ಕೊರಚ ಸಮುದಾಯಕ್ಕೆ ಸಾಮಾಜಿಕ ನ್ಯಾಯಕೊಡಿಸುವುದು ನಮ್ಮ ಜವಾಬ್ದಾರಿ : ಪ್ರೊ.ಎಸ್.ಜಿ.ಸಿದ್ದರಾಮಯ್ಯ
ಬೆಂಗಳೂರು : ಕೊರಚ ಸಮುದಾಯಕ್ಕೂ ಸಾಮಾಜಿಕ ನ್ಯಾಯ ಕೊಡಿಸುವುದು ನಮ್ಮ ಜವಾಬ್ದಾರಿಯೂ ಹೌದು ಎಂದು ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ನಗರದ ಗಾಂಧಿಭವನದಲ್ಲಿ ರವಿವಾರ ಗುಡಿಸಲು ಪ್ರಕಾಶನದ ವತಿಯಿಂದ ಆಯೋಜಿಸಿದ್ದ ‘ಗಿರಿಧರ ರಾವ್ ಹವಲ್ದಾರ್’ ಅವರ ಕೊರಚರು, ನೀವೂ ನಾಣ್ಯ ಸಂಗ್ರಾಹಕರಾಗಿ, ನಾಡು ನುಡಿ ಸಾಧಕರು, ಚಿವ್ ಚಿವ್ ಗುಬ್ಬಚ್ಚಿ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೊರಚ ಸಮುದಾಯವೂ ಸೇರಿದಂತೆ ಅಲೆಮಾರಿ ಸಮುದಾಯಗಳಿಗೆ ಒಳಮೀಸಲಾತಿಯಲ್ಲಿ ಶೇ1ರಷ್ಟು ಆದ್ಯತೆ ನೀಡಬೇಕು. ಸಾಮಾಜಿಕ ನ್ಯಾಯ ವಂಚಿತವಾಗಿರುವ ಸಮುದಾಯಗಳಿಗೆ ಮೀಸಲಾತಿ ಸೌಲಭ್ಯ ಸಿಗಬೇಕು ಎನ್ನುವ ಉದ್ದೇಶದಿಂದಲೇ ಒಳಮೀಸಲಾತಿ ನೀಡಲಾಗಿದೆ. ಇದರಲ್ಲಿ ಅಲೆಮಾರಿಗಳಿಗೆ ನ್ಯಾಯ ಸಿಗದಿರುವ ಕುರಿತು ಚರ್ಚಗಳು ನಡೆದಿವೆ. ಹವಲ್ದಾರ್ ಅವರು ಕೊರಚ ಸಮುದಾಯದ ಸ್ಥಿತಿಗತಿ ಕುರಿತು ದಾಖಲಿಸಿರುವ ಪುಸ್ತಕದಲ್ಲಿ ಸಾಕಷ್ಟು ಮಾಹಿತಿಯಿದೆ ಎಂದು ಹೇಳಿದರು.
ಈಗಂತೂ ದುಡ್ಡು ನೀಡಿದರೆ ಪ್ರಶಸ್ತಿ, ಗೌರವವನ್ನು ನೀಡುವ ವ್ಯವಸ್ಥೆಯೇ ಹುಟ್ಟಿಕೊಂಡಿದೆ. ಆದರೆ ಸಮಾಜಕ್ಕಾಗಿ ದುಡಿದ ಸಾಧಕರನ್ನು ಗುರುತಿಸಿ ‘ಗಿರಿಧರ ರಾವ್ ಹವಲ್ದಾರ್’ ಅವರು ನಾಡು ನುಡಿ ಸಾಧಕರು ಪುಸ್ತಕ ತರುವ ಮೂಲಕ ಗೌರವ ಹೆಚ್ಚಿಸಿದ್ದಾರೆ ಎಂದರು.
ಸಾಹಿತಿ ಬಸವರಾಜ ಸಬರದ ಮಾತನಾಡಿ, ಮುಖ್ಯವಾಹಿನಿ ಎನ್ನುವುದರ ಬಗ್ಗೆ ತಪ್ಪು ಅರ್ಥಮಾಡಿಕೊಳ್ಳಲಾಗಿದೆ. ಮುಖ್ಯವಾಹಿನಿ ಎನ್ನುವುದು ಬರೀ ಮೇಲ್ಜಾತಿಯವರದು ಅಲ್ಲ. ಬುಡಕಟ್ಟು ಸಮಾಜದವರು ಈ ನೆಲದ ಮೂಲ. ಅವರೇ ಮೂಲ ನಿವಾಸಿಗಳು. ಅವರದು ಮುಖ್ಯವಾಹಿನಿ. ಎಲ್ಲರೂ ಹೋಗಬೇಕಿರುವುದು ಅಲ್ಲಿಗೆ. ನಮ್ಮ ಮುಖ್ಯವಾಹಿನಿಗೆ ಅವರು ಬರಬೇಕಿಲ್ಲ. ನಾವು ಅಲ್ಲಿಗೆ ಹೋಗಬೇಕಿದೆ ಎಂದು ಹೇಳಿದರು.
ಮೂಲನಿವಾಸಿಗಳ ಆಚರಣೆಗಳು ಅದ್ಭುತವಾಗಿವೆ. ಮಾನವೀಯ ಅಂತಃಕರಣದ ಆಚರಣೆಗಳು, ಮೂಲನಿವಾಸಿಗಳಲ್ಲಿ ಕರುಳಿನ ಸಂಬಂಧದ ಆಚರಣೆಗಳಿವೆ. ಮೂಲನಿವಾಸಿಗಳು ದೂರವಿದ್ದಾರೆ. ಅವರು ನಮ್ಮ ಜೊತೆ ಬಂದಿಲ್ಲ. ಅದಕ್ಕಾಗಿ ಮೀಸಲಾತಿ ಕೊಡಬೇಕು ಎಂದು ಹೇಳಲಾಗುತ್ತದೆ. ಮೀಸಲಾತಿ ದಾನ ಅಲ್ಲ. ಅದು ಅವರ ಹಕ್ಕು. ಮೂಲನಿವಾಸಿಗಳಿಗೆ ಕೇವಲ ಮೀಸಲಾತಿ ಮಾತ್ರ ಅಲ್ಲ. ಅವರಿಗೆ ಭೂಮಿಯನ್ನು ಕೊಡಬೇಕು ಎಂದು ತಿಳಿಸಿದರು.
ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ, ಟಿ.ಎಸ್.ನಾಗರಾಜ ಶೆಟ್ಟಿ, ಪತ್ರಕರ್ತೆ ಆರ್.ಪೂರ್ಣಿಮಾ, ನಾಣ್ಯಶಾಸ್ತ್ರಜ್ಞ ಪಿ.ಕೆ. ಕೇಶವಮೂರ್ತಿ ಪಿ.ಸುಬ್ರಹ್ಮಣ್ಯ ಶೆಟ್ಟಿ, ಲೇಖಕ ಗಿರಿಧರ ರಾವ್ ಹವಲ್ದಾರ್, ಟಿ.ಆರ್.ಚಂದ್ರಶೇಖರ್ ಗುಡಿಸಲು ಪ್ರಕಾಶನದ ಎಚ್.ನಾಗಭೂಷಣರಾವ್ ಮತ್ತಿತರರು ಉಪಸ್ಥಿತರಿದ್ದರು.