ರಾಜಕೀಯ, ಸಾಮಾಜಿಕ ಸೇರಿದಂತೆ ಎಲ್ಲಾ ಕ್ಷೇತ್ರಗಳಿಗೆ ಬಿಲ್ಲವ ಸಮುದಾಯ ತನ್ನದೇ ಆದ ಕೊಡುಗೆ ನೀಡಿದೆ : ಸ್ಪೀಕರ್ ಯು.ಟಿ.ಖಾದರ್
ಬಿಲ್ಲವ ಅಸೋಸಿಯೇಶನ್‍ನ ಸುವರ್ಣ ಸಂಭ್ರಮ ಮಹೋತ್ಸವ ಕಾರ್ಯಕ್ರಮ
ಬೆಂಗಳೂರು, ಆ.10: ವಿಶ್ವದ ಎಲ್ಲ ಭಾಗಗಳಲ್ಲೂ ಬಿಲ್ಲವ ಸಮುದಾಯದವರು ನೆಲೆಸಿದ್ದು, ಈ ಸಮುದಾಯವು ಯಾವುದೋ ಒಂದು ಪ್ರದೇಶಕ್ಕೆ ಮಾತ್ರ ಸೀಮಿತವಾಗಿಲ್ಲ ಎಂದು ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಅವರು ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ಇಲ್ಲಿನ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಬೆಂಗಳೂರು ಬಿಲ್ಲವ ಅಸೋಸಿಯೇಶನ್‍ನ ಸುವರ್ಣ ಸಂಭ್ರಮ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಲ್ಲವ ಸಮುದಾಯ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಮತ್ತು ಧಾರ್ಮಿಕವಾಗಿ ತನ್ನದೇ ಆದ ಕೊಡುಗೆ ನೀಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಧರ್ಮಪಾಲನೆ, ನಿಷ್ಠೆ, ಮೌಲ್ಯಾಧರಿತ ಕೌಟುಂಬಿಕ ವ್ಯವಸ್ಥೆ ಮತ್ತು ಜಾತ್ಯಾತೀತ ಮನೋಭಾವನೆ ಅಳವಡಿಸಿಕೊಂಡಿರುವ ಬಿಲ್ಲವ ಸಮುದಾಯ ಎಲ್ಲರಿಗೂ ಅಚ್ಚುಮೆಚ್ಚುಗೆಯಾಗಿದೆ. ನಾರಾಯಣ ಗುರೂಜಿ ಅವರ ಸಾಮಾಜಿಕ ಕ್ರಾಂತಿಯಿಂದ ಎಲ್ಲ ಸಮುದಾಯಗಳಿಗೂ ಸಾಮಾಜಿಕ ನ್ಯಾಯ ಸಿಗುವಂತಾಯಿತು ಎಂದು ಅವರು ತಿಳಿಸಿದರು.
ನಾನು ರಾಜಕೀಯದಲ್ಲಿ ಇಷ್ಟರ ಮಟ್ಟಿಗೆ ಯಶಸ್ವಿಯಾಗಲು ಜನಾರ್ದನ ಪೂಜಾರಿ ಅವರೇ ನನಗೆ ಪ್ರೇರಣಾ ಶಕ್ತಿ ಎಂದು ಹೇಳಲು ನನಗೆ ಹೆಮ್ಮೆಯಾಗುತ್ತದೆ. ನಾವು ಪ್ರೀತಿ, ವಿಶ್ವಾಸ, ಸಹೋದರತೆಯಿಂದ ಹೋದರೆ ಸಮಾಜವು ನಮ್ಮನ್ನು ಸ್ವೀಕರಿಸುತ್ತದೆ. ಯುವ ಜನಾಂಗ ಈ ಮನೋಭಾವವನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಕೇರಳದಲ್ಲಿ ಎಸ್‍ಎನ್‍ಡಿಪಿ ಹೆಸರಿನಲ್ಲಿ 117 ಶಿಕ್ಷಣ ಸಂಸ್ಥೆಗಳನ್ನು ನಾರಾಯಣಗುರುಗಳ ಹೆಸರಿನಲ್ಲಿ ನಿರ್ಮಿಸಲಾಗಿದೆ. ಕರ್ನಾಟಕದಲ್ಲೂ ಶಿಕ್ಷಣ ಸಂಸ್ಥೆ ರೂಪಿಸಲು ಐದು ಎಕರೆ ಭೂಮಿ ಕೊಡಬೇಕು. ಮಹಿಳಾ ಹಾಸ್ಟೆಲ್ ಅನ್ನು ನಿರ್ಮಿಸಲು ಒಂದು ಎಕರೆ ಜಮೀನನ್ನು ಸರಕಾರದಿಂದ ಒದಗಿಸಿದರೆ ಬಿಲ್ಲವ ಸಂಘದಿಂದ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ಕರ್ನಾಟಕದ ನಾನಾ ಭಾಗಗಳಲ್ಲೂ ಸಮುದಾಯದವರನ್ನು ಬೇರೆ ಬೇರೆ ಹೆಸರಲ್ಲಿ ಕರೆಯಲಾಗುತ್ತದೆ. ಸಂಸ್ಕೃತಿಯು ಭಿನ್ನವಾಗಿಯೇ ಇದೆ. ಆದರೆ ಎಲ್ಲರೂ ಶಿಕ್ಷಣಕ್ಕೆ ಒತ್ತು ನೀಡಬೇಕು. ಆರೋಗ್ಯದ ಕಡೆಯೂ ಗಮನ ನೀಡುವುದು ಸೂಕ್ತ. ಸಮುದಾಯದ ಯುವಕರು ಕೊಲೆ ಮಾಡಿ ಜೈಲಿಗೆ ಸೇರುವುದು ಇಲ್ಲವೇ ಕೊಲೆಯಾಗುವಂತ ಸನ್ನಿವೇಶಗಳು ಸೃಷ್ಟಿಸಿಕೊಳ್ಳಬೇಡಿ. ನಾರಾಯಣಗುರುಗಳ ಆದರ್ಶನದಂತೆ ಬದುಕು ಕಟ್ಟಿಕೊಳ್ಳಿ ಎಂದು ಅವರು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಸೋಲೂರಿನ ಆರ್ಯ ಈಡಿಗ ಸಂಸ್ಥಾನದ ನಾರಾಯಣಗುರು ಮಠದ ವಿಖ್ಯಾತಾನಂದ ಸ್ವಾಮೀಜಿ, ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ, ಶಾಸಕ ವಿ.ಸುನೀಲ್ ಕುಮಾರ್, ಬಿಲ್ಲವ ಅಸೋಸಿಯೇಶನ್‍ನ ಭೋಜರಾಜ್ ಸೇರಿದಂತೆ ಮತ್ತಿತರರು ಇದ್ದರು.
‘ರಾಜ್ಯ ಸರಕಾರವು ಜಾತಿವಾರು ಗಣತಿಯನ್ನು ನಡೆಸಲು ಸಿದ್ದತೆಗಳನ್ನು ನಡೆಸುತ್ತಿದ್ದು, ರಾಜ್ಯದ ವಿವಿಧ ಭಾಗಗಳಲ್ಲಿ ನೆಲಸಿರುವ ಬಿಲ್ಲವರು, ಈಡಿಗರು ಆಯಾ ಭಾಗದಲ್ಲಿರುವಂತೆ ತಮ್ಮ ಜಾತಿಯ ಹೆಸರನ್ನೇ ಬರೆಸಬೇಕು. ಅಡ್ಡಹೆಸರು ಇಲ್ಲವೇ ಉಪಜಾತಿ ಬರೆಸಬಾರದು. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಭಾಗದಲ್ಲಿ ಬಿಲ್ಲವರು, ಉತ್ತರ ಕನ್ನಡ ಭಾಗದಲ್ಲಿ ನೆಲಸಿರುವ ನಾಮಧಾರಿಗಳು, ಶಿವಮೊಗ್ಗ ಜಿಲ್ಲೆಯಲ್ಲಿರುವ ದೀವರು ಹಾಗೂ ಕರ್ನಾಟಕದ ಇತರೆ ಭಾಗಗಳಲ್ಲಿ ಇರುವ ಈಡಿಗರು ಅದೇ ಹೆಸರನ್ನು ನಮೂದಿಸಬೇಕು. ಇದರಿಂದ ಜಾತಿವಾರು ಜನಸಂಖ್ಯೆ ಬಗ್ಗೆ ನಿಖರ ಮಾಹಿತಿ ದೊರೆಯಲಿದೆ’
-ಬಿ.ಕೆ.ಹರಿಪ್ರಸಾದ್, ವಿಧಾನ ಪರಿಷತ್ ಸದಸ್ಯ