BELAGAVI | ಮಹಾಂತೇಶ ಬೀಳಗಿ ಅಪಘಾತದಲ್ಲಿ ಮೃತ್ಯು; ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆಗೆ ಆದೇಶ
ಬೆಳಗಾವಿ: ಕಲಬುರಗಿ ಜಿಲ್ಲೆಯ ಜೇವರ್ಗಿಯ ಗೌನಹಳ್ಳಿ ಬಳಿ ಮಂಗಳವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲು ಆದೇಶಿಸಲಾಗಿದೆ.
ಈ ಕುರಿತು ರಾಜ್ಯಸರ್ಕಾರದ ಪರವಾಗಿ ಸಿಆಸುಇ (ರಾಜ್ಯ ಶಿಷ್ಟಾಚಾರ) ಸರ್ಕಾರದ ಅಧೀನ ಕಾರ್ಯದರ್ಶಿ-1(ಪ್ರ) ಬಾಣದರಂಗಯ್ಯ.ಎನ್.ಆರ್ ಅವರು ಅಧಿಸೂಚನೆ ಹೊರಡಿಸಿದ್ದಾರೆ.
"ಮಹಾಂತೇಶ ಬೀಳಗಿ, ಹಿರಿಯ ಭಾರತೀಯ ಆಡಳಿತ ಸೇವೆ ಅಧಿಕಾರಿಗಳು ಹಾಗೂ ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ಖನಿಜ ನಿಗಮ ನಿಯಮಿತ, ಇವರು ದಿನಾಂಕ:25.11.2025ರಂದು ನಿಧನರಾಗಿರುತ್ತಾರೆ. ಸದರಿಯವರ ನಿಧನಕ್ಕೆ ಸರ್ಕಾರವು ತೀವು ಸಂತಾಪವನ್ನು ವ್ಯಕ್ತಪಡಿಸುತ್ತದೆ. ಮೃತರ ಗೌರವಾರ್ಥ ಅಂತ್ಯಕ್ರಿಯೆಯನ್ನು ಪೊಲೀಸ್ ಗೌರವಗಳೊಂದಿಗೆ ನೆರವೇರಿಸಲು ಆದೇಶಿಸಲಾಗಿದೆ" ಎಂದು ಆದೇಶ ಪ್ರತಿಯಲ್ಲಿ ತಿಳಿಸಿದ್ದಾರೆ.
ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಅವರ ಮೃತದೇಹವನ್ನು ಅವರ ಹುಟ್ಟೂರಾದ ರಾಮದುರ್ಗ ಪಟ್ಟಣದ ನವಿಪೇಟಕ್ಕೆ ತರಲಾಗಿದೆ.
ಕಲುಬರಗಿಯಿಂದ ರಾಮದುರ್ಗಕ್ಕೆ ತಲುಪಿದ ಮೃತದೇಹವನ್ನು ಕುಟುಂಬಸ್ಥರು ಕಣ್ಣೀರಿನ ನಡುವೆ ಸ್ವೀಕರಿಸಿದರು. ರಾಮದುರ್ಗದ ಪಂಚಗಟ್ಟಿ ಮಠದಲ್ಲಿ ಅಪರಾಹ್ನ 2ರವರೆಗೆ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.