ಬೆಂಗಳೂರಿನ ಸಂಚಾರ ದಟ್ಟಣೆಯ ಅಧ್ಯಯನ ಮಾಡಿ : ಶೋಭಾ ಕರಂದ್ಲಾಜೆ ಒತ್ತಾಯ
ಶೋಭಾ ಕರಂದ್ಲಾಜೆ
ಬೆಂಗಳೂರು : ʼಈಗಿರುವ ಪ್ರಕಾರದ ಟನಲ್ ರೋಡ್ ಬೇಡ. ಮೊದಲು ಬೆಂಗಳೂರಿನ ಸಂಚಾರ ದಟ್ಟಣೆಯ ಅಧ್ಯಯನ ಮಾಡಿʼ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಆಗ್ರಹಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಟನಲ್ ರೋಡ್ ನ ಮೊದಲ ಹಂತದ ಅಂದಾಜಿನ ಪ್ಯಾಕೇಜ್ 5484 ಕೋಟಿ ರೂ ಇತ್ತು. ಅದನ್ನು 10734 ಕೋಟಿಗೆ ಹೆಚ್ಚು ಮಾಡಿದ್ದಾರೆ. ಎರಡನೇ ಪ್ಯಾಕೇಜ್ 11,263 ಕೋಟಿಯದು. ಹೀಗೆ ಟೆಂಡರ್ ಮೊತ್ತ ತೀವ್ರವಾಗಿ ಎಂದರೆ, 97% ಹೇಗೆ ಜಾಸ್ತಿ ಆಗಿದೆ ಎಂದು ಅವರು ಪ್ರಶ್ನಿಸಿದರು.
ಟೆಂಡರ್ ಪ್ರೀಮಿಯಮ್ ನ 5% ಕ್ಕಿಂತ ಜಾಸ್ತಿ ಆಗಬಾರದು ಅಂತ ಸರ್ಕಾರ ಸುತ್ತೋಲೆ ಹೊರಡಿಸಿತ್ತು. ಇದರಲ್ಲಿ 10 ಸಾವಿರ ಕೋಟಿ ಲೂಟಿ ಹೊಡೆಯಲಿದ್ದಾರೆ. 10 ಸಾವಿರ ಕೋಟಿಯನ್ನು ರಾಹುಲ್ ಗಾಂಧಿ ಬಿಡ್ಡಿಂಗ್ ಕರೆದಿರಬೇಕು ಎಂದು ಟೀಕಿಸಿದರು. ಕರ್ನಾಟಕದ ಹಣವನ್ನು ಕಾಂಗ್ರೆಸ್ ಲೂಟಿ ಮಾಡಲು ಹೊರಟಿದೆ ಎಂದು ದೂರಿದರು. ಹೈಕೋರ್ಟ್ ತಾಂತ್ರಿಕ ವರದಿ ಕೊಡಿ ಅಂತ ಕೇಳಿದೆ. ಯಾವುದೇ ಪೂರ್ವ ತಯಾರಿ ಇಲ್ಲದೆ, ವೈಜ್ಞಾನಿಕ ವರದಿ ಇಲ್ಲದೆ ತರಾತುರಿಯಲ್ಲಿ ಟೆಂಡರ್ ಕೊಟ್ಟಿದ್ದಾರೆ ಎಂದು ಆರೋಪಿಸಿದರು.
ಬೆಂಗಳೂರಿನ ಜನರ ವಿರೋಧದ ಕಾರಣಕ್ಕಾಗಿ, ಹಿರಿಯ ನಾಗರಿಕರು ದೊಡ್ಡ ಪ್ರಮಾಣದ ಹೋರಾಟ ಮಾಡಿದ ಪರಿಣಾಮವಾಗಿ ಸರ್ಕಾರ ತಾತ್ಕಾಲಿಕವಾಗಿ ಪಾರ್ಕ್ ಮಸೂದೆಯನ್ನು ವಾಪಸ್ ಪಡೆದಿದೆ. ಸಾರ್ವಜನಿಕರ ಅಭಿಪ್ರಾಯ ಕೇಳಿ ನಂತರ ಸದನದಲ್ಲಿ ಇದನ್ನ ಮತ್ತೆ ವಾಪಸ್ ತೆಗೆದುಕೊಂಡು ಬರುವುದಾಗಿ ಸಿಎಂ ಹೇಳಿದ್ದಾರೆ. ಇನ್ನೊಬ್ಬರು ಸೂಪರ್ ಸಿಎಂ ಪ್ರಿಯಾಂಕ್ ಖರ್ಗೆ ಇದರಲ್ಲಿ ಫುಲ್ ಸ್ಟಾಪ್ ಕೂಡ ಚೇಂಜ್ ಮಾಡದೇ ವಾಪಸ್ ತರ್ತೀವಿ ಅಂತ ಹೇಳಿದ್ದಾರೆ ಎಂದು ಟೀಕಿಸಿದರು.
ಕೆರೆಗಳ ಸಂರಕ್ಷಣಾ ಬಿಲ್ ತರಲು ಹೊರಟಿದ್ದಾರೆ; ಈಗಾಗಲೇ ರಿಯಲ್ ಎಸ್ಟೇಟ್ ಗೆ ಕೆರೆಗಳನ್ನು ತಿಂದಿದ್ದಾರೆ. ಎಲ್ಲಾ ಕೆರೆಗಳನ್ನು ಲೇಔಟ್ ಮಾಡಿ ಕಾಂಪ್ಲೆಕ್ಸ್ ಮಾಡಿದ್ದಾರೆ. ಇದರಿಂದಲೇ ಮಳೆ ಬಂದರೆ ಬೆಂಗಳೂರು ಕೆರೆಯಂತಾಗುತ್ತದೆ ಎಂದು ವಿಶ್ಲೇಷಿಸಿದರು.
ಬೆಂಗಳೂರು ಕೇಂದ್ರ ಸಂಸದ ಪಿ.ಸಿ. ಮೋಹನ್, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್ ಅವರು ಇದ್ದರು.