ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ | ತಾಂತ್ರಿಕ ಸಮಸ್ಯೆ, ಗೊಂದಲ ಬಗೆಹರಿಸುತ್ತೇವೆ : ಸಚಿವ ಶಿವರಾಜ್ ತಂಗಡಗಿ
ಶಿವರಾಜ್ ಎಸ್.ತಂಗಡಗಿ
ಬೆಂಗಳೂರು : ರಾಜ್ಯ ಸರಕಾರ ಕೈಗೆತ್ತಿಕೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿವಾರು ಸಮೀಕ್ಷೆ)ಯಲ್ಲಿನ ತಾಂತ್ರಿಕ ಸಮಸ್ಯೆ, ಗೊಂದಲಗಳನ್ನು ಬಗೆಹರಿಸುತ್ತೇವೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮೀಕ್ಷೆಗೆ ಸಂಬಂಧಿಸಿದಂತೆ ಉಂಟಾಗಿರುವ ಗೊಂದಲಗಳನ್ನು ಸರಿಪಡಿಸುವ ಸಂಬಂಧ ಅಧಿಕಾರಿಗಳ ಸಭೆ ಕರೆದಿದ್ದು, ಎಲ್ಲ ಸಮಸ್ಯೆಗಳನ್ನು ಸರಿಪಡಿಸುತ್ತೇನೆ ಎಂದರು.
ಎರಡು ದಿನಗಳಿಂದ ಸಮೀಕ್ಷೆ ಕಾರ್ಯ ನಡೆಯುತ್ತಿದೆ. ಕೆಲ ತಾಂತ್ರಿಕ ತೊಡಕು ಹೊರತುಪಡಿಸಿದರೆ ಸಮೀಕ್ಷೆ ಸರಿಯಾಗಿ ನಡೆಯುತ್ತಿದೆ. ನಿಗದಿತ ಗಡುವಿನೊಳಗೆ ಸಮೀಕ್ಷೆ ಪೂರ್ಣಗೊಳಿಸುತ್ತೇವೆ. ಬೆಂಗಳೂರಿನಲ್ಲಿ ಕೆಲವೊಂದು ಕಾರಣಕ್ಕೆ ಸಮೀಕ್ಷೆ ಇನ್ನೂ ಆರಂಭವಾಗಿಲ್ಲ ಎಂದು ಅವರು ಹೇಳಿದರು.
ಆನ್‍ಲೈನ್ ಮುಖಾಂತರ ಜನರ ಸಾಮಾಜಿಕ ಹಾಗೂ ಶೈಕ್ಷಣಿಕ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಈ ವೇಳೆ ಸರ್ವರ್ ಸಮಸ್ಯೆ ಆಗುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸುತ್ತೇನೆ. ಸಮೀಕ್ಷೆ ಸಂಬಂಧ ಉದ್ಭವವಾಗಿರುವ ಗೊಂದಲಗಳ ಬಗ್ಗೆ ಸಮಾಲೋಚಿಸಿ ಇಂದು ಅಥವಾ ನಾಳೆಯೊಳಗೆ ಇತ್ಯರ್ಥ ಪಡಿಸುತ್ತೇನೆ ಎಂದು ಅವರು ಮಾಹಿತಿ ನೀಡಿದರು.
ಸಮೀಕ್ಷೆ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಆದೇಶ ಬರದೆ ನಾನು ಮಾತನಾಡುವುದಿಲ್ಲ. ಕಾನೂನು ಪಾಲನೆ ಮಾಡಬೇಕಿರುವುದು ನಮ್ಮ ಕರ್ತವ್ಯ. ಅ.7 ರವರೆಗೆ ಸಮೀಕ್ಷೆ ನಡೆಯಲಿದ್ದು, ಆನಂತರ ವಿಸ್ತರಣೆ ಬಗ್ಗೆ ತೀರ್ಮಾನಿಸುತ್ತೇವೆ ಎಂದು ಶಿವರಾಜ್ ತಂಗಡಗಿ ತಿಳಿಸಿದರು.
ಸಮೀಕ್ಷೆಗೆ ಸಂಬಂಧಿಸಿದಂತೆ ನನ್ನ ಮುಂದೆ ಯಾವ ಸಚಿವರು ವಿರೋಧ ವ್ಯಕ್ತಪಡಿಸಿಲ್ಲ. ಬದಲಾಗಿ ಕೆಲವರು ಸಲಹೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಆದಷ್ಟು ಬೇಗ ಸಮೀಕ್ಷೆ ಆರಂಭಿಸಲಾಗುವುದು. ಆಯೋಗದ ಎಲ್ಲ ವಿಚಾರಗಳಲ್ಲಿಯೂ ನಾನು ಮಧ್ಯ ಪ್ರವೇಶಿಸುವುದಿಲ್ಲ ಎಂದು ಅವರು ವಿವರಿಸಿದರು.