ಬೆಳಗಾವಿ: ಹೆರಿಗೆಗಾಗಿ ತುಂಬು ಗರ್ಭಿಣಿಯನ್ನು ಹೆಗಲ ಮೇಲೆ ಹೊತ್ತೊಯ್ದ ಕುಟುಂಬಸ್ಥರು
ಅಸಮರ್ಪಕ ಮೂಲಭೂತ ಸೌಲಭ್ಯಗಳ ಬಗ್ಗೆ ಅಡಹಳಟ್ಟಿ ಗ್ರಾಮಸ್ಥರ ಅಸಮಾಧಾನ
ಬೆಳಗಾವಿ: ಹೆರಿಗೆ ನೋವಿನಿಂದ ನರಳುತ್ತಿದ್ದ ಗರ್ಭಿಣಿಯನ್ನು ಮುಖ್ಯ ರಸ್ತೆ ವರೆಗೂ ಹೆಗಲ ಮೇಲೆ ಹೊತ್ತುಕೊಂಡು ಹೋಗಿ ನಂತರ ಆಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸಿದ ಘಟನೆ ಅಥಣಿ ತಾಲೂಕಿನ ಅಡಹಳಟ್ಟಿ ಗ್ರಾಮದಲ್ಲಿ ನಡೆದಿದೆ.
ನಿರಂತರ ಮಳೆಯಿಂದಾಗಿ ಗ್ರಾಮದ ನಾಯಕ ತೋಟದ ವಸತಿ ರಸ್ತೆ , ಹೊಂಡ ಗುಂಡಿಗಳು ತುಂಬಿ ಕೆಸರುಮಯವಾಗಿದ್ದು, ಆಸ್ಪತ್ರೆಗೆ ಕೊಂಡೊಯ್ಯಲು ಕುಟುಂಬ ಅಂಬ್ಯುಲೆನ್ಸ್ ಕರೆದರೂ, ವಾಹನ ಮನೆ ಬಾಗಿಲಿಗೆ ತಲುಪಲಿಲ್ಲ ಎಂದು ತಿಳಿದು ಬಂದಿದೆ.
“ ಬೆಳಗಾವಿ ಜಿಲ್ಲೆಯಲ್ಲೇ ಇಬ್ಬರು ಸಚಿವರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಹಾಗೂ ಲೋಕೋಪಯೋಗಿ ಸಚಿವರು ಇದ್ದರೂ, ಮೂಲಭೂತ ಸೌಲಭ್ಯಗಳು ಇನ್ನೂ ದೂರದ ಕನಸು. ಎಷ್ಟು ಬಾರಿ ಗ್ರಾಮ ಪಂಚಾಯಿತಿಗೆ ಹೇಳಿದ್ರೂ ರಸ್ತೆ ಸರಿಪಡಿಸೋ ಕೆಲಸವೇ ಆಗಲ್ಲ. ನಮ್ಮ ನೋವು ಯಾರಿಗೂ ಕಾಣುತ್ತಿಲ್ಲ” ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಜನರ ಬಲಿ ಆಗುವವರೆಗೂ ಅಧಿಕಾರಿಗಳು ಎಚ್ಚೆತ್ತುಕೊಳ್ಳುವುದಿಲ್ಲವೇ?” ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.