ಬೆಳಗಾವಿ | ವಂಟಮೂರಿ ಸರಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಬಾಣಂತಿ ಮೃತ್ಯು
ನಿಖಿತಾ ಮಾದರ (24)
ಬೆಳಗಾವಿ, ಆ.30 : ನಗರದ ವಂಟಮೂರಿ ಸರಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ ಕೆಲವೇ ಕ್ಷಣಗಳಲ್ಲಿ ತಾಯಿ ಮೃತಪಟ್ಟಿರುವ ಘಟನೆ ನಿನ್ನೆ(ಆ.29) ರಾತ್ರಿ ನಡೆದಿದೆ.
ಮೃತ ಬಾಣಂತಿಯನ್ನು ನಿಖಿತಾ ಮಾದರ (24) ಎಂದು ಗುರುತಿಸಲಾಗಿದೆ.
ಘಟನೆಯ ವಿವರ:
ಶುಕ್ರವಾರ ರಾತ್ರಿ ತೀವ್ರ ಹೆರಿಗೆ ನೋವಿನಿಂದ ಬಳಲುತ್ತಿದ್ದ ನಿಖಿತಾ ಅವರನ್ನು ಕುಟುಂಬದವರು ವಂಟಮೂರಿ ಸರಕಾರಿ ಹೆರಿಗೆ ಆಸ್ಪತ್ರೆಗೆ ದಾಖಲಿಸಿದರು. ರಾತ್ರಿ 8 ಗಂಟೆ ಸುಮಾರಿಗೆ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದು, ಹೆರಿಗೆ ಆಗಿದೆ. ಆದರೆ ಶಸ್ತ್ರಚಿಕಿತ್ಸೆಯ ಬಳಿಕ ನಿಖಿತಾ ಅವರ ಆರೋಗ್ಯದಲ್ಲಿ ಏರುಪೇರು ಆಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ತಾಯಿ ಮೃತಟಪಟ್ಟಿದ್ದಾರೆ ಎನ್ನಲಾಗಿದೆ.
ಪೋಷಕರ ಆಕ್ರಂದನ:
“ನಮ್ಮ ಮಗಳ ಜೀವ ವೈದ್ಯರ ನಿರ್ಲಕ್ಷ್ಯದಿಂದ ಹೋಯಿತು. ವೈದ್ಯರು ಸ್ಥಳಕ್ಕೆ ಬಂದು ಉತ್ತರಿಸಬೇಕು” ಎಂದು ಮೃತ ನಿಖಿತಾ ಪೋಷಕರು ಆಗ್ರಹಿಸಿದರು. ಮಗಳು ತಾಯಿಯಾಗುತ್ತಿದ್ದ ಸಂತೋಷ ಕ್ಷಣಗಳೇ ಅಂತಿಮ ಕ್ಷಣಗಳಾದವು. ಕಂದಮ್ಮನನ್ನು ಮಡಿಲಲ್ಲಿ ಹಿಡಿದುಕೊಂಡು ನಿಖಿತಾಳ ಪೋಷಕರು ನ್ಯಾಯಕ್ಕಾಗಿ ಒತ್ತಾಯಿಸಿದರು.