Belagavi | ತಳ್ಳುಗಾಡಿ ತಂದು ಎಟಿಎಂ ಯಂತ್ರವನ್ನೇ ಹೊತ್ತೊಯ್ದ ದುಷ್ಕರ್ಮಿಗಳು; ಸಿಸಿಟಿವಿಯಲ್ಲಿ ದೃಶ್ಯ ಸೆರೆ
Update: 2025-12-02 15:23 IST
ಬೆಳಗಾವಿ : ಬೆಳಗಾವಿ ತಾಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ–48ಕ್ಕೆ ಹೊಂದಿಕೊಂಡಿರುವ ಇಂಡಿಯಾ ಬ್ಯಾಂಕ್ ಎಟಿಎಂಗೆ ಮೂವರು ದುಷ್ಕರ್ಮಿಗಳು ಮಧ್ಯರಾತ್ರಿ ಕನ್ನ ಹಾಕಿ ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ.
ದುಷ್ಕರ್ಮಿಗಳು ಮೊದಲು ಎಟಿಎಂ ಒಳಗಿನ ಸೆನ್ಸಾರ್‌ಗೆ ಶಬ್ದ ಸಿಗದಂತೆ ಯಂತ್ರವನ್ನು ನಿಷ್ಕ್ರೀಯಗೊಳಿಸಿದ್ದರು. ನಂತರ ಎಟಿಎಂ ಯಂತ್ರವನ್ನು ಹೊರತೆಗೆದು ತಳ್ಳುಗಾಡಿಯಲ್ಲಿ ಇರಿಸಿ ಸುಮಾರು 200 ಮೀಟರ್ ದೂರ ತಳ್ಳಿಕೊಂಡು ಹೋಗಿದ್ದಾರೆ. ಬಳಿಕ ತಮ್ಮ ವಾಹನದಲ್ಲಿ ಯಂತ್ರವನ್ನು ಇರಿಸಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಎಟಿಎಂ ಬಳಿ ತಳ್ಳುಗಾಡಿಯನ್ನು ಮೊದಲು ತಂದು ನಿಲ್ಲಿಸಿದ ಕಳ್ಳರ ಕೈಚಳಕ ಸಿಸಿಟಿವಿ ದೃಶ್ಯಗಳಲ್ಲಿ ಸ್ಪಷ್ಟವಾಗಿದೆ. ಎಟಿಎಂ ಯಂತ್ರದಲ್ಲಿ ಒಂದು ಲಕ್ಷಕ್ಕೂ ಅಧಿಕ ಹಣ ಇದ್ದುದಾಗಿ ಮೂಲಗಳು ತಿಳಿಸಿವೆ.
ಘಟನಾ ಸ್ಥಳಕ್ಕೆ ಕಾಕತಿ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ತನಿಖೆ ಮುಂದುವರೆದಿದೆ.