ಮೇ 26ರಂದು ಕುಟುಂಬ ಸಮೇತ ಹಜ್ ಯಾತ್ರೆಗೆ : ಯು.ಟಿ.ಖಾದರ್
ಬೆಂಗಳೂರು : ಕುಟುಂಬ ಸದಸ್ಯರ ಜೊತೆ ಮೇ 26ರಂದು ಹಜ್ ಯಾತ್ರೆಗೆ ತೆರಳುತ್ತಿದ್ದೇನೆ ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದಾರೆ.
ಸೋಮವಾರ ನಗರದ ತಿರುಮೇನಹಳ್ಳಿಯಲ್ಲಿರುವ ಹಜ್ ಭವನದಲ್ಲಿ ಹಜ್ ಯಾತ್ರಿಕರ ತಂಡಕ್ಕೆ ಬೀಳ್ಕೊಟ್ಟ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಹಲವು ಬಾರಿ ಉಮ್ರಾ ಯಾತ್ರೆ ಕೈಗೊಂಡಿದ್ದೇನೆ. ಆದರೆ, ಇದೇ ಮೊದಲ ಬಾರಿಗೆ ಕುಟುಂಬದವರೊಂದಿಗೆ ಹಜ್ ಯಾತ್ರೆಗೆ ತೆರಳುವ ಅವಕಾಶವನ್ನು ಸರ್ವಶಕ್ತನಾದ ಅಲ್ಲಾಹ್ ಕರುಣಿಸಿದ್ದಾನೆ. ನನ್ನ ಕುಟುಂಬದ ಜೊತೆ ಮೇ 26ರಂದು ಹಜ್ ಯಾತ್ರೆಗೆ ತೆರಳುತ್ತಿದ್ದೇನೆ ಎಂದು ಹೇಳಿದರು.
ರಾಜ್ಯದಿಂದ ಪವಿತ್ರ ಹಜ್ ಯಾತ್ರೆಗೆ ತೆರಳುವ ಎಲ್ಲ ಯಾತ್ರಿಕರು ನಮ್ಮ ದೇಶ ಹಾಗೂ ನಮ್ಮ ರಾಜ್ಯದ ಅಭಿವೃದ್ಧಿ, ಶಾಂತಿ, ಸಹಬಾಳ್ವೆಗಾಗಿ ಪ್ರಾರ್ಥಿಸುವಂತೆ ಮನವಿ ಮಾಡುತ್ತಿದ್ದೇನೆ. ನಮ್ಮ ರಾಜ್ಯವು ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಇಲ್ಲಿ ಎಲ್ಲರೂ ಒಗ್ಗಟ್ಟಾಗಿ ಬಾಳಬೇಕು ಎಂದು ಖಾದರ್ ತಿಳಿಸಿದರು.
ಇದೇ ಸಂದರ್ಭದಲ್ಲಿ ರಾಜ್ಯ ಹಜ್ ಸಮಿತಿ ಅಧ್ಯಕ್ಷ ಎಸ್.ಝುಲ್ಟಿಖಾರ್ ಅಹ್ಮದ್ ಖಾನ್ ಅವರು ಸ್ಥಿ ಕರ್ ಯು.ಟಿ.ಖಾದರ್ ಅವರನ್ನು ಸನ್ಮಾನಿಸಿದರು. ಮೌಲಾನಾ ಝನುಲ್ ಆಬಿದೀನ್, ರಾಜ್ಯ ಹಜ್ ಸಮಿತಿ ಸದಸ್ಯ ಮುಜಾಹಿದ್ ಪಾಷಾ, ವಿಶೇಷ ಅಧಿಕಾರಿ ಸಿದ್ದೀಕ್ ಪಾಷಾ ಉಪಸ್ಥಿತರಿದ್ದರು.