2027ಕ್ಕೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಡಿಸಿಎಂ ಡಿ.ಕೆ.ಶಿವಕುಮಾರ್
ಡಿ.ಕೆ.ಶಿವಕುಮಾರ್
ಬೆಂಗಳೂರು, ಜೂ.21: "2027ರ ಒಳಗಾಗಿ ಕೋಲಾರ ಭಾಗಕ್ಕೆ ಎತ್ತಿನಹೊಳೆ ನೀರನ್ನು ಹರಿಸಬೇಕು ಎಂಬುದು ನಮ್ಮ ಸರಕಾರದ ಸಂಕಲ್ಪ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಸದಾಶಿವ ನಗರ ನಿವಾಸದ ಬಳಿ ಮಾಧ್ಯಮದವರ ಜೊತೆ ಮಾತನಾಡಿದ ಡಿಸಿಎಂ, "ಈ ಯೋಜನೆಗೆ ಅರಣ್ಯ ಇಲಾಖೆಗೆ ಸಂಬಂಧಿತ ಸಮಸ್ಯೆಗಳು, ಭೂ ಸ್ವಾಧೀನ ಪ್ರಕ್ರಿಯೆ, ಬೈರಗೊಂಡಲು, ಲಕ್ಕೇನಹಳ್ಳಿಯಲ್ಲಿ ಸಮತೋಲಿತ ಜಲಾಶಯ ನಿರ್ಮಾಣಕ್ಕೆ ಸಂಬಂಧಿಸಿದ ಭೂ ಸ್ವಾಧೀನ ಹಾಗೂ ಆರ್ಥಿಕ ವಿಚಾರವಾಗಿ ನಾವು ಈಗಾಗಲೇ ಚರ್ಚೆ ಮಾಡಿದ್ದೇವೆ. ಹೀಗಾಗಿ ಈ ಕಾಮಗಾರಿಗಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇವೆ" ಎಂದು ತಿಳಿಸಿದರು.
"ಈ ಯೋಜನೆಯಲ್ಲಿ ಮಾರ್ಪಾಟು ಮಾಡಿರುವ ಅಂಶಗಳು, ಸಚಿವರುಗಳ ಸಲಹೆಗಳನ್ನು ನೀಡಿದ್ದಾರೆ. ಇಲ್ಲಿ ಕೆಲವು ತಾಂತ್ರಿಕ ಅಂಶಗಳು ಕೂಡ ಇವೆ. ಎಲ್ಲವನ್ನು ಅಧ್ಯಯನ ಮಾಡಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸುತ್ತೇನೆ. ಬೇರೆ ಯೋಜನೆಗಳು ವಿಳಂಬವಾದರೂ ಚಿಂತೆಯಿಲ್ಲ, ಎತ್ತಿನಹೊಳೆ ಯೋಜನೆಯನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸುವಂತೆ ಸಿಎಂ ನನಗೆ ನಿರ್ದೇಶನ ನೀಡಿದ್ದಾರೆ" ಎಂದು ಹೇಳಿದರು.
ಶಾಸಕರ ಹೇಳಿಕೆ ಖಂಡಿಸುತ್ತೇನೆ
ಶಾಸಕ ಬಿ.ಆರ್ ಪಾಟೀಲ್ ಆಡಿಯೋದಲ್ಲಿ ಮಾಡಿರುವ ಆರೋಪ ನಿಜ ಎಂದು ಪುನರುಚ್ಚರಿಸಿದ್ದಾರೆ ಎಂದು ಕೇಳಿದಾಗ, "ಅವರು ಏನು ಹೇಳಿದ್ದಾರೆ ನನಗೆ ಗೊತ್ತಿಲ್ಲ. ಈ ವಿಚಾರ ಮುಖ್ಯಮಂತ್ರಿಯ ಗಮನಕ್ಕೆ ತಂದಿದ್ದು, ಅವರು ಈ ವಿಚಾರವಾಗಿ ಕ್ರಮ ಕೈಗೊಳ್ಳಲಿದ್ದಾರೆ. ಪಾರದರ್ಶಕವಾಗಿ ವಸತಿ ಹಂಚಿಕೆಯಾಗುವಾಗ ಫಲಾನುಭವಿ ಹಣ ನೀಡಲು ಹೇಗೆ ಸಾಧ್ಯ? ವಸತಿ ಹಂಚುವ ನಿರ್ಧಾರ ತೆಗೆದುಕೊಳ್ಳುವವರು ಪಂಚಾಯತ್ ಹಾಗೂ ಸ್ಥಳೀಯ ಸಂಸ್ಥೆಗಳು. ಶಾಸಕರು ಯಾವ ಉದ್ದೇಶದಲ್ಲಿ ಹೇಳಿದ್ದಾರೋ ಇದು ಸರಿ ಇಲ್ಲ. ನಾನಿದನ್ನು ಖಂಡಿಸುತ್ತೇನೆ. ನಮ್ಮ ಸರಕಾರದಲ್ಲಿ ಇಂತಹ ವಿಚಾರ ಇಲ್ಲ. ಈ ವಿಚಾರವಾಗಿ ನಾನು ಹಾಗೂ ಸಿಎಂ, ಶಾಸಕರ ಜೊತೆ ಮಾತನಾಡುತ್ತೇವೆ" ಎಂದು ತಿಳಿಸಿದರು.
ಕಾಲವೇ ಉತ್ತರ ಕೊಡಲಿದೆ
ಮೇಕೆದಾಟು ಪಾದಯಾತ್ರೆ ವಿಚಾರವಾಗಿ ನಮಗೆ ಆಹ್ವಾನ ನೀಡಿಲ್ಲ, ಹೀಗಾಗಿ ನಟ್ಟು ಬೋಲ್ಟ್ ಟೈಟ್ ಮಾಡುತ್ತೇವೆ ಎಂದು ಹೇಳಿರುವುದು ಸರಿಯಲ್ಲ ಎಂಬ ನಟ ಸುದೀಪ್ ಹೇಳಿಕೆ ಬಗ್ಗೆ ಕೇಳಿದಾಗ, "ಈಗ ನಾನು ಈ ವಿಚಾರವಾಗಿ ಉತ್ತರ ನೀಡುವುದಿಲ್ಲ. ನಾನು ಚಲನಚಿತ್ರ ವಾಣಿಜ್ಯ ಮಂಡಳಿಗೆ ಹೋಗಿ ಆಹ್ವಾನ ನೀಡಿದ್ದೇನೆ. ಮಾಧ್ಯಮಗಳ ದಾಖಲೆಗಳಲ್ಲಿ ಎಲ್ಲವೂ ಇದೆ. ಕಾಲವೇ ಉತ್ತರ ನೀಡಲಿದೆ" ಎಂದು ತಿಳಿಸಿದರು.