ಫ್ಯಾಶಿಸಂನ ಕರಾಳಮುಖ

Update: 2026-07-28 10:35 IST

ಕೊನೆಗೂ ಧರ್ಮೇಂದ್ರ ಪ್ರಧಾನ್‌ರ ರಾಜೀನಾಮೆ ಪಡೆಯುವಲ್ಲಿ ಸಿಜೆಪಿ ಯಶಸ್ಸು ಸಾಧಿಸಿದೆ. ಬಿಜೆಪಿಯಲ್ಲಿ ರಾಜೀನಾಮೆ ಸಾಧ್ಯವಿಲ್ಲ ಎಂದವರ ಸೊಕ್ಕನ್ನು ತಾತ್ಪೂರ್ತಿಕವಾದರೂ ಅಡಗಿಸಿದೆ. ಕಳೆದ ಹನ್ನೆರಡು ವರ್ಷಗಳಿಂದಲೂ ಎಲ್ಲ ಬಗೆಯ ಭ್ರಷ್ಟಾಚಾರ, ಧಾರ್ಮಿಕ ಅಸಹನೆ, ಜನಾಂಗೀಯ ದ್ವೇಷವನ್ನೇ ತನ್ನ ಅಸ್ತ್ರವಾಗಿಸಿಕೊಂಡು ಅಜೇಯವಾಗಿ ಮೆರೆಯುತ್ತಿದ್ದ ಬಿಜೆಪಿಯ ಮಾತೃ ಸಂಸ್ಥೆಯಾಗಿರುವ ಆರೆಸ್ಸೆಸ್‌ಗೆ ಸಿಜೆಪಿ ಮುಖಂಡತ್ವದಲ್ಲಿ ಅಣಿನೆರೆದಿದ್ದ ಜನಸಮುದಾಯವು ತಕ್ಕ ಪಾಠ ಕಲಿಸಿದೆ. ಇಡೀ ಭಾರತವನ್ನು ತನ್ನ ಹಿಂದೂ ಫೋಲ್ಡರ್‌ನಲ್ಲಿ ತಂದಿದ್ದೇವೆ ಎಂದು ಭ್ರಮಿಸಿದವರ ಅಮಲು ಇಳಿಸಿದೆ.

‘‘ಅಫ್‌ಸೋಸ್ ನಾ ಮುತ್ಲಿಫ್ ಹೈ ಮುಜೇ| ಫಾಸಿ ಪೇ ಛಡನೆ ಕಾ

ಜೂದಾ ಗೋದಿ ಸೇ ಹೋತಾ ಹೈ| ಯಹಿ ಸದ್‌ಮಾ ಸತಾತಾ ಹೈ ಮುಜೇ ॥’’

ಬ್ರಿಟಿಷರ ವಿರುದ್ಧ ಹೋರಾಡಿ ಗಲ್ಲು ಶಿಕ್ಷೆಗೆ ಒಳಗಾಗುವಾಗ ಖುದಿರಾಮ ಬೋಸ್ ಮತ್ತು ಅನೇಕರು ಈ ದೋಹೆ ಉಚ್ಚರಿಸಿ ನೇಣುಗಂಬ ಏರಿದರೆಂದು ಹೇಳಲಾಗುತ್ತದೆ. ಇದರ ಅರ್ಥ ‘‘ಶೂಲಕ್ಕೇರಲು ನನಗೆ ಕಿಂಚತ್ತೂ ಹಳಹಳಿ ಇಲ್ಲ. ಆದರೆ ತಾಯಿಯ ತೊಡೆಯಿಂದ ಜಾರಿ ಹೋಗುತ್ತೇನಲ್ಲ ಎಂಬ ಆಘಾತ ನನ್ನನ್ನು ಸತಾಯಿಸುತ್ತಿದೆ’’. ಮರಣಕ್ಕೆ ಹೆದರದ ಆ ಧೀರ ಯುವಪಡೆ ಅಂದು ಆಳುವ ಬ್ರಿಟಿಷರಲ್ಲಿ ತಮ್ಮ ಸಮರಧೀರ ಹೋರಾಟ ಮತ್ತು ತ್ಯಾಗ ಬಲಿದಾನದಿಂದ ಭಯ ಹುಟ್ಟಿಸಿದ್ದರು. ಭಗತ್‌ಸಿಂಗ್, ಸುಖದೇವ್, ರಾಜಗುರು, ರಾಮ್ ಪ್ರಸಾದ್ ಬಿಸ್ಮಿಲ್ ಆದಿಯಾಗಿ ಅನೇಕ ತರುಣರು

‘‘ಸರ್‌ಫರೋಷಿ ಕೀ ತಮನ್ನಾ ಅಬ್ ಹಮಾರೆ ದಿಲ್ ಮೇ ಹೈ

ದೇಖನಾ ಹೈ ಜೋರ್ ಕಿತನಾ ಬಾಜೂ-ಎ-ಕಾತಿಲ್ ಮೇ ಹೈ ॥’’

ಎಂದು ಹಾಡುತ್ತಲೇ ಗಲ್ಲುಶಿಕ್ಷೆ ಸ್ವೀಕರಿಸಿದ್ದರು. ಇದರರ್ಥ ತಲೆಯನ್ನು ಅಥವಾ ಪ್ರಾಣವನ್ನು ದೇಶಕ್ಕಾಗಿ ಅರ್ಪಿಸುವ ಆಸೆ ಈಗ ನನ್ನಲ್ಲಿ ಹುಟ್ಟಿದೆ. ಕೊಲೆಗಾರನ (ಅಂದಿನ ಬ್ರಿಟಿಷರಲ್ಲಿ) ತೋಳಿನಲ್ಲಿ ಅದೆಷ್ಟು ಶಕ್ತಿ ಇದೆ ಎಂದು ನೋಡಿಯೆ ಬಿಡೋಣ ಎಂದಾಗುತ್ತದೆ. ಬಿಹಾರದ ಕವಿ ಬಿಸ್ಮಿಲ್ ಅಝೀಮಾಬಾದಿ 1921ರಲ್ಲಿ ಬರೆದ ಈ ಕವನವು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕ್ರಾಂತಿಕಾರಿಗಳ ಮೂಲ ಮಂತ್ರವಾಗಿತ್ತು. ಭಗತ್ ಸಿಂಗ್‌ರಂತೂ ಒಂದು ಸಲ ಬ್ರಿಟಿಷರಿಗೆ ಕ್ಷಮಾಪಣೆ ಕೇಳಿದ್ದರೂ ಸಾಕಿತ್ತು. ಅವರೆಲ್ಲರೂ ಬಿಡುಗಡೆಯಾಗುತ್ತಿದ್ದರು. ಆದರೆ ಆ ಯುವಕರ ದೇಶಭಕ್ತಿ ತೋರಿಕೆಯದು ಅಥವಾ ತಮ್ಮನ್ನು ವೈಭವೀಕರಿಸಿಕೊಳ್ಳಲು ಹುಟ್ಟಿದ್ದಾಗಿರಲಿಲ್ಲ.

ಅಂದೂ ಕೂಡ ಯುವ ಜನತೆಯೇ ದೇಶಭಕ್ತಿ ಎಂಬ ಪರಿಕಲ್ಪನೆಗಳಿಗೆ ಸ್ಪಷ್ಟವಾದ ಮೂರ್ತರೂಪ ಕೊಟ್ಟಿತ್ತು. ಯುವಕರ ಧಮನಿಯಲ್ಲಿ ಹರಿಯುತ್ತಿದ್ದ ಬಿಸಿ ನೆತ್ತರು ಈ ಮಣ್ಣಲ್ಲಿ ಬಿದ್ದಾಗಲೇ ನೂರಾರು ಚಿಕ್ಕ ಪುಟ್ಟ ಸಂಸ್ಥಾನಗಳಲ್ಲಿ ಹಂಚಿ ಹೋಗಿದ್ದ ನೆಲಕ್ಕೆ ದೇಶವೆಂಬ ಸ್ವರೂಪ ಬಂದಿತು. ಪ್ರತಿಯೊಬ್ಬ ಸಂಸ್ಥಾನಿಕರು ತಮ್ಮದು ಸ್ವತಂತ್ರ ದೇಶವೆಂದೇ ಕರೆದುಕೊಂಡು ಬರುತ್ತಿದ್ದರು. ಪಕ್ಕದ ರಾಜರನ್ನು ವೈರಿಗಳೆಂದು ಪರಿಗಣಿಸಿ ಅವರ ಮೇಲೆ ದಂಡೆತ್ತಿ ಹೋಗುವುದು ಮಾಮೂಲಿಯಾಗಿತ್ತು. ತನ್ನ ಸಂಸ್ಥಾನವನ್ನು ಅಕ್ಕಪಕ್ಕದ ರಾಜರಿಂದ ರಕ್ಷಿಸಿಕೊಳ್ಳಲೆಂದು ಬ್ರಿಟಿಷರೊಂದಿಗೆ ಕೈ ಜೋಡಿಸಿದ ಉದಾಹರಣೆಗಳಿಗೇನೂ ಕಡಿಮೆ ಇಲ್ಲ. ಕಾರಣ ಅವರ ದೇಶದ ವ್ಯಾಪ್ತಿ ತುಂಬಾ ಚಿಕ್ಕದಿತ್ತು. ಪರಿಕಲ್ಪನೆಯೂ ತುಂಬಾ ಅಳ್ಳಕವಾಗಿತ್ತು. ಇಂಥ ಎಲ್ಲ ಸಂಸ್ಥಾನಗಳನ್ನು ಸ್ಥಳೀಯರ ಬೆಂಬಲ ಮತ್ತು ಮೂರ್ಖತನದಿಂದ ಬ್ರಿಟಿಷರು ಆಕ್ರಮಿಸಿಕೊಂಡ ನಂತರವೇ ಭಾರತೀಯರಿಗೆ ಇದು ನಮ್ಮ ದೇಶವೆಂಬ ಜ್ಞಾನೋದಯವಾಗಿತ್ತು. ಅಷ್ಟಕ್ಕೂ ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಆಳರಸರು ತಿರುಗಿ ಬಿದ್ದದ್ದು ತಮ್ಮ ರಾಜಸತ್ತೆಯ ಉಳಿವಿಗಾಗಿಯೇ ಹೊರತು ಪ್ರಜಾಪ್ರಭುತ್ವಕ್ಕಾಗಿ ಅಲ್ಲ. ಹೊಸ ಶಿಕ್ಷಣದ ಸೌಲಭ್ಯ, ಜಾಗತಿಕ ಮಟ್ಟದಲ್ಲಿ ಸಂಭವಿಸುತ್ತಿದ್ದ ಕ್ರಾಂತಿಕಾರಿ ಹೋರಾಟಗಳು, ಸ್ಥಳೀಯವಾಗಿ ಕಾಣಿಸಿಕೊಂಡಿದ್ದ ಸುಧಾರಣಾವಾದಿ ಚಟುವಟಿಕೆಗಳು ನವ ಪೀಳಿಗೆಯಲ್ಲಿ ಹೊಸ ಬಗೆಯ ಆಲೋಚನೆಗಳು ಹುಟ್ಟಲು ಕಾರಣವಾದವು. ಅದೇ ಹೊತ್ತಿಗೆ ವಿದೇಶಗಳಲ್ಲಿ ವ್ಯಾಸಂಗ ಮಾಡಿ ಬಂದಿದ್ದ ಯುವಪಡೆಯೊಂದು ಹೊರಗಿನ ಗಾಳಿಗೆ ತೆರೆದುಕೊಂಡು ಸ್ವತಂತ್ರವಾಗಿ ಆಲೋಚಿಸಲು ಶುರು ಮಾಡಿತ್ತು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿಕೊಂಡಿದ್ದ ಜನಸಾಮಾನ್ಯರಲ್ಲಿ ಪ್ರಜಾಪ್ರಭುತ್ವದ ಬೀಜಗಳು ಮೊಳೆತು ಹೆಮ್ಮರವಾಗಿ ನಿಂತವು.

ತುಂಬ ತಡವಾದರೂ ಗಟ್ಟಿಯಾದ ಸ್ವಾತಂತ್ರ್ಯದ ಅಭೀಪ್ಸೆಯೊಂದು ಕಾಣಿಸಿಕೊಂಡದ್ದು ಅಕಾರಣವೇನಾಗಿರಲಿಲ್ಲ. ಎಲ್ಲ ಸಂಸ್ಥಾನಿಕರಿಗೂ ಬ್ರಿಟಿಷರಿಂದ ಬಿಡುಗಡೆ ಬೇಕಿತ್ತು. ಬಹುತೇಕ ಸಂಸ್ಥಾನಿಕರಿಗೆ ಪ್ರತ್ಯೇಕವಾಗಿ ತಾವಷ್ಟೇ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದರೆ ಸಾಲದು ಎಂಬ ಸತ್ಯದ ಸಾಕ್ಷಾತ್ಕಾರವಾಗಿತ್ತು. ಎಲ್ಲರೂ ಪರಸ್ಪರ ಒಗ್ಗಟ್ಟಾಗಿ ಹೋರಾಡುವ ಮೂಲಕವೇ ಬ್ರಿಟಿಷರನ್ನು ಒದ್ದೋಡಿಸಬಹುದು ಎಂದು ಮನವರಿಕೆಯಾದೊಡನೆ ದೇಶವ್ಯಾಪಿ ಸ್ವಾತಂತ್ರ್ಯ ಸಂಗ್ರಾಮ ಭುಗಿಲೆದ್ದಿತು. ಸ್ವಾತಂತ್ರ್ಯದ ಗಂಗೆಗೆ ಆಗ ಹರಿದು ಬಂದ ಸಾವಿರಾರು ತೊರೆ-ಹಳ್ಳಗಳಿಗೆ ಲೆಕ್ಕವಿರಲಿಲ್ಲ. ನೂರಾರು ಮುಖಂಡರು ತಮ್ಮ ತಮ್ಮ ಪ್ರದೇಶಗಳಲ್ಲಿ ಭಿನ್ನ-ವಿಭಿನ್ನ ನೆಲೆಗಳಲ್ಲಿ ಆಂದೋಲನ ನಡೆಸಿದ್ದರು. ಮುತ್ಸದ್ದಿಗಳ ಕರೆಗೆ ಓಗೊಟ್ಟು ದೇಶದ ಎಲ್ಲ ಭಾಗಗಳಲ್ಲಿ ಯುವ ಪಡೆ ಎದ್ದು ನಿಂತಿತು. ಯುವಪಡೆಯ ದುರ್ದಮ್ಯ ಛಲವೇ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂಬುದನ್ನು ಮರೆಯುವಂತಿಲ್ಲ.

ಇಂದು ಕೂಡ ಅಂಥದೇ ಯುವಪಡೆ ಆಳರಸರ ಭ್ರಷ್ಟತೆ, ನೀಚತನ, ಮೋಸ, ವಂಚನೆಗಳ ವಿರುದ್ಧ ತಿರುಗಿ ಬಿದ್ದಿದೆ. ಸಂವೇದನಾ ರಹಿತ ನ್ಯಾಯಾಧೀಶರ ಒಂದು ಎಚ್ಚರ ತಪ್ಪಿದ ಮಾತು ‘ಕಾಕ್ರೋಚ್ ಜನತಾ ಪಾರ್ಟಿ’ ಜನ್ಮ ತಾಳಲು ಕಾರಣವಾಗಿ ಬೃಹತ್ ಆಂದೋಲನಕ್ಕೆ ದಾರಿ ಮಾಡಿಕೊಟ್ಟಿದೆ. ಯಾವುದೇ ಹೋರಾಟ ಇದ್ದಕ್ಕಿದ್ದಂತೆ ಒಮ್ಮಿಂದೊಮ್ಮೆಲೇ ಧುಮುಕುವುದಿಲ್ಲ. ಹಾಲಿಗೆ ಇದ್ದಕ್ಕಿದ್ದಂತೆ ಉಕ್ಕು ಬರುವುದಿಲ್ಲ. ತಣ್ಣನೆ ಹಾಲು ಕಾಯುವಾಗ ನಿಧಾನವಾಗಿ ಬಿಸಿಯೇರುತ್ತ ಹೋಗುತ್ತದೆ. ಬಿಸಿ ಏರುವ ಅವಧಿ ಅಷ್ಟಾಗಿ ಕಣ್ಣಿಗೆ ಬೀಳುವುದಿಲ್ಲ. ಬಿಸಿ ಏರುತ್ತ ಏರುತ್ತ ಕಾಲಲಬ್ಧಿಗೆ ಬಂದೊಡನೆ ಒಮ್ಮೆಲೇ ನೋಡು ನೋಡುವಷ್ಟರಲ್ಲಿ ಉಕ್ಕಿ ಚೆಲ್ಲುತ್ತದೆ. ಕೈಗೆ ಸಿಗದಂತೆ ಹರಿದು ಹೋಗುತ್ತದೆ ಹಾಲು. ಅಂದರೆ ಯಾವುದೇ ಹೋರಾಟವು ಕೂಡ ಒಳಗೊಳಗೆ ಬಿಸಿಯೇರುತ್ತ ಹೋಗಿ ಒಂದು ದಿನ ನೆಲದ ಮರೆಯ ದಾವಾಗ್ನಿಯಂತೆ ಸ್ಫೋಟಗೊಳ್ಳುತ್ತದೆ. ಈಗ ಭಾರತದಲ್ಲಿ ಆಗುತ್ತಿರುವುದು ಇದೇ ಸ್ಫೋಟಕ ಶಕ್ತಿಯ ಪ್ರದರ್ಶನ. ಕಳೆದ ಹತ್ತಾರು ವರ್ಷಗಳಿಂದ ದೇಶದ ಜನತೆ ವಿಶೇಷವಾಗಿ ತಳ ಸಮುದಾಯಗಳು, ದುಡಿಯುವ ಸಮುದಾಯಗಳು ಜೀವನ ನಿರ್ವಹಣೆಯ ಕಷ್ಟಕ್ಕೆ ಸಿಕ್ಕಿ ಹತಾಶರಾಗತೊಡಗಿದ್ದರು. ರಾಷ್ಟ್ರೀಯ ಸಂಪತ್ತಿನ ಖಾಸಗೀಕರಣ, ಹೊಸ ಆರ್ಥಿಕ ನೀತಿಗಳು, ಜಾಗತೀಕರಣದ ಸುಳಿಗೆ ಸಿಕ್ಕಿ ದುಡಿಯಲು ಕೆಲಸವಿಲ್ಲ. ಶಾಲೆ ಕಲಿಯಲು ಹಣ ಇಲ್ಲ. ಸಣ್ಣ-ಪುಟ್ಟ ವ್ಯಾಪಾರ ಮಾಡಲು ಬಂಡವಾಳವಿಲ್ಲ. ಬಂಡವಾಳ ಹೂಡಿದರೂ ದೊಡ್ಡ ವ್ಯಾಪಾರಿ ಸಂಸ್ಥೆಗಳ ಪೈಪೋಟಿಯಲ್ಲಿ ನಿಲ್ಲುವಂತಿಲ್ಲ. ಇನ್ನೊಂದೆಡೆ ಕೃಷಿ ಸಂಪೂರ್ಣ ನೆಲ ಕಚ್ಚಿದೆ. ಬೃಹತ್ ಯಾಂತ್ರೀಕರಣದಿಂದ ಕಾರ್ಮಿಕರ ಕೆಲಸಗಳು ಕಳೆದು ಹೋಗಿವೆ. ಸರಕಾರಿ ವಲಯವಂತೂ ಸಂಪೂರ್ಣ ಹೊರಗುತ್ತಿಗೆಯ ದಲ್ಲಾಳಿಗಳ ಕೈ ಸೇರಿದೆ. ಬೃಹತ್ ಬಂಡವಾಳಶಾಹಿ ವ್ಯವಸ್ಥೆಯೂ ದೇಶವೆಂಬ ದೇಶವನ್ನು ಆಪೋಷನಗೈದು ಬಿಟ್ಟಿದೆ. ಬಂಡವಾಳಶಾಹಿ ತನ್ನ ಉಳಿವಿಗಾಗಿ ಸರ್ವಾಧಿಕಾರಿಯನ್ನು ಮುನ್ನೆಲೆಗೆ ತಂದಿದೆ.

ಭಾರತ ಈಗ ಫ್ಯಾಶಿಸಂನ ನಡು ಬೀದಿಗೆ ಬಂದು ನಿಂತಿದೆ. ಅದರ ಅಕರಾಳ-ವಿಕರಾಳ ಮುಖವನ್ನು ಇದೇ 20-7-2026ರಂದು ಜಂತರ್ ಮಂತರ್‌ನಲ್ಲಿ ಕಂಡಿದ್ದೇವೆ. ಒಳಗೊಳಗೆ ದಾವಾನಲದಂತೆ ಕುದಿಯುತ್ತಿದ್ದ ಯುವ ಜನತೆಯ ಸಿಟ್ಟು, ಸೆಡವು ಕಾಕ್ರೋಚ್ ಜನತಾ ಪಾರ್ಟಿ ರೂಪದಲ್ಲಿ ಸ್ಫೋಟಗೊಂಡಿವೆ. ದೇಶದ ಭವಿಷ್ಯವೆಂದು ನಂಬಲಾಗಿರುವ ವಿದ್ಯಾರ್ಥಿ ಯುವಪಡೆಯೊಂದು ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ನೆಪದಲ್ಲಿ ಹೋರಾಟದ ಅಂಗಳಕ್ಕೆ ಬಂದಿದೆ. ಸಾಗರೋಪಾದಿಯಲ್ಲಿ ಯುವಪಡೆ ನುಗ್ಗಿದೆ. ಅವರ ಬೇಡಿಕೆಯಾದರೂ ಏನಿತ್ತು? ಕೇಂದ್ರದ ಶಿಕ್ಷಣ ಸಚಿವರ ರಾಜೀನಾಮೆ, ನೀಟ್ ಪ್ರಶ್ನೆ ಪತ್ರಿಕೆಯ ಸೋರಿಕೆಯಿಂದ ಆಘಾತಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡ ಮಕ್ಕಳ ಸಾವಿಗೆ ಪರಿಹಾರ ಹಾಗೂ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ (ಎನ್‌ಟಿಎ) ರದ್ದತಿ. ತುಂಬಾ ನ್ಯಾಯೋಚಿತವೂ ಮತ್ತು ಸರಳವೂ ಆಗಿದ್ದ ಈ ಮೂರು ಬೇಡಿಕೆಗಳ ಕುರಿತು ಧರಣಿ ನಡೆಸುತ್ತಿದ್ದ ವಿದ್ಯಾರ್ಥಿಗಳನ್ನು ಮಾತಾಡಿಸುವುದು ಒತ್ತಟ್ಟಿಗಿರಲಿ; ನಿರ್ಲಜ್ಜ ಸರಕಾರ ತನ್ನದೇ ದೇಶದ ವಿದ್ಯಾರ್ಥಿಗಳ ಮೇಲೆ ನಡೆಸಿದ ಹಿಂಸಾಚಾರ ಅಕ್ಷರಗಳಲ್ಲಿ ಹಿಡಿದಿಡಲಾಗದಷ್ಟು ಬರ್ಬರಿಕವಾಗಿತ್ತು. ಕೇಂದ್ರ ಸರಕಾರದ ಈ ಅಮಾನವೀಯ ನಡೆಯನ್ನು ವಿಶ್ವದಾದ್ಯಂತ ಖಂಡಿಸಲಾಗುತ್ತಿದೆ. ಅನೇಕ ದೇಶಗಳಲ್ಲಿ ವಿದ್ಯಾರ್ಥಿಗಳ ಪರವಾಗಿ ಧರಣಿ, ಸತ್ಯಾಗ್ರಹಗಳು ನಡೆಯುತ್ತಿವೆ. ಅಂದು ಮನಸೋಇಚ್ಛೆ ಮಕ್ಕಳನ್ನು ಹಿಂಸಿಸಿರುವುದನ್ನು ನೋಡಿದ ಮನುಷ್ಯತ್ವ ಇದ್ದವರಾರೂ ಇದನ್ನು ಸಮರ್ಥಿಸಿಕೊಳ್ಳಲು ಸಾಧ್ಯವೇ ಇಲ್ಲ. 16, 18 ವರ್ಷದ ಸಣ್ಣ ಪ್ರಾಯದ ಮಕ್ಕಳನ್ನು ಪೊಲೀಸರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಲಾಠಿಗಳಿಗೆ ಮೊಳೆ ಸಿಕ್ಕಿಸಿ ಹೊಡೆದಿದ್ದಾರೆ. ಹೆಣ್ಣುಮಕ್ಕಳ ಮುಟ್ಟಬಾರದ ಅಂಗಗಳಿಗೆ ಲಾಠಿ ಪ್ರಯೋಗ, ಅವಾಚ್ಯ ಪದಗಳಿಂದ ನಿಂದಿಸುವುದು, ಧಮಕಿ ಹಾಕುವುದು, ಪೊಲೀಸರಲ್ಲದ ವಸ್ತ್ರಧಾರಿಗಳು, ಸಿವಿಲ್ ಡ್ರೆಸ್‌ನಲ್ಲಿದ್ದ ಗೂಂಡಾಗಳು ನೇರವಾಗಿ ಜಂತರ್ ಮಂತರ್‌ಗೆ ನುಗ್ಗಿ ಭಯಾನಕ ದಾಳಿ ಮಾಡಿದ್ದು ವ್ಯಾಪಕವಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇಷ್ಟೆಲ್ಲ ಅವಾಂತರಗಳಿಂದ ನೊಂದ ಹೋರಾಟಗಾರರು ತಮ್ಮ ಅಹವಾಲನ್ನು ನ್ಯಾಯಾಲಯದ ಎದುರು ತೋಡಿಕೊಂಡರೆ ಸನ್ಮಾನ್ಯ ನ್ಯಾಯಾಧೀಶರು ‘‘ಅಂಥ ವೀಡಿಯೊಗಳನ್ನು ನೋಡಲು ಆಸಕ್ತಿ ಇಲ್ಲ. ಸಮಯವೂ ಇಲ್ಲ. ಆದ್ದರಿಂದ ಸಮಯ ವ್ಯರ್ಥ ಮಾಡಬೇಡಿ ಮತ್ತು ನಿಮ್ಮ ಸಮಯವನ್ನು ವ್ಯರ್ಥ ಮಾಡಿಕೊಳ್ಳಬೇಡಿರಿ’’ ಎಂದಿರುವ ನಿರ್ಲಜ್ಜ ಹೇಳಿಕೆ ಇತಿಹಾಸದಲ್ಲಿ ದಾಖಲಾಗಿದೆ. ಉರ್ದು ಶಾಯರಿಯೊಂದು ಇಂಥವರನ್ನು ನೋಡಿ ಹುಟ್ಟಿ ಕೊಂಡಿದೆ. ‘‘ಮೇರಾ ಕಾತಿಲ್ ಹೀ ಮೇರಾ ಮುನ್ಸಿಫ್ ಹೈ| ಕ್ಯಾ ಮೇರಾ ಹಕ್ ಮೇ ಫೈಸಲಾ ದೇಗಾ॥’’ ಇದರ ಅರ್ಥ ‘‘ನನ್ನ ಕೊಲೆಗಾರನೇ ನ್ಯಾಯಾಧೀಶನಾಗಿ ಬಂದರೆ ನನ್ನ ಪರವಾಗಿ ನ್ಯಾಯ ಸಿಗುವುದೇ?’’ ಹೌದು ಈಗ ಭಾರತದಲ್ಲಿ ನ್ಯಾಯಲಯದ ಮೇಲಿನ ಜನರ ವಿಶ್ವಾಸ ಹೊರಟು ಹೋಗಿದೆ. ಫ್ಯಾಶಿಸಂ ಮೊದಲ ಲಕ್ಷಣವೆಂದರೆ ನ್ಯಾಯಾಲಯಗಳು ಆಳರಸರ ಕೈಗೊಂಬೆಗಳಾಗುವುದು. ಇದನ್ನು ದೇಶವಾಸಿಗಳು ಕಳೆದ ಹನ್ನೆರಡು ವರ್ಷಗಳಿಂದಲೂ ಅನುಭವಿಸುತ್ತಲೇ ಬರುತ್ತಿದ್ದಾರೆ. ವಿದ್ಯಾರ್ಥಿ ಯುವ ಸಮೂಹವನ್ನು ಜಿರಳೆಗಳು ಎಂದು ಷರಾ ಬರೆದ ನ್ಯಾಯಾಧೀಶರ ಬಳಿಯೇ ಹೋದರೆ ಅವರು ತಮ್ಮಲ್ಲಿ ಸಮಯವಿಲ್ಲ ಎಂದು ಹೇಳದೆ ಮತ್ತೇನು ಹೇಳಬಲ್ಲರು. ಅಷ್ಟೇಕೆ ಇನ್ನೊಬ್ಬ ಮಂತ್ರಿ ಮಹೋದಯರು ಧರಣಿ ನಿರತ ಯುವಕರನ್ನು ಕುರಿತು ‘‘ಇದರಲ್ಲಿ ಒಂದೆರಡು ಜಿರಳೆಯನ್ನು ಹೊಡೆದು ತಲೆಕೆಳಗಾಗಿಸಿ ನೇತಾಡಿಸಬೇಕು. ಆಗ ಉಳಿದ ಜಿರಳೆಗಳು ತಾನಾಗಿಯೇ ಓಡಿ ಹೋಗುತ್ತವೆ’’ ಎನ್ನುತ್ತಾರೆ. ಇನ್ನೊಬ್ಬ ನೇತಾರ ‘‘ಮುಲ್ಲಾಗಳಿಗೂ ನೀಟ್ ಪ್ರಶ್ನೆ ಪತ್ರಿಕೆಗೂ ಏನು ಸಂಬಂಧ?’’ ಎಂದರೆ ಮಗದೊಬ್ಬ ‘‘ಧರಣಿ ನಿರತರೆಲ್ಲರೂ ಗೂಂಡಾಗಳು, ನೀಟ್ ಪರೀಕ್ಷೆ ಬರೆದವರೇ ಅಲ್ಲ’’ ಎನ್ನುತ್ತಾನೆ. ಸಾಮಾಜಿಕ ಜಾಲ ತಾಣದಲ್ಲಿಯಂತೂ ಧರಣಿ ನಿರತ ಸೋನಂ ವಾಂಗ್ಚುಕ್‌ರನ್ನು ಚೀನಾ ಏಜೆಂಟ್, ಪಾಕಿಸ್ತಾನಿ ಫಂಡೆಡ್ ಮುಂತಾಗಿ ಬಾಯಿಗೆ ಬಂದಂತೆ ಬೊಗಳುತ್ತಿದ್ದಾರೆ. ಧರಣಿ ನಿರತರೆಲ್ಲ ಹಿಂದೂ ವಿರೋಧಿಗಳು, ದೇಶದ್ರೋಹಿಗಳು, ವಿದೇಶಿ ಫಂಡ್‌ನಿಂದ ಬದುಕುತ್ತಿರುವವರು ಇತ್ಯಾದಿ ಟ್ರೋಲ್‌ಗಳಂತೂ ಮಾಮೂಲಿಯಾಗಿವೆ.

ಫ್ಯಾಶಿಸ್ಟ್ ಸರಕಾರದ ಮೊದಲ ಕೆಲಸವೆಂದರೆ ತನ್ನದೇ ಪ್ರಜೆಗಳನ್ನು ವೈರಿಗಳಂತೆ ಕಂಡು ದಮನಿಸುವುದು. ಮತ್ತು ಸುಳ್ಳುಗಳನ್ನು ಸತ್ಯದ ತಲೆ ಮೇಲೆ ಹೊಡೆದಂತೆ ಬಿತ್ತುವುದು. ನಂತರ ಹಿಂಸೆ, ದ್ವೇಷವನ್ನು ಪ್ರಚೋದಿಸಿ ಜನರನ್ನು ಭಯಗ್ರಸ್ಥರನ್ನಾಗಿ ಮಾಡುವುದು. ಧರಣಿಯಲ್ಲಿ ಪೆಟ್ಟು ತಿಂದ ನೋವನ್ನು ಅನುಭವಿಸುತ್ತಿದ್ದ ಯುವಕನೊಬ್ಬ ಕಣ್ಣೀರು ಹಾಕುತ್ತಲೇ ‘‘ನಮಗೆ ಸರಕಾರದಿಂದ ಏನೂ ಬೇಡ. ನಾವು ಶಿಕ್ಷಣವನ್ನು ಕೇಳುವುದಿಲ್ಲ. ಉದ್ಯೋಗವನ್ನು ಕೇಳುವುದಿಲ್ಲ. ನಮಗೆ ಜೀವ ಸಹಿತ ಬಿಟ್ಟರೆ ಸಾಕು. ನಾವು ಹೇಗಾದರೂ ಬದುಕುತ್ತೇವೆ’’ ಎಂದು ಅಂಗಲಾಚಿ ಬೇಡಿಕೊಳ್ಳುತ್ತಿದ್ದ ದೃಶ್ಯ ಫ್ಯಾಶಿಸಂನ ಭಯಾನಕತೆಯನ್ನು ರಾಚಿಸುತ್ತಿತ್ತು. ಆತನ ಕಣ್ಣುಗಳಲ್ಲಿ ಅನೂಹ್ಯ ಭಯವೊಂದು ಕಾಲೂರಿತ್ತು. ಇದಕ್ಕೆ ವ್ಯತಿರಿಕ್ತವಾಗಿ ಸಾವಿರ ಸಾವಿರ ಮಕ್ಕಳು ಪೊಲೀಸರ ಎದುರು ನಿಂತು ‘‘ಬನ್ನಿ ಹೊಡೆಯಿರಿ. ಇನ್ನೂ ನಮಗೆ ಹೊಡೆಯಿರಿ’’ ಎಂದು ಎದೆ ಕೊಟ್ಟು ನಿಲ್ಲುತ್ತಿರುವ ದೃಶ್ಯವು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕ್ವಿಟ್ ಇಂಡಿಯಾ ಮತ್ತು ಉಪ್ಪಿನ ಸತ್ಯಾಗ್ರಹದ ಸಂದರ್ಭದಲ್ಲಿ ಸ್ವಾತಂತ್ರ್ಯ ಸೇನಾನಿಗಳು ಬ್ರಿಟಿಷ್ ಸೈನ್ಯಕ್ಕೆ ಎದೆ ಕೊಟ್ಟು ಹೊಡೆಸಿಕೊಂಡು ನೆಲಕ್ಕುರುಳುತ್ತಿದ್ದದನ್ನು ನೆನಪಿಸುತ್ತಿತ್ತು. ಅಂದು ನಮ್ಮನ್ನು ಹೊಡೆದವರು ಪರಕೀಯರಾಗಿದ್ದರು. ಇಂದು ನಮ್ಮವರು ಹೊಡೆಯುತ್ತಿದ್ದಾರೆ. ಹೀಗೆ ಹೊಡೆಸಿಕೊಂಡವರಲ್ಲಿ ಬಹುಪಾಲು ಇವರು ಆರೋಪಿಸುತ್ತಿರುವ ಹಿಂದೂ ಮಕ್ಕಳೇ ಇದ್ದರಲ್ಲವೆ? ಈಗ ಇವರ ಹಿಂದುತ್ವದ ಅಸಲಿ ಬಣ್ಣ ಬಯಲಿಗೆ ಬಿದ್ದಿದೆ. ‘ಹಿಂದೂ ನಾವೆಲ್ಲ ಒಂದು’ ಎಂಬ ಅವರ ಬೊಗಳೆಯು ಬಹು ಸಂಖ್ಯಾತರಾಗಿದ್ದ ಹಿಂದುಳಿದ, ದಲಿತ, ಶೂದ್ರ ಮಕ್ಕಳನ್ನು ತಮ್ಮ ಕಾಲಾಳುವಾಗಿ ಬಳಸಿಕೊಳ್ಳುವ ಕುತಂತ್ರವಾಗಿದೆ ಎಂಬುದು ಯುವಜನತೆಗೆ ಮನವರಿಕೆಯಾಗತೊಡಗಿದೆ. ಧರಣಿ ನಿರತ ವಿದ್ಯಾರ್ಥಿಗಳಲ್ಲಿ ಬಹುಪಾಲು ಮಕ್ಕಳು ಮೊನ್ನೆವರೆಗೂ ಅವರ ಸಮರ್ಥಕರಾಗಿದ್ದವರೇ ತಾವು ಎಂದು ಹೇಳಿಕೊಳ್ಳುತ್ತಿರುವುದು ಬಿಜೆಪಿಗೆ ನಡುಕ ಹುಟ್ಟಿಸಿದೆ. ಪ್ರಾಯಶಃ ಫ್ಯಾಶಿಸ್ಟ್ ಸರಕಾರದ ಕ್ಷಣಗಣನೆ ಪ್ರಾರಂಭವಾದಂತಿದೆ. ಏಕೆಂದರೆ ಇವರ ಹಿಂದುತ್ವದ ಅಮಲು ಏರಿಸಿಕೊಂಡಿದ್ದ ನವ ತರುಣರಿಗೆ ಎಲ್ಲಿಯೋ ಒಂದು ಕಡೆ ಸತ್ಯ ದರ್ಶನವಾದಂತೆ ತೋರುತ್ತಿದೆ. ದಿಕ್ಕು ತಪ್ಪಿದ ಎಲ್ಲರಲ್ಲಿಯೂ ಇನ್ನೂ ತಿಳಿವು ಮೂಡಿಲ್ಲವಾದರೂ ಹಿಂದುತ್ವದ ಕೋಟೆಯ ಕಲ್ಲುಗಳು ಉದುರಲು ಪ್ರಾರಂಭವಾಗಿವೆ.

ಕೊನೆಗೂ ಧರ್ಮೇಂದ್ರ ಪ್ರಧಾನ್‌ರ ರಾಜೀನಾಮೆ ಪಡೆಯುವಲ್ಲಿ ಸಿಜೆಪಿ ಯಶಸ್ಸು ಸಾಧಿಸಿದೆ. ಬಿಜೆಪಿಯಲ್ಲಿ ರಾಜೀನಾಮೆ ಸಾಧ್ಯವಿಲ್ಲ ಎಂದವರ ಸೊಕ್ಕನ್ನು ತಾತ್ಪೂರ್ತಿಕವಾದರೂ ಅಡಗಿಸಿದೆ. ಕಳೆದ ಹನ್ನೆರಡು ವರ್ಷಗಳಿಂದಲೂ ಎಲ್ಲ ಬಗೆಯ ಭ್ರಷ್ಟಾಚಾರ, ಧಾರ್ಮಿಕ ಅಸಹನೆ, ಜನಾಂಗೀಯ ದ್ವೇಷವನ್ನೇ ತನ್ನ ಅಸ್ತ್ರವಾಗಿಸಿಕೊಂಡು ಅಜೇಯವಾಗಿ ಮೆರೆಯುತ್ತಿದ್ದ ಬಿಜೆಪಿಯ ಮಾತೃ ಸಂಸ್ಥೆಯಾಗಿರುವ ಆರೆಸ್ಸೆಸ್‌ಗೆ ಸಿಜೆಪಿ ಮುಖಂಡತ್ವದಲ್ಲಿ ಅಣಿನೆರೆದಿದ್ದ ಜನಸಮುದಾಯವು ತಕ್ಕ ಪಾಠ ಕಲಿಸಿದೆ. ಇಡೀ ಭಾರತವನ್ನು ತನ್ನ ಹಿಂದೂ ಫೋಲ್ಡರ್‌ನಲ್ಲಿ ತಂದಿದ್ದೇವೆ ಎಂದು ಭ್ರಮಿಸಿದವರ ಅಮಲು ಇಳಿಸಿದೆ. ಬಹುಸಂಖ್ಯಾತರೆಲ್ಲರೂ ಹಿಂದುತ್ವದ ಅಮಲಿನಲ್ಲಿ ಇಲ್ಲ ಎಂಬುದು ಸಾಬೀತಾಗಿದೆ. ಬಿಜೆಪಿಗೆ ಮುಖಭಂಗವಾಗಿದ್ದೇನೊ ಸರಿ. ಆದರೆ ಅದು ಪೂರ್ತಿ ಸೋತಿದೆ ಎಂದೇನೂ ಇಲ್ಲ. ತಾಂತ್ರಿಕವಾಗಿ ಚೂರು ಹಿನ್ನಡೆಯಾಗಿದ್ದರೂ ತನ್ನ ಹಿಂದುತ್ವದ ಅಜೆಂಡಾದಿಂದ ಅದು ಹಿಂದೆ ಸರಿದಿಲ್ಲ. ವರ್ತಮಾನದಲ್ಲಿ ಸಂಭವಿಸುತ್ತಿರುವ ಘಟನೆಗಳು ಅವರಲ್ಲಿ ಗಾಬರಿಯನ್ನು ಹುಟ್ಟಿಸಿದೆ. ಸಮುದಾಯ ತಮ್ಮ ಕೈ ತಪ್ಪಿ ಹೋಗುತ್ತದೆ ಎಂದು ಅರಿವಾದೊಡನೆ ಬಿಜೆಪಿ ಒಂದು ಹೆಜ್ಜೆ ಹಿಂದೆ ಇಟ್ಟಿದೆ ಹೊರತು ಅದು ಸಂಪೂರ್ಣ ಸೋತು ಶರಣಾಗಿಲ್ಲ. ಧರ್ಮೇಂದ್ರ ಪ್ರಧಾನರು ತಮ್ಮ ರಾಜೀನಾಮೆ ಪತ್ರದಲ್ಲಿ ಬಳಸಿದ ಭಾಷೆಯೇ ಇದಕ್ಕೆ ನಿದರ್ಶನ. ದೇಶದ್ರೋಹಿ ಶಕ್ತಿಗಳು ಮುನ್ನೆಲೆಗೆ ಬರುತ್ತಿದ್ದು ವಿದ್ಯಾರ್ಥಿಗಳ ದಿಕ್ಕು ತಪ್ಪಿಸುತ್ತಿದ್ದಾರೆಯಾದ್ದರಿಂದ ತಾನು ಅನಿವಾರ್ಯವಾಗಿ ರಾಜೀನಾಮೆ ಕೊಡುತ್ತಿದ್ದೇನೆ ಎಂದಿದ್ದಾರೆ. ಇದರರ್ಥ ಶಿಕ್ಷಣ ಮಂತ್ರಿಗೆ ಎಲ್ಲಿಯೂ ಪಶ್ಚಾತ್ತಾಪವಿಲ್ಲ. ತಾವು ಮಾಡಿದ್ದು ತಪ್ಪು ಎಂದು ಒಪ್ಪಿಕೊಳ್ಳಲು ಸಂಘಿಗಳು ಯಾವತ್ತೂ ಸಿದ್ಧವಾಗಿಲ್ಲ. ಮಹಾತ್ಮಾ ಗಾಂಧಿಯವರನ್ನು ಗುಂಡಿಕ್ಕಿ ಕೊಂದದ್ದು ತಪ್ಪು ಎಂದು ಈವರೆಗೂ ಸಂಘ ಹೇಳಿಕೊಂಡಿಲ್ಲ. ದುರಂತವೆಂದರೆ ಅಂತರಂಗದಲ್ಲಿ ಗಾಂಧಿ ಹತ್ಯೆಯನ್ನು ಸಮರ್ಥಿಸಿಕೊಳ್ಳುತ್ತಾರೆ. ಸಂಘದ ಶಾಖೆಗಳಲ್ಲಿ ಇದನ್ನು ಧೀರ ನಡೆ ಎಂಬಂತೆ ಬಿಂಬಿಸಲಾಗುತ್ತದೆ. ವಾಟ್ಸ್‌ಆ್ಯಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ ಮುಂತಾದ ಸಾಮಾಜಿಕ ಜಾಲ ತಾಣಗಳಲ್ಲಿ ಅವರು ಬಳಸುತ್ತಿರುವ ಭಾಷೆ, ಟ್ರೋಲ್ ಮಾಡುತ್ತಿರುವ ಬಗೆಗಳಲ್ಲಿ ಇದನ್ನು ಸ್ಪಷ್ಟವಾಗಿ ಗಮನಿಸಬಹುದು.

ಪರಿಸ್ಥಿತಿ ತಮ್ಮ ಕೈ ತಪ್ಪಿ ಹೋಗುತ್ತಿದೆ. ಹೀಗೆ ಬಿಟ್ಟರೆ ದೇಶದಾದ್ಯಂತ ತಮ್ಮ ವಿರೋಧಿ ಅಲೆ ದಳ್ಳುರಿಯಾಗಿ ಹಬ್ಬುತ್ತದೆ ಎಂಬ ಸುಳಿವು ಸಿಕ್ಕಿದೆ. ಜಂತರ್ ಮಂತರ್ ಖಾಲಿ ಮಾಡಿಸದ ಹೊರತು ತಮಗೆ ಉಳಿಗಾಲವಿಲ್ಲ ಎಂಬುದನ್ನು ಕಂಡುಕೊಂಡ ಬಿಜೆಪಿ ಹೋರಾಟವನ್ನು ದಮನ ಮಾಡುವ ತಂತ್ರವಾಗಿಯೇ ರಾಜೀನಾಮೆ ಮತ್ತು ಇನ್ನಿತರ ಸಿಜೆಪಿ ಬೇಡಿಕೆಗಳನ್ನು ಈಡೇರಿಸುವ ನಾಟಕಕ್ಕೆ ಮುಂದಾಗಿದೆ. ಸದ್ಯ ಸಿಜೆಪಿಗಾಗಲಿ ಅಲ್ಲಿ ಅಣಿ ನೆರೆದಿರುವ ಯುವ ಸಮೂಹಕ್ಕಾಗಲಿ ನಿರ್ದಿಷ್ಟ ರಾಜಕೀಯ ಉದ್ದೇಶ, ಸ್ಪಷ್ಟವಾದ ಸೈದ್ಧಾಂತಿಕ ನಿಲುವು, ದೀರ್ಘ ಹೋರಾಟದ ರಣತಂತ್ರ, ಮೂರ್ತ ರೂಪದ ಸಂಘಟನಾ ಚಾಕಚಕ್ಯತೆಗಳು ಕಾಣಿಸಿಕೊಂಡಿಲ್ಲವಷ್ಟೆ. ಹೋರಾಟ ಹೀಗೆ ಬೆಳೆಯಲು ಬಿಟ್ಟರೆ ಇವೆಲ್ಲವೂ ತಾನಾಗಿಯೇ ರೂಪಗೊಳ್ಳುತ್ತವೆ. ಅನತಿ ಕಾಲದಲ್ಲಿಯೇ ಇದು ತಮಗೆ ಮುಳುವಾಗುತ್ತದೆ. ಸಿಜೆಪಿ ಸ್ಪಷ್ಟ ರಾಜಕೀಯ ನಿಲುವು ಪಡೆದುಕೊಂಡರೆ ಈ ಯುವ ಸಮುದಾಯ ಶಾಶ್ವತವಾಗಿ ತಮ್ಮ ಕೈ ತಪ್ಪಿ ಹೋಗುತ್ತದೆ ಎಂದು ಗಮನಿಸಿದ ಬಿಜೆಪಿ ತನ್ನ ತಕ್ಷಣದ ಚಾಣಾಕ್ಷ ನಡೆಯಾಗಿ ಸದರಿ ನಾಟಕವಾಡಿರಬಹುದಾದ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ದೇಶದಲ್ಲಿ ಭುಗಿಲೆದ್ದಿರುವ ಈ ಆಡಳಿತ ವಿರೋಧಿ ಅಲೆಯು ಹಿನ್ನೆಲೆಗೆ ಸರಿಯಲು ಬಿಡಬಾರದು. ಕಡಿದಷ್ಟೆ ಕೆರೆದುಕೊಳ್ಳುವ ಚಾಳಿ ಇದಾಗಬಾರದು ಎಂದರೆ ಹೋರಾಟದಲ್ಲಿ ಅಣಿ ನೆರೆದಿದ್ದ SFI, AISF, AISA ಇನ್ನಿತರ ವಿದ್ಯಾರ್ಥಿ ಸಂಘಟನೆಗಳು, ವಿವಿಧ ರಾಜಕೀಯ ಪಕ್ಷಗಳು, ಸಾಮಾಜಿಕ ಹೋರಾಟಗಾರರು, ಸಂವೇದನಾಶೀಲ ಕಲಾವಿದರು, ಚಿತ್ರನಟರು, ಅಕೊಡೆಮಿಷಿಯನ್‌ಗಳು ತಮ್ಮ ಭಿನ್ನಾಭಿಪ್ರಾಯ ಮತ್ತು ಅಲ್ಪ ತೃಪ್ತಿಯನ್ನು ಬಿಟ್ಟು ಐಕ್ಯ ಸಮರಧೀರ ಹೋರಾಟದಲ್ಲಿ ತೊಡಗಿಸಿಕೊಳ್ಳಬೇಕು. ಇದು ಕಾಲದ ಕರೆ. ವಿಶಾಲವಾದ ವೇದಿಕೆಯಡಿಯಲ್ಲಿ ಒಗ್ಗೂಡಿ ದೇಶವ್ಯಾಪಿ ಆಂದೋಲನ ನಡೆಸಲು ಇದು ಸಕಾಲ. ಸಂಘ ಪರಿವಾರದ ದಮನಕಾರಿ ನಡೆಯನ್ನು ಅರ್ಥೈಸಿಕೊಂಡು ಮುನ್ನುಗ್ಗುತ್ತ ಅವರನ್ನು ಬೇರು ಸಹಿತ ಕಿತ್ತು ಹಾಕದಿದ್ದರೆ ಭಾರತಕ್ಕೆ ಭವಿಷ್ಯವಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಡಾ. ಮೀನಾಕ್ಷಿ ಬಾಳಿ

contributor

Similar News