ಜೆನ್ ಝಿಗಳು ಸತ್ಯಾಗ್ರಹ ಕೂತಾಗಲೇ ಸರಕಾರ ಮಾತುಕತೆ ನಡೆಸಬೇಕಿತ್ತು: ಪವನ್ ಖೇರಾ
Photo | PTI
ಬೆಂಗಳೂರು : ಜೆನ್ ಝಿಗಳು ಸತ್ಯಾಗ್ರಹಕ್ಕೆ ಕೂತಾಗಲೇ ಸರಕಾರ ಮಾತುಕತೆಗೆ ಮುಂದಾಗಬೇಕಿತ್ತು. ಸರಕಾರವು ತಿಂಗಳುಗಳು ಕಾಯಿಸಿ ಲಾಠಿ ಬೀಸಿದ್ದು ಎಷ್ಟು ಸರಿ ಎಂದು ಎಐಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಪವನ್ ಖೇರಾ ಪ್ರಶ್ನಿಸಿದ್ದಾರೆ.
ಗುರುವಾರ ನಗರದಲ್ಲಿ ‘ದಿ ಜನ್‍ಝಿ ರೆಕೆನಿಂಗ್’ ವತಿಯಿಂದ ಆಯೋಜಿಸಿದ್ದ ‘ಸಚಿವರು ಮತ್ತು ಮುಂದಿನ ತಲೆಮಾರು’ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೆನ್‍ಝಿಗಳ ಹಿಂದಿನ ತಲೆಮಾರು ಯಾವುದರ ವಿರುದ್ಧವೂ ಧ್ವನಿಯೆತ್ತದೆ 10-12 ವರ್ಷ ಕಳೆದಿದೆ. ಇದನ್ನೆಲ್ಲಾ ನೋಡುತ್ತಾ ಬೆಳೆದ ಜೆನ್‍ಝಿಗಳಲ್ಲಿ ಹತಾಶೆ ತುಂಬಿದೆ. ನಮ್ಮ ಮೇಲಿನ ಅವರ ಸಿಟ್ಟು, ಆಕ್ರೋಶ, ಪ್ರತಿಭಟನೆ, ಬೈಗುಳ ಎಲ್ಲವೂ ಸಮರ್ಥನೀಯ ಎಂದು ಹೇಳಿದರು.
ಜೆನ್‍ಝಿಗಳಿಗೆ ದಾರಿ ತೋರಿಸಲು ನಾವು ಯಾರು? ನಮ್ಮ ತಂದೆ- ತಾಯಿಯೂ ನಮ್ಮ ಬಗ್ಗೆ ಇದೇ ರೀತಿಯ ಮಾತನಾಡುತ್ತಿದ್ದರು. ಜೆನ್‍ಝಿಗಳ ಬಗ್ಗೆ ಈಗ ಕೆಲವರು ಅಂಥದ್ದೇ ಮಾತನಾಡಿದ್ದಾರೆ. ಏನನ್ನು ಪ್ರಶ್ನಿಸಬೇಕು, ಯಾವುದರ ಬಗ್ಗೆ ಧ್ವನಿ ಎತ್ತಬೇಕು ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ. ಹೀಗಾಗಿ ಅವರಿಗೆ ದಿಕ್ಕು ತೋರಿಸಬೇಕು ಎಂದು ನಾವು ಅಂದುಕೊಳ್ಳುವುದು ಮೂರ್ಖತನವಾಗುತ್ತದೆ ಎಂದರು.
ಕೆಲವರ ಹಿತಾಸಕ್ತಿಗಾಗಿ ಎಥೆನಾಲ್‍ಗೆ ಪ್ರಾಶಸ್ತ್ಯ ಕೊಡಲಾಗುತ್ತಿದೆ. ಅದರ ಹೊರೆಯನ್ನು ಜನ ಸಾಮಾನ್ಯರು ಹೊರಬೇಕಾಗಿದೆ. 2020ರ ನಂತರ ತಯಾರಾದ ಕಾರುಗಳಲ್ಲಿ ಇ20 ಪೆಟ್ರೋಲ್ ಬಳಸಬಹುದಾದರೇ, 2020ಕ್ಕೂ ಮೊದಲು ಕಾರು ಖರೀದಿಸಿದವರು ಏನು ಮಾಡಬೇಕು? ಅವರದ್ದು ದುಡ್ಡಲ್ಲವೇ? ಏನು ಸಮಸ್ಯೆ ಎಂಬುದು ಜೆನ್‍ಝಿಗಳಿಗೆ ಗೊತ್ತಿದೆ. ಹೀಗಾಗಿಯೇ ಈ ಬಗ್ಗೆ ಪ್ರಶ್ನಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಸಂವಾದವನ್ನು ಪತ್ರಕರ್ತೆ ನಬಿಲಾ ಜಮಾಲ್ ನಡೆಸಿಕೊಟ್ಟಿದ್ದು, ಅನೇಕ ನಾಯಕರು ಸಂವಾದದಲ್ಲಿ ಭಾಗಿಯಾಗಿದ್ದರು.