×
Ad

ಬೆಳಗಾವಿ: ಮಂಚದ ಪೆಟ್ಟಿಗೆಯಲ್ಲಿ ಮಹಿಳೆಯ‌ ಮೃತದೇಹ ಪತ್ತೆ; ಪತಿ ಪರಾರಿ

Update: 2025-10-09 14:33 IST

ಬೆಳಗಾವಿ: ಮಂಚದ ಪೆಟ್ಟಿಗೆಯಲ್ಲಿ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಬುಧವಾರ ಮೂಡಲಗಿ ತಾಲೂಕಿನ ಕಮಲದಿನ್ನಿ ಗ್ರಾಮದಲ್ಲಿ ನಡೆದಿದೆ.

ಮೂಡಲಗಿ ತಾಲೂಕಿನ ಕಮಲದಿನ್ನಿ ಗ್ರಾಮದ ಮಡ್ಡಿ ಪ್ಲಾಟ್ ನಿವಾಸಿ ಆಕಾಶ್ ಸದಾಶಿವ ಕಂಬಾರ (24) ಎಂಬಾತನ ಪತ್ನಿ ಸಾಕ್ಷಿ ಮೃತ ಮಹಿಳೆ. ಪತ್ನಿಯನ್ನು ಕೊಂದ ಆಕಾಶ್ ಆಕೆಯ ಶವವನ್ನು ಮಂಚದ ಕೆಳಗೆ ಇರುವ ಪೆಟ್ಟಿಗೆಯಲ್ಲಿ ಬಚ್ಚಿಟ್ಟು, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾನೆ. 

ಬುಧವಾರ ಸಂಜೆ ಆಕಾಶನ ತಾಯಿ ಮನೆಗೆ ಬಂದ ವೇಳೆ ಮನೆಯಲ್ಲಿ ದುರ್ವಾಸನೆ ಬರುತ್ತಿರುವ ಹಿನ್ನೆಲೆ ಮಂಚದ ಕೆಳಗೆ ಇರುವ ಪೆಟ್ಟಿಗೆಯನ್ನು ತೆರೆದು ನೋಡಿದಾಗ ಶವ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಗೋಕಾಕ್ ಡಿವೈಎಸ್ಪಿ ರವಿ ನಾಯಕ ಹಾಗೂ ಸಿಪಿಐ ಶ್ರೀಶೈಲ್ ಬ್ಯಾಕೂಡ, ಪಿಎಸ್ಐ ರಾಜು ಪೂಜೇರಿ ಭೇಟಿ ಪರಿಶೀಲನೆ ಮಾಡಿ ಆರೋಪಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

2025 ಮೇ 24 ರಂದು ಆಕಾಶ್ ಮತ್ತು ಸಾಕ್ಷಿ ಮದುವೆಯಾಗಿದ್ದರು. ಮನೆಯಲ್ಲಿ ಆಕಾಶ್, ಸಾಕ್ಷಿ ಮತ್ತು ಆತನ ತಂದೆ ತಾಯಿ ವಾಸವಿದ್ದರು. ಘಟನೆ ವೇಳೆ ತಾನು ಊರಿಗೆ ಹೋಗಿರುವುದಾಗಿ ಸಾಕ್ಷಿಯ ಅತ್ತೆ ಶೋಭಾ ಅವರು ಪೊಲೀಸ್ ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾರೆ.

ಮನೆಯಲ್ಲಿ ಮಾವ ಸದಾಶಿವ ಹಾಗೂ ಮೃತಳ ಪತಿ ಆಕಾಶ್ ಮನೆಯಲ್ಲಿ ಇದ್ದರು. ಆದರೆ ಸಾಕ್ಷಿಯ ದೇಹ ದುರ್ವಾಸನೆ ಬರುವವರೆಗೂ ಮಾವ ಸದಾಶಿವ ಏನು ಮಾಡುತ್ತಿದ್ದ ಎಂಬುವುದೇ  ಯಕ್ಷಪ್ರಶ್ನೆಯಾಗಿದೆ.

ಇನ್ನೊಂದೆಡೆ ಗಂಡ ಆಕಾಶ್, ಅತ್ತೆ ಶೋಭಾ, ಮಾವ ಸದಾಶಿವ, ನಾದಿನಿ ಪಲ್ಲವಿ, ನಾದಿನಿಯ ಗಂಡ ಆನಂದ್, ಸ್ಥಳೀಯ ಗ್ರಾಮದವನಾದ ಕಾಡೇಶ್ ನಾವಿ ಇವರೆಲ್ಲರೂ  ನನ್ನ ಮಗಳಿಗೆ ಇವರೆಲ್ಲರೂ  ವರದಕ್ಷಿಣೆಗಾಗಿ ತಮ್ಮ ಮಗಳಿಗೆ ಕಿರುಕುಳ ನೀಡುತ್ತಿದ್ದರು ಎಂದು ಮೃತಳ ಕುಟುಂಬಸ್ಥರು ಮೂಡಲಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕೊಲೆ ಮಾಡಿದ ಆಕಾಶ್ ಮಂಗಳವಾರ ಸಂಜೆ ಊರಲ್ಲೇ ಇದ್ದ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಗಳಾಗುತ್ತಿವೆ ಹಾಗಾಗಿ ಸಾಕ್ಷಿ ಸಾವಿನ ಸುತ್ತ ಅನುಮಾನಗಳು ಹುಟ್ಟಿಕೊಂಡಿವೆ. ಸಾಕ್ಷಿ ಕೊಲೆಗೆ ನಿಖರ ಕಾರಣ ಪೊಲೀಸ್ ತನಿಖೆಯಿಂದಲೇ ತಿಳಿಯಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News