ಜಾತಿ ಪ್ರಮಾಣ ಪತ್ರ ಪಡೆಯುವ ನಿಯಮ ಸರಳೀಕರಿಸಿ : ಎಂಎಲ್ಸಿ ಕೆ.ಶಿವಕುಮಾರ್
ಎಂಎಲ್ಸಿ ಕೆ. ಶಿವಕುಮಾರ್
ಬೆಂಗಳೂರು: ಪರಿಶಿಷ್ಟ ಜಾತಿಯ ಒಳಮೀಸಲಾತಿ ವರ್ಗೀಕರಣದ ಆಧಾರದಲ್ಲಿ ಉಪಜಾತಿ ಅನ್ವಯ ಜಾತಿ ಪ್ರಮಾಣ ಪತ್ರ ಪಡೆಯುವ ಪ್ರಕ್ರಿಯೆಯಲ್ಲಿರುವ ಕಠಿಣ ನಿಯಮಗಳನ್ನು ಸರಳೀಕರಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಕೆ. ಶಿವಕುಮಾರ್ ಸರ್ಕಾರವನ್ನು ಒತ್ತಾಯಿಸಿದರು.
ಗುರುವಾರ ನಡೆದ ವಿಧಾನ ಮಂಡಲ ಅಧಿವೇಶನದ ಗಮನ ಸೆಳೆಯುವ ಸೂಚನೆಯ ಚರ್ಚೆಯಲ್ಲಿ ಮಾತನಾಡಿದ ಅವರು, ಉಪಜಾತಿ ಗುರುತಿಸುವ ನೆಪದಲ್ಲಿ ಹಳೆಯ ದಾಖಲೆಗಳು, ವಂಶಾವಳಿ ಸೇರಿದಂತೆ ಅನಗತ್ಯ ಪುರಾವೆಗಳನ್ನು ಕಂದಾಯ ಅಧಿಕಾರಿಗಳು ಕೇಳುತ್ತಿರುವುದರಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.
ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವೇಶ, ವಿದ್ಯಾರ್ಥಿವೇತನ ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ಸರ್ಕಾರಿ ನೇಮಕಾತಿಗೆ ಅರ್ಜಿ ಸಲ್ಲಿಸಲು ಸಕಾಲದಲ್ಲಿ ಜಾತಿ ಪ್ರಮಾಣ ಪತ್ರ ದೊರೆಯದೆ ಮೀಸಲಾತಿ ಸೌಲಭ್ಯದಿಂದ ವಂಚಿತರಾಗುವ ಆತಂಕ ಎದುರಾಗಿದೆ ಎಂದರು.
ಜಾತಿ ಪ್ರಮಾಣ ಪತ್ರ ಪಡೆಯಲು ವಿದ್ಯಾರ್ಥಿಗಳು ಹಾಗೂ ಪೋಷಕರು ನಾಡಕಚೇರಿ ಮತ್ತು ತಾಲ್ಲೂಕು ಕಚೇರಿಗಳಲ್ಲಿ ರಾತ್ರಿಯಿಡೀ ಸಾಲಿನಲ್ಲಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಆನ್‌ಲೈನ್ ಪ್ರಕ್ರಿಯೆಯಲ್ಲಿ ಒಟಿಪಿ ಸೇರಿದಂತೆ ಹಲವು ಸಮಸ್ಯೆಗಳು ಗ್ರಾಮೀಣ ಜನರಿಗೆ ತೊಂದರೆಯಾಗುತ್ತಿವೆ ಎಂದು ತಿಳಿಸಿದರು.
ನಗರ ಪ್ರದೇಶಗಳಲ್ಲಿ ಜಾತಿ ಪ್ರಮಾಣ ಪತ್ರ ನೀಡಲು ಅಕ್ಕಪಕ್ಕದ ಮನೆಯವರನ್ನು ಸಾಕ್ಷಿಯಾಗಿ ಕೇಳಲಾಗುತ್ತಿದೆ. ಇದರಿಂದ ಜಾತಿ ಮಾಹಿತಿಯನ್ನು ಮರೆಮಾಚಿ ಬಾಡಿಗೆ ಮನೆ ಪಡೆದಿರುವವರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.
ಜಾತಿ ಪ್ರಮಾಣ ಪತ್ರ ನೀಡುವ ನೆಪದಲ್ಲಿ ಪರಿಶಿಷ್ಟ ಸಮುದಾಯದ ಜನರಿಗೆ ತೊಂದರೆ ನೀಡಬಾರದು. ಸಕಾಲದಲ್ಲಿ ಪ್ರಮಾಣ ಪತ್ರ ಸಿಗದ ಹಿನ್ನೆಲೆಯಲ್ಲಿ ಸರ್ಕಾರಿ ನೇಮಕಾತಿಗಳ ಅಂತಿಮ ದಿನಾಂಕವನ್ನು ಕನಿಷ್ಠ ಒಂದು ತಿಂಗಳು ಮುಂದೂಡಬೇಕು ಎಂದು ಮನವಿ ಮಾಡಿದರು.
ನಕಲಿ ಜಾತಿ ಪ್ರಮಾಣ ಪತ್ರ ಬಳಸಿ ರಾಜ್ಯದಲ್ಲಿ 591 ಮಂದಿ ಸರ್ಕಾರಿ ನೌಕರಿ ಪಡೆದಿರುವ ಮಾಹಿತಿ ಇದೆ. ಇಂತಹ ಅಕ್ರಮ ತಡೆಯಲು ಮಹಾರಾಷ್ಟ್ರ ಮಾದರಿಯಲ್ಲಿ ‘ಬ್ಲಾಕ್‌ಚೈನ್’ ತಂತ್ರಜ್ಞಾನವನ್ನು ರಾಜ್ಯದಲ್ಲೂ ಜಾರಿಗೊಳಿಸಬೇಕು ಎಂದು ಸಲಹೆ ನೀಡಿದರು.
ಕಂದಾಯ ಸಚಿವರ ಪರವಾಗಿ ಉತ್ತರಿಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಜಾತಿ ಪ್ರಮಾಣ ಪತ್ರ ಪಡೆಯುವ ನಿಯಮಗಳನ್ನು ಸರಳೀಕರಿಸಲು ಕ್ರಮ ಕೈಗೊಳ್ಳಲಾಗುವುದು. ‘ಬ್ಲಾಕ್‌ಚೈನ್’ ತಂತ್ರಜ್ಞಾನ ಜಾರಿಗೊಳಿಸುವ ಸಲಹೆಯನ್ನು ಉಪಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು. ನೇಮಕಾತಿ ಅಂತಿಮ ದಿನಾಂಕ ಮುಂದೂಡುವ ಬಗ್ಗೆಯೂ ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದರು.