×
Ad

ದ್ವಿಭಾಷಾ ಸೂತ್ರದ ಜಾರಿಗೆ ಹೋರಾಟದ ಅಗತ್ಯ : ಡಾ.ಬಿಳಿಮಲೆ

Update: 2025-02-02 22:50 IST

ಡಾ.ಪುರುಷೋತ್ತಮ ಬಿಳಿಮಲೆ

ಬೆಂಗಳೂರು : ಹಿಂದಿಯೇತರ ರಾಜ್ಯಗಳ ಮೇಲೆ ಪರೋಕ್ಷವಾಗಿ ಹಿಂದಿ ಹೇರಿಕೆ ಪ್ರಯತ್ನ ನಡೆಯುತ್ತಿದ್ದು, ರಾಷ್ಟ್ರಕವಿ ಕುವೆಂಪು ಅವರ ಪರಿಕಲ್ಪನೆಯ ದ್ವಿಭಾಷಾ ಸೂತ್ರದ ಜಾರಿ ಬಗ್ಗೆ ಹೋರಾಟ ನಡೆಸುವ ಅಗತ್ಯವಿದೆ ಎಂದು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ತಿಳಿಸಿದ್ದಾರೆ.

ರವಿವಾರ ನಗರದ ಕಸಾಪ ಕುವೆಂಪು ಸಭಾಂಗಣದಲ್ಲಿ ಕನ್ನಡ ಜನಶಕ್ತಿ ಕೇಂದ್ರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ವಿದ್ವಾಂಸ ಡಾ.ಗುರುಪಾದ ಮರಿಗುದ್ದಿ ಅವರಿಗೆ `ಕುವೆಂಪು ಸಾಹಿತ್ಯ' ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಕೇಂದ್ರ ಸರಕಾರ 1968ರಲ್ಲಿ ಮೊದಲ ಬಾರಿಗೆ ತ್ರಿಭಾಷಾ ಸೂತ್ರ ಜಾರಿ ಮಾಡಿದಾಗ ಕುವೆಂಪು ಅವರು ಧ್ವನಿ ಎತ್ತಿದರು. ಜತೆಗೆ ರಾಜಕೀಯ ಒತ್ತಡದಿಂದ ರಾಜ್ಯ ಸರಕಾರ ರಾಜ್ಯದಲ್ಲಿ ಕೂಡ ತ್ರಿಭಾಷಾ ಸೂತ್ರ ಹೇರಲು ಮುಂದಾದಾಗ ವಿರೋಧಿಸಿದ್ದರು. ಅವರ ಪರಿಕಲ್ಪನೆಯ ದ್ವಿಭಾಷಾ ಸೂತ್ರದ ವಾದ ಮಂಡನೆ ಮಾಡಿ ಹೋರಾಟಕ್ಕಿಳಿಯುವ ತುರ್ತು ಅಗತ್ಯವಿದೆ ಎಂದು ಡಾ.ಬಿಳಿಮಲೆ ತಿಳಿಸಿದರು.

ಉತ್ತರ ಭಾರತದ ರಾಜ್ಯಗಳಲ್ಲಿ ತ್ರಿಭಾಷಾ ಸೂತ್ರ ಜಾರಿಯಲ್ಲಿದೆ. ಆದರೆ, ಅಲ್ಲಿ ಇಂಗ್ಲಿಷ್, ಹಿಂದಿ, ಸಂಸ್ಕೃತ ಆಯ್ಕೆ ಮಾಡಿಕೊಳ್ಳುತ್ತಾರೆ. ಬಹಳ ವರ್ಷದಿಂದಲೂ ನೆರೆಯ ತಮಿಳುನಾಡು ತ್ರಿಭಾಷಾ ಸೂತ್ರದ ವಿರುದ್ಧ ಪ್ರಬಲವಾದ ಧ್ವನಿ ಎತ್ತುತ್ತಿದೆ. ಅಂತಹ ವಾತಾವರಣ ನಮ್ಮಲ್ಲೂ ಮೂಡಬೇಕು ಎಂದು ಡಾ.ಬಿಳಿಮಲೆ ಹೇಳಿದರು.

ಕೇಂದ್ರ ಸರಕಾರದ ಹಲವು ಇಲಾಖೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತಮಿಳುನಾಡಿನವರು ಉದ್ಯೋಗಿ ಗಿಟ್ಟಿಸಿಕೊಂಡಿದ್ದಾರೆ. ಆದರೆ, ದ್ವಿಭಾಷಾ ಸೂತ್ರ ಅವರು ಉದ್ಯೋಗ ಗಿಟ್ಟಿಸಿಕೊಳ್ಳಲು ಅಡ್ಡಿಯಾಗಲಿಲ್ಲ. ಹಿಂದಿ ಭಾಷೆಯಿಂದ ಎಷ್ಟು ಜನರಿಗೆ ಉದ್ಯೋಗ ಸಿಕ್ಕಿದೆ ಎಂಬುದರ ಬಗ್ಗೆ ಕೂಡ ಚರ್ಚೆ ಆಗಬೇಕಾಗಿದೆ ಎಂದು ಡಾ.ಬಿಳಿಮಲೆ ತಿಳಿಸಿದರು.

ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ.ರಾಮೇಗೌಡ ಮಾತನಾಡಿ, ಈಗಾಗಲೇ ಕನ್ನಡ ಜನಶಕ್ತಿ ಕೇಂದ್ರವು ಶಾಂತವೇರಿ ಗೋಪಾಲಗೌಡ ಪ್ರಶಸ್ತಿ, ಯಶೋಧರಮ್ಮ ದಾಸಪ್ಪ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಸ್ಥಾಪಿಸಿದೆ. ಅದೇ ರೀತಿಯಲ್ಲಿ ಈ ವರ್ಷದಿಂದ ಕುವೆಂಪು ಹೆಸರಿನಲ್ಲಿ ಸಾಹಿತ್ಯ ಪ್ರಶಸ್ತಿ ಸ್ಥಾಪನೆ ಮಾಡಲಾಗಿದೆ. ಸಾಹಿತ್ಯ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದವರಿಗೆ ಈ ಪ್ರಶಸ್ತಿ ನೀಡಲಾಗುತ್ತಿದ್ದು, ಹಿರಿಯ ವಿದ್ವಾಂಸ ಗುರುಪಾದ ಮರಿಗುದ್ದಿ ಅವರಿಗೆ ಪ್ರಶಸ್ತಿ ನೀಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ಡಾ.ವೂಡೇ ಪಿ.ಕೃಷ್ಣ, ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಪಿ.ಮಲ್ಲಿಕಾರ್ಜುನಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News