ಆರೋಗ್ಯದಲ್ಲಿ ಏರುಪೇರು; ಕಲಾಪಗಳಿಂದ ದೂರ ಉಳಿದ ಸಿಎಂ
ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಗ್ಯದಲ್ಲಿ ತುಸು ಏರುಪೇರಾದ ಕಾರಣ, ಬುಧವಾರ ಅವರು ಸದನ ಕಲಾಪಗಳಿಂದ ದೂರ ಉಳಿದರು. ನಗರದ ಪ್ರವಾಸಿ ಮಂದಿರದಲ್ಲೇ ಇಡೀ ದಿನ ವಿಶ್ರಾಂತಿ ಪಡೆದರು. ಮುಖ್ಯಮಂತ್ರಿಗಳ ಆರೋಗ್ಯ ವಿಚಾರಿಸಲು ಹಲವು ನಾಯಕರು ದೌಡಾಯಿಸಿದ್ದರು.
ಕೇಂದ್ರ ಸರಕಾರವು ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ವಿರುದ್ಧ ಮಾಡುತ್ತಿರುವ ದ್ವೇಷ ರಾಜಕಾರಣ ಖಂಡಿಸಿ, ಇಲ್ಲಿನ ಸುವರ್ಣ ವಿಧಾನಸೌಧ ಬಳಿಯ ಗಾಂಧಿ ಪ್ರತಿಮೆ ಇಂದು ಬೆಳಗ್ಗೆ ನಡೆದ ಪ್ರತಿಭಟನೆಯಲ್ಲಿ ಸಿದ್ದರಾಮಯ್ಯ ಪಾಲ್ಗೊಂಡಿದ್ದರು. ಅದಾದ ಬಳಿಕ ಸದನದೊಳಗೆ ಹೋದರು. ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ವಿಶ್ರಾಂತಿ ಪಡೆಯಲು ಪ್ರವಾಸಿ ಮಂದಿರಕ್ಕೆ ಆಗಮಿಸಿದರು.
ಈ ಹಿನ್ನೆಲೆಯಲ್ಲಿ ಪುತ್ರ, ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ, ಸಚಿವ ಬೈರತಿ ಸುರೇಶ್, ಮಾಜಿ ಸಚಿವರಾದ ರಮೇಶ ಜಾರಕಿಹೊಳಿ, ಜಿ.ಟಿ.ದೇವೇಗೌಡ ಸೇರಿ ಹಲವು ನಾಯಕರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಸಿದ್ದರಾಮಯ್ಯ ಅವರಿಗೆ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಂಜೆಯವರೆಗೆ ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ.
ಸಿಎಂ ಆರೋಗ್ಯ ವಿಚಾರಿಸಿ ವಾಪಸ್ ಆದ ಬಳಿಕ ಮಾಧ್ಯಮದವರ ಜೊತೆಗೆ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, ''ತಂದೆಯವರ ಆರೋಗ್ಯ ಚೆನ್ನಾಗಿದೆ, ಗ್ಯಾಸ್ಟ್ರೋಕೇಷನ್ ಇನ್ಫೆಕ್ಷನ್ ಆಗಿದೆ. ಡೈರಿಯಾ ಸಮಸ್ಯೆ ತರಹ ಇದೆ. ವೈದ್ಯರು ತಪಾಸಣೆ ನಡೆಸಿ ಮಾತ್ರೆಗಳನ್ನು ಕೊಟ್ಟಿದ್ದಾರೆ. ತಂದೆಯವರು ವಿಶ್ರಾಂತಿ ಪಡೆಯುತ್ತಿದ್ದು, ನಾಳೆ ಅಧಿವೇಶನಕ್ಕೆ ಬರುತ್ತಾರೆ'' ಎಂದು ಹೇಳಿದರು.