕೆ ಕುಲಪತಿಗಳು ಸಹಿ ಹಾಕಿದ್ದಾರೆ. ಆದರೆ, ಘಟನೆಯ ಸ್ವರೂಪದ ಬಗ್ಗೆ ಹೆಚ್ಚಿನ ವಿವರ ಅಮಾನತು ಆದೇಶದಲ್ಲಿ ನೀಡಲಾಗಿಲ್ಲ.

ಈ ಕುರಿತು SIO ನ PR ಕಾರ್ಯದರ್ಶಿ ಮುಹಮ್ಮದ್ ಹೈಯಾನ್ ಅವರು 'ವಾರ್ತಾ ಭಾರತಿ' ಗೆ ದೂರವಾಣಿ ಮೂಲಕ ಪ್ರತಿಕ್ರಿಯಿಸಿ, ಘಟನೆಯನ್ನು ಖಂಡಿಸಿದ್ದಾರೆ. ಈ ಘಟನೆ ಇಲೆಕ್ಟ್ರಾನಿಕ್ ಸಿಟಿ ಕ್ಯಾಂಪಸ್ ನಲ್ಲಿ ನಡೆದಿದ್ದು, ಸಂಬಂಧಿತ ಪ್ರಾಧ್ಯಾಪಕರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಇನ್ನೊಂದೆಡೆ, ಎನ್‌ಎಸ್‌ಯುಐ ಸಂಘಟನೆಯು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ ದಾಖಲಿಸಿದೆ ಎಂದು ತಿಳಿದುಬಂದಿದೆ. ಆದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಎಫ್‌ಐಆರ್ ದಾಖಲಾಗಿಲ್ಲ.

ಈ ಕುರಿತು ಸ್ಪಷ್ಟೀಕರಣಕ್ಕಾಗಿ ವಾರ್ತಾ ಭಾರತಿ ವಿಶ್ವವಿದ್ಯಾಲಯಕ್ಕೆ ಇಮೇಲ್ ಕಳುಹಿಸಿದ್ದು, ಡಾ. ಮುರಳೀಧರ್ ದೇಶಪಾಂಡೆ ಅವರಿಂದಲೂ ಪ್ರತಿಕ್ರಿಯೆ ಕೋರಲಾಗಿದೆ. ಅಧಿಕೃತ ಪ್ರತಿಕ್ರಿಯೆ ಲಭಿಸಿದ ಬಳಿಕ ಹೆಚ್ಚಿನ ವಿವರಗಳನ್ನು ಪ್ರಕಟಿಸಲಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News