21 ಎಕರೆ ಜಮೀನು ಕಬಳಿಕೆ: ಸಚಿವ ಕೃಷ್ಣಬೈರೇಗೌಡ ವಿರುದ್ಧ ಬಿಜೆಪಿ ಆರೋಪ
ಕೃಷ್ಣಬೈರೇಗೌಡ
ಬೆಳಗಾವಿ : ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಕೋಲಾರ ಜಿಲ್ಲೆಯ ನರಸಪುರ ಹೋಬಳಿ ಗರುಡನಪಾಳ್ಯದಲ್ಲಿ 21 ಎಕರೆ ಜಮೀನು ಕಬಳಿಸಿದ್ದಾರೆ. ನಕಲಿ ದಾಖಲೆ ಸೃಷ್ಟಿ ಮಾಡಿ ಅಧಿಕಾರ ದುರ್ಬಳಕೆ ಮಾಡಿಕೊಂಡಿರುವುದಾಗಿ ಪ್ರತಿಪಕ್ಷ ನಾಯಕರು ಗಂಭೀರ ಆರೋಪ ಮಾಡಿದ್ದಾರೆ.
ಬುಧವಾರ ಬೆಳಗಾವಿ ನಗರದಲ್ಲಿ ಬಿಜೆಪಿ ಮುಖಂಡ ತಮ್ಮೇಶ ಗೌಡ, ಸಚಿವ ಕೃಷ್ಣಬೈರೇಗೌಡರು ನಕಲಿ ದಾಖಲೆ ಸೃಷ್ಟಿಸಿ ಭೂ ಕಬಳಿಸಿವುದಕ್ಕೆ ಕೆಲ ದಾಖಲೆಗಳನ್ನು ಬಿಡುಗಡೆ ಮಾಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ವೈಟ್ ಕಾಲರ್ ರಾಜಕಾರಣಿ, ಭ್ರಷ್ಟಾಚಾರ ಇಲ್ಲ ಎನ್ನುವ ಮಂತ್ರಿ ಕೃಷ್ಣಬೈರೇಗೌಡ. ಆದರೆ, ನಕಲಿ ದಾಖಲೆ ಸೃಷ್ಟಿಸಿ ಕಂದಾಯ ಸಚಿವರು ಖರಾಬ್ ಜಮೀನನ್ನು ಅವರ ಹೆಸರಿಗೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಇದೇ ವೇಳೆ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಪರಿಷತ್ ಸದಸ್ಯ ಎನ್.ರವಿಕುಮಾರ್ ಮಾತನಾಡಿದರು.
ಪಿತ್ರಾರ್ಜಿತ ಆಸ್ತಿ: ಕೃಷ್ಣಬೈರೇಗೌಡ ಸ್ಪಷ್ಟನೆ
ಆರೋಪಕ್ಕೆ ಪ್ರತಿಕ್ರಿಯಿಸಿರುವ ಕೃಷ್ಣಬೈರೇಗೌಡ, ಅದು ನಮ್ಮ ಪಿತ್ರಾರ್ಜಿತ ಆಸ್ತಿ. ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆಯಾಗಲಿ. ನಾನೇ ತನಿಖೆಗೆ ಸಹಕಾರ ಮಾಡುತ್ತೇನೆ. ಲೋಕಾಯುಕ್ತಕ್ಕೆ ದೂರು ಕೊಡಲಿ. ಸರಕಾರವೇ ತನಿಖೆ ಮಾಡಿದರೆ ನೀವೇ ಮಂತ್ರಿ, ನೀವೇ ತನಿಖೆ ಮಾಡುವುದು ಸರಿಯಾ ಎನ್ನುತ್ತೀರಾ. ಅದು ನಮ್ಮ ತಾತನವರ ಜಾಗ, ಅವರಿಂದ ನಮ್ಮ ತಂದೆಯವರಿಗೆ ಬಂದಿರುವುದು. ಆಗ ನಾನು ಐದು ವರ್ಷದ ಮಗು. ನಮ್ಮ ತಾತನಿಗೆ ಮೂರು ಜನ ಮಕ್ಕಳು. ಅವರಿಗೆ ವಿಭಾಗವಾಗಿ ನಮಗೆ ಬಂದಿದೆ ಎಂದು ಸ್ಪಷ್ಟಪಡಿಸಿದರು.
ರಾಜಕೀಯ ಕೆಸರೆರಚಾಟಕ್ಕೆ ವಿಪಕ್ಷದವರು ಆರೋಪ ಮಾಡಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಅಷ್ಟೋ, ಇಷ್ಟೋ ತಲೆ ಎತ್ತಿಕೊಂಡು ಇದ್ದೇವೆ. ಅದಕ್ಕಾಗಿ ಆರೋಪ ಮಾಡುತ್ತಿದ್ದಾರೆ. ನಮಗೆ ಪಿತ್ರಾರ್ಜಿತ ಆಸ್ತಿಯಾಗಿ ಬಂದಿದ್ದು ನಾನ್ಯಾಕೆ ದೂರು ನೀಡಲಿ. ಕಾನೂನು ಪ್ರಕಾರ ರಾಜಕೀಯದಲ್ಲಿ ಘನತೆ ಗೌರವದಿಂದ ಇದ್ದೇವೆ ಎಂದು ಕೃಷ್ಣಬೈರೇಗೌಡ ತಿರುಗೇಟು ನೀಡಿದರು.