ತಮಿಳುನಾಡಿಗೆ ನೀರು ಹರಿಸುವಂತೆ CWRC ಆದೇಶ ಸಂಪೂರ್ಣ ಅವೈಜ್ಞಾನಿಕ : ಟಿ.ಎ.ನಾರಾಯಣಗೌಡ

ನೀರು ಹರಿಸುವ ಆದೇಶ ಖಂಡಿಸಿ ಪ್ರತಿಭಟನೆ

Update: 2026-07-29 19:12 IST

ಬೆಂಗಳೂರು : ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯೂಆರ್‌ಸಿ) ಕರ್ನಾಟಕವು ಮುಂದಿನ 15 ದಿನಗಳ ಕಾಲ ಪ್ರತಿದಿನ 3,500 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸುವಂತೆ ನೀಡಿರುವ ಆದೇಶವು ಸಂಪೂರ್ಣವಾಗಿ ಅವೈಜ್ಞಾನಿಕವಾಗಿದ್ದು, ಇದಕ್ಕೆ ರಾಜ್ಯ ಸರಕಾರ ತಲೆಬಾಗಬಾರದು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ತಿಳಿಸಿದ್ದಾರೆ.

ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವ ನಿರ್ಧಾರವನ್ನು ಖಂಡಿಸಿ, ಕರವೇ ವತಿಯಿಂದ ನಗರದ ಫ್ರೀಡಂ ಪಾರ್ಕ್‍ನಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ತಮಿಳುನಾಡಿಗೆ ಕಾವೇರಿ ನೀರು ಹರಿಸುವ ನಿರ್ದೇಶನವು ವಾಸ್ತವ ಪರಿಸ್ಥಿತಿಯನ್ನು ನಿರ್ಲಕ್ಷಿಸಿರುವ ಹಾಗೂ ಕರ್ನಾಟಕದ ಹಿತಾಸಕ್ತಿಗೆ ವಿರುದ್ಧವಾಗಿದೆ. ಈ ನಿರ್ದೇಶನವನ್ನು ಕರ್ನಾಟಕ ಸರಕಾರ ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಬಾರದು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ತೀವ್ರ ಮಳೆ ಕೊರತೆ ಉಂಟಾಗಿದ್ದು, ಕೆಆರ್‌ ಎಸ್, ಕಬಿನಿ, ಹೇಮಾವತಿ, ಹಾರಂಗಿ ಸೇರಿದಂತೆ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹ ಆತಂಕಕಾರಿ ಮಟ್ಟಕ್ಕೆ ಕುಸಿದಿದೆ. ಇಂತಹ ಸಂದರ್ಭದಲ್ಲಿ ಕರ್ನಾಟಕದ ಜನರಿಗೆ ಕುಡಿಯಲು ಕೂಡ ನೀರು ಇಲ್ಲದಿರುವಾಗ ತಮಿಳುನಾಡಿಗೆ ಸುಮಾರು 4.5 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಸೂಚಿಸಿರುವುದು ವಾಸ್ತವ ಸ್ಥಿತಿಯನ್ನು ಸಂಪೂರ್ಣವಾಗಿ ಕಡೆಗಣಿಸಿದ ಕ್ರಮವಾಗಿದೆ ಎಂದು ಕಿಡಿಕಾರಿದರು.

ರಾಜ್ಯ ಸರ್ಕಾರ ತಕ್ಷಣವೇ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಮೇಲ್ಮನವಿ ಸಲ್ಲಿಸಿ, ಕರ್ನಾಟಕದ ನೀರಿನ ನೈಜ ಸ್ಥಿತಿಯನ್ನು ವೈಜ್ಞಾನಿಕ ಅಂಕಿ-ಅಂಶಗಳೊಂದಿಗೆ ಮಂಡಿಸಬೇಕು. ಅಗತ್ಯವಿದ್ದರೆ ಸುಪ್ರೀಂ ಕೋರ್ಟ್ ಸೇರಿದಂತೆ ಲಭ್ಯವಿರುವ ಎಲ್ಲ ಕಾನೂನು ವೇದಿಕೆಗಳಲ್ಲಿ ಹೋರಾಟ ನಡೆಸಿ, ರಾಜ್ಯದ ನೀರಿನ ಹಕ್ಕನ್ನು ರಕ್ಷಿಸಬೇಕು ಎಂದು ಅವರು ಒತ್ತಾಯಿಸಿದರು.

ಕರ್ನಾಟಕ ಬಂದ್ ಮಾಡುವಲ್ಲಿ ಕರ್ನಾಟಕ ರಕ್ಷಣಾ ವೇದಿಕೆಗೆ ಯಾವುದೇ ಆಸಕ್ತಿಯಿಲ್ಲ. ಬಂದ್ ಎನ್ನುವುದು ಹೋರಾಟಗಾರರ ಕೊನೆಯ ಅಸ್ತ್ರ. ಜನಜೀವನಕ್ಕೆ ತೊಂದರೆಯಾಗುವ ಅಂತಹ ಹಂತಕ್ಕೆ ನಾವು ಈಗಲೇ ಹೋಗುವುದಿಲ್ಲ. ರಾಜ್ಯದ ಹಿತಾಸಕ್ತಿ ಕಾಪಾಡಲು ಕಾನೂನುಬದ್ಧ, ಪ್ರಜಾಸತ್ತಾತ್ಮಕ ಹಾಗೂ ಜನಾಂದೋಲನದ ವಿವಿಧ ಹೋರಾಟದ ಮಾರ್ಗಗಳನ್ನು ಕರ್ನಾಟಕ ರಕ್ಷಣಾ ವೇದಿಕೆ ಅನುಸರಿಸಲಿದೆ ಎಂದು ಹೇಳಿದರು.

ಕಾವೇರಿ ನೀರು ನಿಯಂತ್ರಣ ಸಮಿತಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಈ ನಿರ್ದೇಶನ ನೀಡಿದಂತಾಗಿದೆ. ನಮ್ಮ ಜಲಾಶಯಗಳಲ್ಲಿ ರಾಜ್ಯದ ಜನರಿಗೆ ಕುಡಿಯಲು ಸಾಕಾಗುವಷ್ಟು ನೀರೇ ಇಲ್ಲ. ಅಂತಹ ಪರಿಸ್ಥಿತಿಯಲ್ಲಿ ಅದನ್ನೂ ತಮಿಳುನಾಡಿಗೆ ಕೊಡಿ ಎನ್ನುವುದು ಯಾವ ನ್ಯಾಯ? ಕರ್ನಾಟಕದ ವಾಸ್ತವ ಪರಿಸ್ಥಿತಿಯನ್ನು ಪರಿಗಣಿಸದೆ ನೀಡಿರುವ ಈ ನಿರ್ದೇಶನವನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದರು. ಪ್ರತಿಭಟನೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News