×
Ad

ನಾವು ಸಭೆ ಸೇರುವುದರಲ್ಲಿ ತಪ್ಪಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

Update: 2025-01-18 19:12 IST

ಪ್ರಿಯಾಂಕ್ ಖರ್ಗೆ

ಬೆಂಗಳೂರು : ನಾವು ಸಭೆ ಸೇರುವುದರಲ್ಲಿ ತಪ್ಪಿಲ್ಲ, ನಾವು ಸೇರಲೇಬಾರದಾ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

ದಲಿತ ನಾಯಕರ ಡಿನ್ನರ್ ಸಭೆ ರದ್ದಾದ ವಿಚಾರವಾಗಿ ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ಡಿನ್ನರ್ ಪಾರ್ಟಿ ಅಲ್ಲ ಅದು. ನಾವು ಸೇರಲೇಬಾರದಾ?. ರಾಜಕಾರಣಿಗಳು, ಸ್ನೇಹಿತರು ಯಾವಾಗಲೂ ಒಟ್ಟಿಗೆ ಸೇರುತ್ತೇವೆ. ಹೈಕಮಾಂಡ್ ನಾಯಕರು ಸಭೆ ಸೇರಬೇಡಿ ಅಂತ ಹೇಳಲ್ಲ. ಸಭೆ ಸೇರುವುದರಲ್ಲಿ ತಪ್ಪಿಲ್ಲ ಎಂದರು.

ವಿಧಾನಸೌಧದಲ್ಲೇ ಸಭೆ ನಡೆಸಬಹುದು ಎಂಬ ಬಿಜೆಪಿಯ ನಾಯಕರ ವ್ಯಂಗ್ಯ ವಿಚಾರವಾಗಿ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಕ್ಯಾಬಿನೆಟ್‍ನಲ್ಲಿ ಎಲ್ಲರಿಗೂ ಅವಕಾಶ ಇದೆಯಾ?. ಬಿಜೆಪಿಗೆ ಸಾಮಾನ್ಯ ಪ್ರಜ್ಞೆ ಇದೆಯಾ?. ಬಿಜೆಪಿಯವರು ಮೊದಲು ನಿಮ್ಮದು ನೋಡಿಕೊಳ್ಳಿ. ಕಾಂಗ್ರೆಸ್ ಬಗ್ಗೆ ಮಾತನಾಡುವುದು ನಿಲ್ಲಿಸಿ ಎಂದು ವಾಗ್ದಾಳಿ ನಡೆಸಿದರು.

ಸದ್ಯದಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ಬದಲಾವಣೆ ಆಗುತ್ತಾರೆ ಅಂತ ಬಿಜೆಪಿಯಲ್ಲೇ ಅಧಿಕೃತವಾಗಿ ಹೇಳಲಾಗುತ್ತಿದೆ. ನಮ್ಮದು ಪಕ್ಷವನ್ನು ಸಕ್ರಿಯಗೊಳಿಸುವ ಬಗ್ಗೆ ಅಷ್ಟೇ ಚರ್ಚೆ. ಬಿಜೆಪಿಯಲ್ಲಿ ಯಾವ ರೀತಿ ಪಕ್ಷ ನಾಶ ಮಾಡಬೇಕು?. ಯಾರ ನಾಯಕತ್ವದಲ್ಲಿ ನಾಶ ಮಾಡಬೇಕು ಎಂಬ ಚರ್ಚೆ ಮಾಡುತ್ತಾರೆ. ನಮ್ಮಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದರು.

ಪಕ್ಷದ ನಾಯಕರಿಗೆ ಮಲ್ಲಿಕಾರ್ಜುನ ಖರ್ಗೆ ಎಚ್ಚರಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಯಾರ ಬಾಯಿಗೂ ಕೂಡ ಬೀಗ ಹಾಕಲು ಆಗಲ್ಲ. ನಮ್ಮ ನಮ್ಮ ವಿವೇಚನೆ ಬಳಸಿ ಮಾತಾಡಬೇಕು. ಮಾತಿನಿಂದ ಪಕ್ಷಕ್ಕೆ ಹಾನಿ ಆಗುತ್ತದೆ ಎಂಬುದನ್ನು ನಾವು ಯೋಚನೆ ಮಾಡಬೇಕು ಎಂದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News