×
Ad

ಬೆಂಗಳೂರು ನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನಿವೇಶನ ಮಂಜೂರಿಗೆ ಪ್ರಯತ್ನ : ಕೆ.ವಿ.ಪ್ರಭಾಕರ್ ಭರವಸೆ

Update: 2026-03-08 23:00 IST

ಬೆಂಗಳೂರು, ಮಾ. 8: ಬೆಂಗಳೂರು ನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ(ಕೆಯುಡಬ್ಲ್ಯುಜೆ) ಕಚೇರಿಗೆ ಸ್ವಂತ ನಿವೇಶನ ನೀಡುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಬಿಎ ಆಯುಕ್ತರೊಂದಿಗೆ ಮಾತುಕತೆ ನಡೆಸಿ, ಶೀಘ್ರವೇ ನಿವೇಶನ ಮಂಜೂರು ಮಾಡಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಭರವಸೆ ನೀಡಿದ್ದಾರೆ.

ರವಿವಾರ ನಗರದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕಚೇರಿಯಲ್ಲಿ ನಡೆದ ಬೆಂಗಳೂರು ನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳಿಗೆ ಪ್ರಮಾಣಪತ್ರ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಎಐ(ಕೃತಕ ಬುದ್ಧಿಮತ್ತೆ) ತಂತ್ರಜ್ಞಾನ ಬಂದ ಮೇಲೆ ಸುದ್ದಿಯ ಸತ್ಯಾಸತ್ಯತೆ ಸವಾಲಾಗಿದೆ. ಊಹೆಗಳ ಮೇಲೆ ಸುದ್ದಿ ಬರೆಯುವ ಪ್ರವೃತ್ತಿ ಬಿಟ್ಟು, ನಿಖರವಾದ ಮಾಹಿತಿ ಗ್ರಹಿಸಿ ವರದಿ ಮಾಡಬೇಕು. ಪತ್ರಕರ್ತರು ಸಮಾಜ ಮತ್ತು ಸರಕಾರದ ನಡುವೆ ಸೇತುವೆಯಾಗಿ ಕೆಲಸ ಮಾಡಬೇಕು ಎಂದು ಪ್ರಭಾಕರ್ ಹೇಳಿದರು.

ಕೆಯುಡಬ್ಲ್ಯುಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ವಾರ್ತಾ ಇಲಾಖೆಯ ಮಾನ್ಯತೆ ಇಲ್ಲದ ಪತ್ರಕರ್ತರಿಗೂ ಮಾಧ್ಯಮ ಸಂಜೀವಿನಿ ಯೋಜನೆ ವಿಸ್ತರಿಸಬೇಕು. ವಸತಿ ಇಲಾಖೆಯ ಯೋಜನೆಗಳಲ್ಲಿ ಪತ್ರಕರ್ತರಿಗೆ ಶೇ.5ರಷ್ಟು ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ವಸತಿ ಸಚಿವ ಝಮೀರ್ ಅಹ್ಮದ್ ಅವರ ಮಾಧ್ಯಮ ಸಲಹೆಗಾರ ಲಕ್ಷ್ಮೀನಾರಾಯಣ, ಪತ್ರಕರ್ತರಿಗೆ ನಿವೇಶನ ಅಥವಾ ಮನೆ ನೀಡುವ ಬಗ್ಗೆ ಶೀಘ್ರವೇ ಸಿಹಿ ಸುದ್ದಿ ನೀಡುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳು ಪ್ರತಿಜ್ಞಾ ವಿಧಿ ಸ್ವೀಕರಿಸಿ ಪದಗ್ರಹಣ ಮಾಡಿದರು. ಇದಾದ ಬಳಿಕ ಸಂಘದ ನೂತನ ಜಿಲ್ಲಾಧ್ಯಕ್ಷ ಸೋಮಶೇಖರ್ ಗಾಂಧಿ ನೇತೃತ್ವದಲ್ಲಿ ಮೊದಲ ಸಭೆ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News