ಬೆಳಗಾವಿ | ಪುರಸಭೆ ಅಧಿಕಾರಿಗಳ ದೌರ್ಜನ್ಯ ಆರೋಪ; ಬೈಲಹೊಂಗಲದಲ್ಲಿ ವ್ಯಾಪಾರ ಬಂದ್
ಬೆಳಗಾವಿ : ‘‘ಪ್ಲಾಸ್ಟಿಕ್ ಬಳಕೆ ತಡೆಯುವ ನೆಪದಲ್ಲಿ ಪುರಸಭೆ ಅಧಿಕಾರಿಗಳು ದೌರ್ಜನ್ಯ ನಡೆಸುತ್ತಿದ್ದಾರೆ’’ ಎಂಬ ವ್ಯಾಪಾರಿಗಳ ಆಕ್ರೋಶದ ನಡುವೆ ಬೈಲಹೊಂಗಲ ಪಟ್ಟಣದಲ್ಲಿ ಬುಧವಾರ ಅಂಗಡಿ-ಮುಂಗಟ್ಟುಗಳು ಸ್ವಯಂಪ್ರೇರಿತವಾಗಿ ಬಂದ್ ಆಗಿದ್ದು, ಪಟ್ಟಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.
ಪ್ರತಿಭಟನಾಕಾರರು ಪುರಸಭೆ ಕಚೇರಿಗೆ ಮುತ್ತಿಗೆ ಹಾಕಿ, ಮುಖ್ಯಾಧಿಕಾರಿ ವೀರೇಶ ಹಸಬಿ ಮತ್ತು ಕಿರಿಯ ಆರೋಗ್ಯ ನಿರೀಕ್ಷಕ ಸುರೇಶ ಪಾಟೀಲ ವಿರುದ್ಧ ಘೋಷಣೆಗಳನ್ನು ಕೂಗಿದರು. ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.
ವ್ಯಾಪಾರಿಗಳು, ‘‘ಪುರಸಭೆ ಸಿಬ್ಬಂದಿ ಹೋಟೆಲ್, ಅಂಗಡಿ, ತಳ್ಳುಗಾಡಿಗಳನ್ನು ಬಿಡದೆ ಹಣ ವಸೂಲಿ ಮಾಡುತ್ತಿದ್ದಾರೆ. ಯಾವುದೇ ನೋಟಿಸ್ ನೀಡದೇ ಲಕ್ಷಾಂತರ ಮೌಲ್ಯದ ಪ್ಲಾಸ್ಟಿಕ್ ವಶಪಡಿಸಿಕೊಂಡಿದ್ದಾರೆ. ದಂಡದ ಹೆಸರಿನಲ್ಲಿ ಸಿಬ್ಬಂದಿ ಹೆಚ್ಚುವರಿ ಹಣ ಕೇಳುತ್ತಿದ್ದಾರೆ’’ ಎಂದು ಆರೋಪಿಸಿದರು.
ಪುರಸಭೆ ಅಧಿಕಾರಿಗಳು ಮತ್ತು ವ್ಯಾಪಾರಸ್ಥರ ನಡುವೆ ಚರ್ಚೆ ನಡೆದು ಸ್ಥಿತಿ ಉದ್ವಿಗ್ನಗೊಂಡಿತು. ಮುಖ್ಯಾಧಿಕಾರಿ ಮತ್ತು ಆರೋಗ್ಯ ನಿರೀಕ್ಷಕರು ಕಚೇರಿಯಿಂದ ಹೊರಬಂದ ಕ್ಷಣ, ವ್ಯಾಪಾರಿಗಳು ಧರಣಿ ಆರಂಭಿಸಿದರು.
ನಂತರ ಪುರಸಭೆ ಅಧ್ಯಕ್ಷ ವಿಜಯ ಬೋಳನ್ನವರ ಹಾಗೂ ಬಿಜೆಪಿ ನಾಯಕ ಗುರು ಮೆಟಗುಡ್ಡ ಮಧ್ಯಪ್ರವೇಶಿಸಿ ಧರಣಿನಿರತರನ್ನು ಸಮಾಧಾನ ಪಡಿಸಿದರು. ಪುರಸಭೆಯ ಇತರ ಅಧಿಕಾರಿಗಳು ಕ್ಷಮೆ ಕೇಳಿದ ಬಳಿಕ ವ್ಯಾಪಾರಿಗಳು ಹೋರಾಟ ಕೈಬಿಟ್ಟರು.
ಈ ಪ್ರತಿಭಟನೆಯಲ್ಲಿ ಕಿರಾಣಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಸುಭಾಷ್‌ಬಾಗೇವಾಡಿ, ಸುರೇಶ ವಾಲಿ, ಶಿವನಾಗ ಅವಕ್ಕನ, ಮಹಾಂತೇಶ ವಾಲಿ ಮತ್ತಿತರ ವ್ಯಾಪಾರಿಗಳು ಭಾಗವಹಿಸಿದ್ದರು.