×
Ad

ಮುಖ್ಯಮಂತ್ರಿ ಸಿದ್ದರಾಮಯ್ಯಗೆ ನಿಂದಿಸಿದ ಪ್ರಕರಣ: ನಿವೃತ್ತ ಯೋಧನ ಬಂಧನ

Update: 2025-09-19 18:17 IST

ಸಾಂದರ್ಭಿಕ ಚಿತ್ರ | PC : freepik

ಬೆಂಗಳೂರು, ಸೆ.19: ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನಿಂದಿಸಿದ್ದ ಪ್ರಕರಣದಡಿ ನಿವೃತ್ತ ಯೋಧನನ್ನು ಸಿಸಿಬಿ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ವಸಂತ್ ಕುಮಾರ್(40) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಹಾಸನ ಜಿಲ್ಲೆಯ ಸಕಲೇಶಪುರದ ವಸಂತ್ ಕುಮಾರ್ ನಿವೃತ್ತ ಯೋಧನಾಗಿದ್ದು, ನಿವೃತ್ತಿ ಬಳಿಕ ಊರಿನಲ್ಲಿ ವ್ಯವಸಾಯ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಕನ್ನಡ ಬರುತ್ತಾ ಎಂದು ಸಿಎಂ ಸಿದ್ದರಾಮಯ್ಯ ಕೇಳಿದ್ದರು. ಇದಕ್ಕೆ ಹನುಮ ಭಕ್ತ ಎಂಬ ಫೇಸ್‍ಬುಕ್ ಪೇಜ್‍ನಲ್ಲಿ ಸಿದ್ದರಾಮಯ್ಯ ಕುರಿತು ಏಕವಚನದಲ್ಲೇ ಕೆಟ್ಟದಾಗಿ ನಿಂದಿಸಿ ವಸಂತ್ ಕುಮಾರ್ ಪೋಸ್ಟ್ ಹಾಕಿದ್ದ ಎಂದು ಆರೋಪಿಸಲಾಗಿದೆ.

ಈ ಸಂಬಂಧ ಸಿಸಿಬಿ ಸೈಬರ್ ವಿಭಾಗದ ಪೊಲೀಸರು ಆರೋಪಿ ವಸಂತ್ ಕುಮಾರ್‍ನನ್ನು ಬಂಧಿಸಿ, ವಿಚಾರಣೆ ಕೈಗೊಂಡಿರುವುದಾಗಿ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News