×
Ad

ಬೆಂಗಳೂರು ನಗರದಲ್ಲಿ ಮುಂದುವರೆದ ಮಳೆ, ಜಲದಿಗ್ಬಂಧನದಲ್ಲಿ ಜನತೆ

Update: 2025-05-20 20:45 IST

ಬೆಂಗಳೂರು: ರಾಜಧಾನಿ ಬೆಂಗಳೂರು ನಗರದಲ್ಲಿ ಸತತ ನಾಲ್ಕನೇ ದಿನವೂ ಮಳೆಯಾಗಿದ್ದು, ಮಂಗಳವಾರದಂದು ಸುರಿದ ಮಳೆಗೆ ರಸ್ತೆಗಳು ಕೆರೆಯಂತಾಗಿದ್ದವು. ನಿರಂತರ ಮಳೆಯಿಂದಾಗಿ ನಗರದ ಬಹುತೇಕ ಬಡಾವಣೆಗಳು ಜಲಾವೃತಗೊಂಡು, ಮನೆಗಳಿಗೆ ನೀರು ನುಗ್ಗಿದ್ದು, ಸಾವಿರಾರು ಜನರು ಜಲದಿಗ್ಬಂಧನದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.

ನಗರದಲ್ಲಿ ನಾಲ್ಕು ದಿನಗಳಿಂದ ರಾತ್ರಿಯಾಗುತ್ತಿದ್ದಂತೆ ಮಳೆ ಆರಂಭವಾಗುತ್ತಿದ್ದು, ಮುಂಜಾನೆ 5 ಗಂಟೆಯ ವರೆಗೆ ಮಳೆ ಸುರಿಯುತ್ತಿದೆ. ನಂತರ ಮಧ್ಯಾಹ್ನ 3 ಗಂಟೆಯ ವರೆಗೆ ಬಿಡುವು ನೀಡಿ ಮತ್ತೆ ಮಳೆ ಶುರುವಾಗುತ್ತಿದೆ. ಹೀಗಾಗಿ ನಗರದ ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ಮಳೆನೀರು ನುಗ್ಗಿದೆ. ರಸ್ತೆ ಬದಿಯಲ್ಲಿದ್ದ ಚಂರಂಡಿಗೆ ನೀರು ಹೋಗದೆ ರಸ್ತೆಗಳ ಮೇಲೆ ನೀರು ಬರುತ್ತಿದ್ದ ದೃಶ್ಯಗಳು ಕಂಡುಬಂದಿತು.

ಮಳೆನೀರು ನಿಂತು ಭಾರೀ ಸುದ್ದಿಯಾಗಿದ್ದ ಸಿಲ್ಕ್ ಬೋರ್ಡ್ ಮೆಟ್ರೋ ಸ್ಟೇಶನ್ ಬಳಿಯ ರಸ್ತೆಯು ಮಂಗಳವಾರ ಬೆಳಗ್ಗೆ ಮಳೆ ಸುರಿದ ಕಾರಣ ಮತ್ತೆ ಜಲಾವೃತಗೊಂಡಿತ್ತು. ಪಂಪ್‍ಸೆಟ್ ಮತ್ತು ಮೋಟಾರುಗಳನ್ನು ಬಳಸಿ ನೀರನ್ನು ಪಕ್ಕದಲ್ಲೇ ಹರಿಯುವ ರಾಜಾ ಕಾಲುವೆಗೆ ಹಾಕಲಾಗುತ್ತಿತ್ತು. ಈ ರಸ್ತೆಯನ್ನು ಬಂದ್ ಮಾಡಿ, ಪರ್ಯಾಯ ಮಾರ್ಗದಲ್ಲಿ ವಾಹನಗಳಿಗೆ ಸಂಚರಿಸಲು ಸೂಚನೆ ನೀಡಲಾಗಿತ್ತು.

ಮಧ್ಯಾಹ್ನ ಸುರಿದ ಮಳೆಗೆ ನಗರದ ಕೆ.ಆರ್. ಮಾರ್ಕೆಟ್‍ನಲ್ಲಿ ಗ್ರಾಹಕರು, ವ್ಯಾಪಾರಿಗಳು ಪರಾದಾಡಿದರು. ಕೆ.ಆರ್. ಮಾರುಕಟ್ಟೆಯಲ್ಲಿ ಸುಮಾರು 500ಕ್ಕೂ ಅಧಿಕ ಬೀದಿಬದಿ ವ್ಯಾಪಾರಿಗಳು ತಾತ್ಕಾಲಿಕ ಮಳಿಗೆಗಳನ್ನು ನಿರ್ಮಿಸಿಕೊಂಡು, ಸರಕುಗಳನ್ನು ಮಾರಾಟ ಮಾಡುತ್ತಾರೆ. ಮಳೆ ಬಿದ್ದ ತಕ್ಷಣ ವ್ಯಾಪಾರಿಗಳು ಮಳಿಗೆಗಳನ್ನು ಮುಚ್ಚಿ ಕಾಂಪ್ಲೇಕ್ಸ್ ಗಳಲ್ಲಿ ಆಶ್ರಯ ಪಡೆದರು. ಇನ್ನು ತಳ್ಳುವ ಬಂಡಿಗಳಲ್ಲಿ ವ್ಯಾಪಾರ ಮಾಡುವವರ ಪೈಕಿ ಅರ್ಧ ಮಂದಿ ವ್ಯಾಪಾರಕ್ಕೆ ಬಂದಿರಲಿಲ್ಲ. ಹೂವಿನ ವ್ಯಾಪಾರಿಗಳ ಸ್ಥಿತಿ ಭಿನ್ನವಾಗಿದ್ದು, ಗ್ರಾಹಕರ ಸುಳಿವಿಲ್ಲದ ಕಾರಣ ವ್ಯಾಪಾರವಿಲ್ಲದೆ ಹತಾಶರಾಗಿದ್ದರು.

ಎಡೆಬಿಡದೆ ಸುರಿದ ಭಾರಿ ಮಳೆಗೆ ನಾಡಪ್ರಭು ಕೆಂಪೇಗೌಡ ಲೇಔಟ್‍ನ ಬಹುತೇಕ ಭಾಗಗಳಲ್ಲಿ ಪ್ರವಾಹದ ಪರಿಸ್ಥಿತಿ ಉಂಟಾಗಿದೆ. ಕೆಂಪೇಗೌಡ ಲೇಔಟ್ ಕಾಮಗಾರಿ ಶೇಕಡ 90ರಷ್ಟು ಪೂರ್ಣಗೊಂಡಿದೆ. ಆದರೆ ಇದು ವಾಸಯೋಗ್ಯವಾಗಿಲ್ಲ ಎಂಬುದು ಮಳೆಯಿಂದ ಸಾಬೀತಾಗಿದೆ ಎಂದು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

 

 

 

 

 

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News