ಅತ್ಯಾಚಾರಿಗಳನ್ನು ಸಮರ್ಥಿಸಿದ್ದ ಪ್ರಹ್ಲಾದ್ ಜೋಶಿ: ಶಿಕ್ಷಣ ಸಚಿವನನ್ನಾಗಿ ಮಾಡಿದ್ದು ಕನ್ನಡಿಗರೆಲ್ಲ ತಲೆತಗ್ಗಿಸುವಂತಾಗಿದೆ : ಸಿದ್ದರಾಮಯ್ಯ

Update: 2026-07-29 18:16 IST

ಬೆಂಗಳೂರು : ‘ಪ್ರಧಾನಿ ಮೋದಿಯವರಿಗೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಬಗ್ಗೆ ಒಂದಿಷ್ಟು ಕಾಳಜಿ ಹೊಂದಿದ್ದರೆ ತಕ್ಷಣ ಶಿಕ್ಷಣ ಖಾತೆಯನ್ನು ಜೋಶಿಯವರಿಂದ ಕಿತ್ತುಕೊಂಡು, ಯಾರಾದರೂ ಅರ್ಹರಿದ್ದರೆ ಅಂತವರಿಗೆ ಈ ಮಹತ್ವದ ಖಾತೆಯ ಹೊಣೆ ವಹಿಸಿ ಕೊಡಬೇಕು’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಬುಧವಾರ ಎಕ್ಸ್‌ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಧರ್ಮೇಂದ್ರ ಪ್ರಧಾನ್ ಹಾದಿಯಲ್ಲಿಯೇ ಜೋಶಿ ಅವರು ಹೊರಡುವುದಕ್ಕೆ ಬಹಳ ದಿನಗಳು ಬೇಕಾಗಿಲ್ಲ. ಕರ್ನಾಟಕದ ಸಂಸದರೊಬ್ಬರು ಶಿಕ್ಷಣ ಸಚಿವರಾದರೆಂದು ನಾವೆಲ್ಲರೂ ಹೆಮ್ಮೆ ಪಡಬೇಕಾಗಿತ್ತು. ಆದರೆ, ಅತ್ಯಾಚಾರಿಗಳನ್ನು ಸಮರ್ಥಿಸಿದ್ದ ಸಂಸದ ಜೋಶಿಯವರನ್ನು ಶಿಕ್ಷಣ ಸಚಿವನನ್ನಾಗಿ ಮಾಡಿ ಕನ್ನಡಿಗರೆಲ್ಲರೂ ತಲೆತಗ್ಗಿಸುವ ಹಾಗೆ ಮಾಡಿದ್ದಾರೆ’ ಎಂದು ಟೀಕಿಸಿದ್ದಾರೆ.

‘ನಿರ್ಗಮಿತ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‍ಗಿಂತ ಪ್ರಹ್ಲಾದ್ ಜೋಶಿ ಯಾವುದೇ ರೀತಿ ಭಿನ್ನರಲ್ಲ, ಇವರಿಬ್ಬರೂ ಸೈದ್ಧಾಂತಿಕವಾಗಿ ಅವಳಿ-ಜವಳಿಗಳು. ಇಬ್ಬರೂ ಸಂಘ ಪರಿವಾರದ ಎಬಿವಿಪಿಯಿಂದ ಬಂದವರು. ಮಹಿಳೆಯರು, ದಲಿತರು, ಬಡವರು, ಹಿಂದುಳಿದ ಜಾತಿಗಳು ಮತ್ತು ಮುಸ್ಲಿಮ್, ಕ್ರೈಸ್ತರ ಬಗ್ಗೆ ಆರೆಸ್ಸೆಸ್ ಹೊಂದಿರುವ ಅಭಿಪ್ರಾಯವನ್ನೇ ಹೊಂದಿದವರು. ಇದಕ್ಕಾಗಿಯೇ ಪ್ರಧಾನ್ ಸ್ಥಾನಕ್ಕೆ ಜೋಷಿ ಅವರನ್ನು ತಂದು ಕೂರಿಸಲಾಗಿದೆ.

ಇದೊಂದು ರೀತಿ ಊದುವುದನ್ನು ಕೊಟ್ಟು ಬಾರಿಸುವುದನ್ನು ಕೊಂಡಂತೆ. ಬದಲಾಗಿದ್ದು ಪಾತ್ರಧಾರಿ ಅಷ್ಟೇ, ಸೂತ್ರಧಾರಿಗಳಾದ ಆರೆಸ್ಸೆಸ್‍ನ ನಿರ್ದೇಶನದಂತೆ ಇವರೂ ನಡೆದುಕೊಳ್ಳಬೇಕಾಗುತ್ತದೆ. ಗುಜರಾತ್ ಗಲಭೆಯ ಕಾಲದಲ್ಲಿ ಬಿಲ್ಕಿಸ್ ಭಾನು ಎಂಬ ಮಹಿಳೆಯ ಮೇಲಿನ ಸಾಮೂಹಿಕ ಅತ್ಯಾಚಾರಿಗಳನ್ನು 2022ರಲ್ಲಿ ಗುಜರಾತ್ ಸರಕಾರ ಸನ್ನಡತೆಯ ಆಧಾರದಲ್ಲಿ ಬಿಡುಗಡೆಗೊಳಿಸಿದ್ದನ್ನು ಜೋಶಿ, ಸಮರ್ಥಿಸಿ ಅತ್ಯಾಚಾರಿಗಳ ಪರವಾಗಿ ಮಾತನಾಡಿದ್ದರು. ಇಂತಹವರು ಶಿಕ್ಷಣ ಸಚಿವರಾದರೆ ಶಿಕ್ಷಣ ವ್ಯವಸ್ಥೆಯ ಗತಿ ಏನಾಗಬಹುದು ಎನ್ನುವುದು ನಮ್ಮೆಲ್ಲರ ಈಗಿನ ಆತಂಕ’ ಎಂದು ಅವರು ತಿಳಿಸಿದ್ದಾರೆ.

‘ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಮತ್ತು ಸಂಸದೆ ಪ್ರಿಯಾಂಕಾ ಗಾಂಧಿ ಲೋಕಸಭೆಯಲ್ಲಿ ಜೋಶಿ ಮುಖವಾಡವನ್ನು ಕಿತ್ತೊಗೆದು ದೇಶದ ಮುಂದೆ ನಿಲ್ಲಿಸಿದ್ದಾರೆ. ಸದನದಲ್ಲಿ ಅವರ ಬಾಯಿ ಮುಚ್ಚಿಸಬಹುದು, ಆದರೆ ದೇಶದ ಕೋಟ್ಯಂತರ ಜನರ ಬಾಯಿ ಮುಚ್ಚುವುದು ಸಾಧ್ಯ ಇಲ್ಲ’ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News