×
Ad

ಗ್ಯಾರಂಟಿಯ ಫಲ ಪ್ರತೀ ದಿನ ತಲುಪುತ್ತಿದೆ, ಫಲಾನುಭವಿಗಳಲ್ಲಿ ಬಿಜೆಪಿಯವರೇ ಹೆಚ್ಚಿದ್ದಾರೆ: ಸಿಎಂ ಸಿದ್ದರಾಮಯ್ಯ

Update: 2024-01-10 22:22 IST

ಬೆಂಗಳೂರು,: ರಾಜ್ಯದ 4 ಕೋಟಿ 30 ಲಕ್ಷ ಕನ್ನಡಿಗರಿಗೆ ಸರಕಾರದ ಗ್ಯಾರಂಟಿಯ ಫಲ ಪ್ರತೀ ದಿನ-ಪ್ರತೀ ತಿಂಗಳು ತಲುಪುತ್ತಿದೆ. ಈ ಫಲಾನುಭವಿಗಳಲ್ಲಿ ಬಿಜೆಪಿಯವರೇ ಹೆಚ್ಚಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಕೆಪಿಸಿಸಿ ವತಿಯಿಂದ ನಗರದ ಇಂದಿರಾಗಾಂಧಿ ಭವನದ ಭಾರತ್ ಜೋಡೋ ಸಭಾಂಗಣದಲ್ಲಿ ನಡೆದ ಪಕ್ಷದ ಮುಖಂಡರ ಮಧ್ಯಾಹ್ನದ ಸಭೆಯಲ್ಲಿ ಅವರು ಮಾತನಾಡಿದರು.

ಪಕ್ಷದ ಕಾರ್ಯಕರ್ತರೇ ನಮ್ಮ ಬೆನ್ನೆಲುಬು. ನಿಮ್ಮ ಹೋರಾಟದಿಂದ ಪಕ್ಷ ಅಧಿಕಾರಕ್ಕೆ ಬಂದಿದೆ. ವಾಮ ಮಾರ್ಗದಲ್ಲಿ ಮೂರೂವರೆ ವರ್ಷ ಅಧಿಕಾರ ನಡೆಸಿದ ಬಿಜೆಪಿ ಮಾಡಬಾರದ್ದನ್ನೆಲ್ಲಾ ಮಾಡಿ ರಾಜ್ಯವನ್ನು ಆರ್ಥಿಕವಾಗಿ ದಿವಾಳಿ ಮಾಡಿದ್ದಾರೆ ಎಂದು ತಿಳಿಸಿದರು.

ನೀರಾವರಿ ಇಲಾಖೆಯೊಂದರಲ್ಲೇ 13 ಸಾವಿರ ಕೋಟಿಗೂ ಅಧಿಕ ಬಿಲ್ ಬಾಕಿ ಉಳಿಸಿದ್ದಾರೆ. ಲೋಕೋಪಯೋಗಿ ಇಲಾಖೆಯಲ್ಲಿ 9 ಸಾವಿರ ಕೋಟಿ ಬಿಲ್ ಬಾಕಿ ಉಳಿಸಿದ್ದಾರೆ. ಸಣ್ಣನೀರಾವರಿ ಇಲಾಖೆಯಲ್ಲಿ 2 ಸಾವಿರ ಕೋಟಿ ರೂಪಾಯಿ ಬಿಲ್ ಬಾಕಿ ಉಳಿಸಿದ್ದಾರೆ, ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ 6 ಸಾವಿರ ಕೋಟಿ ರೂಪಾಯಿ ಬಿಲ್ ಬಾಕಿ ಉಳಿಸಿದ್ದಾರೆ, ಬೆಂಗಳೂರು ನಗರ 5 ಸಾವಿರ ಕೋಟಿ ಬಿಲ್ ಬಾಕಿ ಉಳಿಸಿದ್ದಾರೆ. ಹೀಗೆ ರಾಜ್ಯವನ್ನು ಹಾಳುಮಾಡಿ, ರಾಜ್ಯದ ಆರ್ಥಿಕತೆಯನ್ನು ದಿವಾಳಿ ಮಾಡಿದ್ದಾರೆ ಎಂದರು.

ನಾವು 59 ಸಾವಿರ ಕೋಟಿ ವಾರ್ಷಿಕ ವೆಚ್ಚ ಮಾಡಿ ಐದಕ್ಕೆ ಐದೂ ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ. 4 ಕೋಟಿ 30 ಲಕ್ಷ ಕನ್ನಡಿಗರಿಗೆ ಸರಕಾರದ ಗ್ಯಾರಂಟಿಯ ಫಲ ಪ್ರತೀ ದಿನ, ಪ್ರತೀ ತಿಂಗಳು ತಲುಪುತ್ತಿದೆ. ಇದು ನಿಮ್ಮ ಕಾಂಗ್ರೆಸ್ ಸರಕಾರದ ಸಾಧನೆ. ಇದು ದೇಶದಲ್ಲೇ ಮೊದಲು. ಪ್ರತಿಯೊಬ್ಬ ಕಾರ್ಯಕರ್ತನೂ ಎದೆ ಎತ್ತಿ, ತಲೆ ಎತ್ತಿ ಹೇಳಿ ಎಂದು ಕರೆ ನೀಡಿದರು.

ನಮ್ಮ ಗ್ಯಾರಂಟಿಗಳನ್ನು ಅಣಕಿಸಿ ಈಗ ನಮ್ಮ ಗ್ಯಾರಂಟಿಗಳನ್ನೇ ಕಾಪಿ ಮಾಡಿ ಅದಕ್ಕೆ ಮೋದಿ ಗ್ಯಾರಂಟಿ ಎನ್ನುತ್ತಿದ್ದಾರೆ. ಬಿಜೆಪಿ ಯವರು ಅಷ್ಟು ನಿರ್ಲಜ್ಜರಾಗಿದ್ದಾರೆ ಎಂದರು.

ದಯವಿಟ್ಟು ನಿಮ್ಮ ಹೃದಯದ ಮಾತು ಕೇಳಿ. ಸರಕಾರದ ಕೆಲಸಗಳನ್ನು ಪ್ರತಿ ಮನೆಗೆ ತಲುಪಿಸಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯವರ ಸುಳ್ಳನ್ನು ಸೋಲಿಸಿ ನಮ್ಮ ಸಾಧನೆಗಳನ್ನು ಎತ್ತಿ ಹಿಡಿಯುವ ಮೂಲಕ 28 ಲೋಕಸಭಾ ಸ್ಥಾನಗಳಲ್ಲಿ ಗೆಲ್ಲಿಸಿ ಎಂದು ಕಾರ್ಯಕರ್ತರಿಗೆ ಮುಖ್ಯಮಂತ್ರಿಗಳು ಕೈ ಮುಗಿದು ಕರೆ ನೀಡಿದರು

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷ ಸಲೀಂ ಅಹಮದ್ ಸೇರಿ ಹಲವು ಮುಖಂಡರು ವೇದಿಕೆಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News