×
Ad

ಇರಾನ್ ಮೇಲೆ ಅಮೆರಿಕದ ಬಾಂಬ್ ದಾಳಿ: ಎಡಪಕ್ಷಗಳ ಖಂಡನೆ

Update: 2025-06-22 23:25 IST

ಬೆಂಗಳೂರು : ಅಮೆರಿಕ ಸಂಯುಕ್ತ ಸಂಸ್ಥಾನವು ಇರಾನ್ ಮೇಲೆ ಬಾಂಬ್ ದಾಳಿ ನಡೆಸಿದ್ದು, ಇದಕ್ಕೆ ಭಾರತದ ಎಡಪಕ್ಷಗಳಾದ ಸಿಪಿಎಂ, ಸಿಪಿಐ ಸಿಪಿಐ(ಎಂಎಲ್), ಆರ್‌ಎಸ್‌ಪಿ ಹಾಗೂ ಫಾರ್ವರ್ಡ್ ಬ್ಲಾಕ್ ಪಕ್ಷಗಳು ವಿರೋಧ ವ್ಯಕ್ತಪಡಿಸಿವೆ.

ರವಿವಾರ ಸಿಪಿಎಂನ ಪ್ರಧಾನ ಕಾರ್ಯದರ್ಶಿ ಎಂ.ಎ.ಬೇಬಿ, ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ.ರಾಜಾ, ಸಿಪಿಐ(ಎಂಎಲ್)ನ ಪ್ರಧಾನ ಕಾರ್ಯದರ್ಶಿ ದೀಪಂಕರ್ ಭಟ್ಟಾಚಾರ್ಯ, ಆರ್‌ಎಸ್‌ಪಿ ಪ್ರಧಾನ ಕಾರ್ಯದರ್ಶಿ ಮನೋಜ್ ಹಾಗೂ ಫಾರ್ವರ್ಡ್ ಬ್ಲಾಕ್ ಪ್ರಧಾನ ಕಾರ್ಯದರ್ಶಿ ದೇವರಾಜನ್ ಜಂಟಿ ಪ್ರಕಟನೆಯನ್ನು ಹೊರಡಿಸಿದ್ದು, ಇರಾನ್ ಮೇಲಿನ ದಾಳಿಯು ಪಶ್ಚಿಮ ಏಷ್ಯಾವನ್ನು ಅಸ್ಥಿರಗೊಳಿಸುತ್ತದೆ. ಹಾಗೆಯೇ ತೀವ್ರ ಆರ್ಥಿಕ ದುಷ್ಪರಿಣಾಮಗಳನ್ನು ಬೀರುತ್ತದೆ ಎಂದು ಹೇಳಿದ್ದಾರೆ.

ಇರಾನ್ ಪರಮಾಣು ಶಸ್ತ್ರಾಸ್ತ್ರವನ್ನು ಅಭಿವೃದ್ಧಿಪಡಿಸಲಿದೆ ಎಂದು ತಿಳಿಸಿ ಅಮೆರಿಕ ಮತ್ತು ಇಸ್ರೇಲ್ ತಮ್ಮ ದಾಳಿಗಳನ್ನು ಸಮರ್ಥಿಸಿಕೊಳ್ಳುತ್ತಿವೆ. ಆದರೆ, ಅಂತರ್‌ರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ ಮಹಾನಿರ್ದೇಶಕ ರಾಫೆಲ್ ಗ್ರೋಸಿ ಜೂ.19ರಂದು ‘ಪರಮಾಣು ಶಸ್ತ್ರಾಸ್ತ್ರದ ಪ್ರಯತ್ನದ ಬಗ್ಗೆ ನಮಗೆ ಯಾವುದೇ ಪುರಾವೆಯೂ ಇರಲಿಲ್ಲ’ ಎಂದು ಹೇಳಿರುವುದನ್ನು ಗಮನಿಸುವುದು ಮುಖ್ಯ ಎಂದು ಎಡಪಕ್ಷಗಳು ಹೇಳಿವೆ.

ಇರಾನ್ ಪರಮಾಣು ಶಸ್ತ್ರಾಸ್ತ್ರವನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಸೂಚಿಸುವ ಯಾವುದೇ ಪುರಾವೆಗಳನ್ನು ತಮ್ಮ ಬಳಿ ಇಲ್ಲ ಎಂದು ಅಮೆರಿಕದ ಗುಪ್ತಚರ ಸಂಸ್ಥೆಗಳೂ ಒಪ್ಪಿಕೊಂಡಿವೆ. ಇದಲ್ಲದೆ, ಇರಾನ್ ಈಗಲೂ ಪರಮಾಣು ನಿಷೇಧ ಒಪ್ಪಂದಕ್ಕೆ ಸಹಿದಾರನಾಗಿಯೇ ಇದೆ ಎಂದು ಎಡಪಕ್ಷಗಳು ಸ್ಪಷ್ಟಪಡಿಸಿವೆ.

ಎಸ್‌ಯುಸಿಐ ಖಂಡನೆ

ಬೆಂಗಳೂರು : ಅಮೆರಿಕನ್ ಸಾಮ್ರಾಜ್ಯಶಾಹಿಗಳು ಎಲ್ಲ ಅಂತರ್‌ರಾಷ್ಟ್ರೀಯ ನಿಯಮಗಳನ್ನು ಉಲ್ಲಂಘಿಸಿ, ಪರಮಾಣು ಶಕ್ತಿ ಸಂಸ್ಥೆಯ ಎಚ್ಚರಿಕೆಗಳನ್ನು ನಿರ್ಲಕ್ಷಿಸಿ, ಶಾಂತಿಪ್ರಿಯ ಜಗತ್ತಿನ ಜನರ ಅಭಿಪ್ರಾಯವನ್ನು ತಿರಸ್ಕರಿಸಿ ಇರಾನ್ ಮೇಲೆ ನಡೆಸಿರುವ ಮಿಲಿಟರಿ ದಾಳಿಯನ್ನು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಖಂಡಿಸುತ್ತದೆ ಎಂದು ಕಾರ್ಯದರ್ಶಿ ಕೆ.ಉಮಾ ಹೇಳಿದ್ದಾರೆ.

ರವಿವಾರ ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಅಮೆರಿಕನ್ ಸಾಮ್ರಾಜ್ಯಶಾಹಿ ರಾಕ್ಷಸರು ಮೊದಲು ಮಧ್ಯಪ್ರಾಚ್ಯದಲ್ಲಿ ತಮ್ಮ ಮುಂಚೂಣಿ ಕಚೇರಿಯಾದ ಝಿಯೋನಿಸ್ಟ್ ಇಸ್ರೇಲ್‌ಗೆ ಸಹಾಯ ಮಾಡಿ, ಪ್ರಚೋದಿಸಿ, ಗಾಝಾದಲ್ಲಿ ಲಕ್ಷಾಂತರ ನಿರಪರಾಧಿಗಳಾದ ಫೆಲೆಸ್ತೀನಿಯರನ್ನು ಕೊಂದು ಸಾಮೂಹಿಕ ನರಮೇಧವನ್ನು ಆಯೋಜಿಸಿದರು ಎಂದು ತಿಳಿಸಿದ್ದಾರೆ.

ಇದೀಗ ಇರಾನ್ ತಮ್ಮ ಆದೇಶಗಳಿಗೆ ಬಗ್ಗುವಂತೆ ಮಾಡಲು, ತಮ್ಮ ಪ್ರಾಬಲ್ಯವನ್ನು ವಿಸ್ತರಿಸಲು ಮತ್ತು ಮಧ್ಯಪ್ರಾಚ್ಯದಲ್ಲಿ ತಮ್ಮ ಹಿಡಿತ ಕಾಪಾಡಿಕೊಳ್ಳುವ ಯೋಜನೆಗೆ ಯಾವುದೇ ಸವಾಲು ಎದುರಾಗದಂತೆ ಖಾತ್ರಿಪಡಿಸಿಕೊಳ್ಳಲು, ಇರಾನ್ ಮೇಲೆ ಅಪ್ರಚೋದಿತವಾದ ಮಾರಕ ಮಿಲಿಟರಿ ದಾಳಿಯನ್ನು ಅಮೆರಿಕ ಆರಂಭಿಸಿದೆ. ಆದರೆ ಇರಾನ್ ಜನರ ದಿಟ್ಟ ಪ್ರತಿರೋಧವು ಈ ಘೋರ ಷಡ್ಯಂತ್ರವನ್ನು ವಿಫಲಗೊಳಿಸುತ್ತಿದೆ. ಇಸ್ರೇಲ್‌ನ ಮಿಲಿಟರಿ ದಾಳಿಯಿಂದ ಇರಾನ್‌ನ್ನು ಸದೆಬಡಿಯಲು ವಿಫಲವಾದ ಅಮೆರಿಕ, ಈಗ ನೇರವಾಗಿ ಇರಾನ್ ಮೇಲೆ ದಾಳಿ ಮಾಡಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News