ಧರ್ಮಸ್ಥಳ ಪ್ರಕರಣದಲ್ಲಿ ನಿರೀಕ್ಷೆಗೆ ತಕ್ಕಂತೆ ಎಸ್ಐಟಿ ತನಿಖೆ ನಡೆಯುತ್ತಿಲ್ಲ: ಬಸವರಾಜ ಬೊಮ್ಮಾಯಿ
''ಷಡ್ಯಂತ್ರ ಮಾಡಿದವರನ್ನು ಮುಟ್ಟದಂತೆ ಎಸ್ಐಟಿಗೆ ರಾಜಕೀಯ ಒತ್ತಡ ಇದೆ''
ಬೆಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ ಷಡ್ಯಂತ್ರ ಮಾಡಿದವರನ್ನು ಮುಟ್ಟದಂತೆ ಎಸ್ಐಟಿಗೆ ರಾಜಕೀಯ ಒತ್ತಡ ಇದೆ. ನಿರೀಕ್ಷೆಗೆ ತಕ್ಕಂತೆ ಎಸ್ಐಟಿ ತನಿಖೆ ನಡೆಯುತಿಲ್ಲ. ಪೊಲೀಸ್ ಪದ್ಧತಿ ಪ್ರಕಾರ ತನಿಖೆ ನಡೆಯುತ್ತಿಲ್ಲ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾಸ್ಕ್ ಮ್ಯಾನ್ ನ ದೂರು ಹುಸಿಯಾದ ನಂತರ ಬೇರೆ ಬೇರೆ ದೂರುಗಳು ದಾಖಲಾಗುತ್ತಿವೆ. ಎಸ್ಐಟಿಗೆ ಉತ್ತರದಾಯಿತ್ವ ಇದೆ, ಜವಾಬ್ದಾರಿ ಇದೆ. ಶೀಘ್ರದಲ್ಲೇ ವರದಿ ಕೊಡಲಿ, ಇದುವರೆಗೆ ಆಗಿರುವ ತನಿಖೆ ಬಗ್ಗೆ ವರದಿ ಕೊಡಲಿ ಎಂದವರು ಒತ್ತಾಯಿಸಿದರು.
ಎಸ್ಐಟಿಯವರು ಷಢ್ಯಂತ್ರ ಮಾಡಿದ ಮುಖ್ಯ ವ್ಯಕ್ತಿಗಳನ್ನೇ ಇನ್ನೂ ಮುಟ್ಟಿಲ್ಲ. ಎಸ್ಐಟಿಯವರು ನಮ್ಮನ್ನು ಮುಟ್ಟಲ್ಲ ಅಂತ ಅವರಿಗೂ ಖಾತ್ರಿ ಆಗಿದೆ, ಅದಕ್ಕಾಗಿಯೇ ಅವರು ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಹೊಸ ಹೊಸ ದೂರುಗಳು ಬರುತ್ತಿವೆ, ಅವುಗಳನ್ನೂ ತನಿಖೆ ಮಾಡುತ್ತಿದ್ದಾರೆ. ಎಸ್ಐಟಿಗೆ ಷಡ್ಯಂತ್ರ ಮಾಡಿದವರನ್ನು ಮುಟ್ಟಬೇಡಿ ಅನ್ನುವ ರಾಜಕೀಯ ಒತ್ತಡ ಇದೆ. ಅದಕ್ಕಾಗಿ ಇನ್ನೂ ಯಾರನ್ನೂ ಬಂಧಿಸದೇ ವಿಚಾರಣೆ ಮಾತ್ರ ಮಾಡುತ್ತಿದೆ. ಇಲ್ಲಿವರೆಗೆ ಆಗಿರುವ ತನಿಖೆ ಬಗ್ಗೆ ವರದಿಯನ್ನು ಎಸ್ಐಟಿ ಕೊಡಲಿ ಎಂದು ಬೊಮ್ಮಾಯಿ ಆಗ್ರಹಿಸಿದರು.
ಮ್ಯಾಚ್ ನಡೆಸದಿದ್ದರೆ ಚೆನ್ನಾಗಿತ್ತು :
ಭಾರತ - ಪಾಕ್ ನಡುವೆ ಇಂದು ಕ್ರಿಕೆಟ್ ಮ್ಯಾಚ್ ನಡೆಯುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪಹಲ್ಗಾಮ್ ಹತ್ಯಾಕಾಂಡ, ಆಪರೇಷನ್ ಸಿಂದೂರ, ಭಾರತ ಬಗ್ಗೆ ಪಾಕ್ ಹೇಳಿಕೆಗಳನ್ನು ಪರಿಗಣಿಸಬೇಕು. ಇದೆಲ್ಲದರ ಹಿನ್ನೆಲೆಯಲ್ಲಿ ಈ ಮ್ಯಾಚ್ ಅನ್ನು ನಡೆಸದಿದ್ದರೆ ಚೆನ್ನಾಗಿತ್ತು. ಕ್ರೀಡೆ ಇರಬೇಕು, ಆದರೆ ದೇಶ, ದೇಶದ ಜನರ ಭಾವನೆ ಬಹಳ ಮುಖ್ಯ. ಬಿಸಿಸಿಐ ದೇಶದ ಜನರ ಭಾವನೆಗಳಿಗೆ ತಕ್ಕ ನಿರ್ಧಾರ ತೆಗೆದುಕೊಂಡಿಲ್ಲ ಎಂದರು.